“ನಮ್ಮೂರಿನ ರಸ್ತೆ ಸರಿ ಇಲ್ಲ. ರಸ್ತೆ ಮಾಡದೇ ಇದ್ದಲ್ಲಿ ಮುಂಬರುವ ಸ್ಥಳೀಯ ಪಂಚಾಯತ್ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ. ಚುನಾವಣೆಗೆ ಬಹಿಷ್ಕಾರ ಹಾಕುತ್ತೇವೆ..”…ಹೀಗಂತ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಗ್ರಾಮಸ್ಥರು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಹೌದು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಾಲೂರ್ ಕೋಳಿಗೆ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗಾರ್ಡಗದ್ದೆ ಗ್ರಾಮದಿಂದ ಹುರುಳಿ, ತೆಮ್ಮೆ ಮನೆ ರಸ್ತೆ ಮಾರ್ಗ ಸಂಪೂರ್ಣ ಹದಗೆಟ್ಟಿದೆ. ಈ ಬಗ್ಗೆ ಈಗಾಗಲೇ ಎಷ್ಟೇ ಬಾರಿ ಮನವಿ ಮಾಡಿಯೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಈ ರೀತಿಯ ಎಚ್ಚರಿಕೆಯನ್ನು ನೀಡಿದ್ದಾರೆ.
“ನಮ್ಮ ಊರಿನ ರಸ್ತೆಯ ಅವ್ಯವಸ್ಥೆಯ ಸಂಬಂಧ ಸ್ಥಳೀಯರು ಹಲವಾರು ಬಾರಿ ಗ್ರಾಮ ಪಂಚಾಯತ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು, ಹಾಗೂ ಸ್ಥಳೀಯ ಶಾಸಕರ ಗಮನಕ್ಕೆ ಸರಿಪಡಿಸಿಕೊಡಿ ಎಂದು ತುಂಬಾ ಸಲ ಕೇಳಿಕೊಂಡಿದ್ದೇವೆ. ಆದರೆ, ಇಲ್ಲಿಯವರೆಗೂ ಯಾವುದೇ ರೀತಿಯ ಸ್ಪಂದನೆ ಬಂದಿರುವುದಿಲ್ಲ” ಎಂದು ಸ್ಥಳೀಯರಾದ ಗಿರೀಶ್ ಅವರು ಈದಿನ ಡಾಟ್ ಕಾಮ್‌ಗೆ ಮಾಹಿತಿ ನೀಡಿದರು.
“ನಮ್ಮೂರಿಗೆ ರಸ್ತೆ ಆಗದಿದ್ದಲ್ಲಿ ಮುಂಬರುವ ಪಂಚಾಯತ್ ಚುನಾವಣೆ ಬಹಿಷ್ಕಾರ ಮಾಡುವುದು ಶತಸಿದ್ದ. ಇದು ನಮ್ಮೂರಿನ ಪ್ರತಿಯೊಬ್ಬ ನಾಗರಿಕರ ಅಭಿಪ್ರಾಯವಾಗಿದೆ. ಹೀಗಾಗಿ ನಮ್ಮೂರಿಗೆ ರಸ್ತೆ ಮಾಡಿಸಿಕೊಡಲು ನಿಮ್ಮ ಮಾಧ್ಯಮದ ಮೂಲಕ ಮನವಿ ಮಾಡುತ್ತಿದ್ದೇವೆ” ಎಂದು ಗಿರೀಶ್ ತಿಳಿಸಿದರು.

ಈ ಸಂಬಂಧ ಪಿಡಿಒ ವಿಶಾಲ ಮಾತನಾಡಿ, “ನಾನು ಇಲ್ಲಿಗೆ ಅಧಿಕಾರಿಯಾಗಿ ಬಂದು 5 ರಿಂದ 6 ವರ್ಷ ಕಳೆದಿದೆ. ಅಂದಿನಿಂದಲು ಈ ಊರಿನಲ್ಲಿ ರಸ್ತೆ ಸಮಸ್ಯೆಯಿದೆ, ಈ ಸಂಬಂಧ ಹಲವಾರು ಬಾರಿ ಮೇಲಧಿಕಾರಿಗಳಿಗೆ ಮನವಿ ನೀಡಲಾಗಿದೆ. ಆದರೂ ಸಹ ಏನು ಸ್ಪಂದನೆ ಸಿಗುತ್ತಿಲ್ಲ” ಎಂದು ತಿಳಿಸಿದರು.
“ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸಣ್ಣಪುಟ್ಟ ಅನುದಾನದಿಂದ ಮಣ್ಣು ಹಾಕಿ ಗುಂಡಿ ಮುಚ್ಚುವ ರೀತಿ ಹಲವಾರು ಬಾರಿ ಮಾಡಿದ್ದೇವೆ. ಆದರೆ ಡಾಂಬರಿಕರಣ ಆಗಬೇಕು ಅಂದರೆ ಅದು ನಮ್ಮಿಂದ ಆಗುವುದಿಲ್ಲ. ಅಷ್ಟು ದೊಡ್ಡ ಮಟ್ಟದ ಹಣ ನಮಗೆ ಬರುವುದಿಲ್ಲ, ಇಲ್ಲಿಯವರೆಗೆ ಕೊಟ್ಟಿರುವ ಮನವಿ ಪತ್ರ ಹಾಗೂ ಎಲ್ಲ ದಾಖಲೆಗಳನ್ನು ಮತ್ತೊಮ್ಮೆ ಮೇಲಧಿಕಾರಿಗಳಿಗೆ ಕಳುಹಿಸಿಕೊಡುತ್ತೇನೆ. ಜೊತೆಗೆ ಇಲ್ಲಿ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ, ಅನಾರೋಗ್ಯ ಪೀಡಿತರಿಗೆ, ವಯೋವೃದ್ಧರಿಗೆ, ಒಟ್ಟಾರೆ ಪ್ರತಿಯೊಬ್ಬರಿಗೂ ಮಳೆಗಾಲದಲ್ಲಿ ವಿಪರೀತ ಸಮಸ್ಯೆ ಎದುರಾಗುತ್ತಿದೆ. ಇಲ್ಲಿ ಸಂಬಂಧ ರಸ್ತೆ ಆಗಬೇಕು ಎಂಬುದು ನಮ್ಮ ಆಶಯವಾಗಿದೆ. ನಾವು ಸಹ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಈ ಸಂಬಂಧ ಅಧಿಕಾರಿಗಳು ಗಮನವಹಿಸುವ ಮೂಲಕ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕಾಗಿದೆ” ಎಂದು ಮನವಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ವಿಜಯಪುರ | ಶಿಥಿಲಗೊಂಡಿರುವ ಬಂಗಾರ ಗುಂಡಿಯ ಸರ್ಕಾರಿ ಶಾಲೆ: ಜೀವ ಭಯದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು!
ಮುಂದಿನ ದಿನಗಳಲ್ಲಿ ಚುನಾವಣೆ ಬಹಿಷ್ಕಾರ ಆಗುತ್ತಾ? ಇಲ್ಲವೇ ಅಪಘಾತಗಳು ಉಂಟಾಗಿ ಜೀವ ಹಾನಿಯಾಗುವುದಕ್ಕೂ ಮೊದಲು ಅಧಿಕಾರಿಗಳು ಸ್ಪಂದಿಸುತ್ತಾರಾ? ಹಲವಾರು ವರ್ಷಗಳಿಂದ ಇರುವ ಈ ಮೂಲಭೂತ ಸೌಕರ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುತ್ತಾರಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.