ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿಯಲ್ಲಿ ಮೈಸೂರು ದಸರಾ ಭಾಗವಾಗಿ ಕಾಡಿನಿಂದ ಆನೆಗಳನ್ನು ಸ್ವಾಗತಿಸಿ, ಸಾಂಪ್ರದಾಯಿಕ ಗಜಪಯಣ ಕಾರ್ಯಕ್ರಮಕ್ಕೆ ಸಚಿವರಾದ ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್. ಸಿ. ಮಹದೇವಪ್ಪ ಚಾಲನೆ ನೀಡಿದರು.
14 ಆನೆಗಳ ಪೈಕಿ ಮೊದಲಾರ್ಥವಾಗಿ ಅಭಿಮನ್ಯು ನೇತೃತ್ವದ ಭೀಮ, ಕಂಜನ್, ಧನಂಜಯ, ಪ್ರಶಾಂತ, ಮಹೇಂದ್ರ, ಏಕಲವ್ಯ ಹೆಣ್ಣಾನೆಗಳಾದ ಲಕ್ಷ್ಮಿ, ಕಾವೇರಿ ಸೇರಿದಂತೆ ಒಂಬತ್ತು ಆನೆಗಳ ತಂಡ ಮೈಸೂರಿನ ಕಡೆಗೆ ಹೊರಟಿವೆ. ಇನ್ನುಳಿದಂತೆ ಐದು ಆನೆಗಳು ಎರಡನೇ ಹಂತದಲ್ಲಿ ಆಯ್ಕೆಯ ಅನುಸಾರ ತಂಡ ಸೇರಲಿವೆ. ಆನೆಗಳ ಜೊತೆಗೆ ಮಾವುತರು, ಕಾವಾಡಿಗರ 40 ಕುಟುಂಬಗಳು ಸೇರಿದಂತೆ, 120 ಜನ ಸದಸ್ಯರು ತೆರಳಲಿದ್ದಾರೆ.

ತುಲಾ ಲಗ್ನದಲ್ಲಿ 12 – 34 ರಿಂದ 12 – 59 ರ ನಡೆದ ಪೂಜಾ ಕೈಂಕರ್ಯದಲ್ಲಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸಚಿವರು, ಸ್ಥಳೀಯ ಶಾಸಕರು, ತಾಲ್ಲೂಕು ಆಡಳಿತ, ಜಿಲ್ಲಾಡಳಿತ ಅಧಿಕಾರಿಗಳು, ಜನ ಪ್ರತಿನಿದಿಗಳು ಚಾಲನೆ ನೀಡಿದರು. ಈ ಬಾರಿ ವಿಶೇಷವಾಗಿ 11 ದಿನಗಳ ದಸರಾ ನಡೆಯಲಿದ್ದು, ಸೆಪ್ಟೆಂಬರ್. 22 ರ ಬೆಳಗ್ಗೆ 10 – 10 ರಿಂದ 10 – 40 ರ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದಲ್ಲಿ ವೇದಿಕೆ ಕಾರ್ಯಕ್ರಮ ನಡೆದು ದಸರಾ ಉದ್ಘಾಟಕರು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ಅಕ್ಟೋಬರ್. 2 ರ ಮದ್ಯಾನ್ಹ 1 ಗಂಟೆಯಿಂದ 1 – 18 ರ ಧನುರ್ ಲಗ್ನದಲ್ಲಿ ಅರಮನೆ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ನಂದಿ ಪೂಜೆ ನೆರವೇರಿಸುವ ಮೂಲಕ ದಸರಾ ಮೆರವಣಿಗೆಗೆ ಚಾಲನೆ ಸಿಗಲಿದೆ. ಬಳಿಕ ಸಂಜೆ
4 – 42 ರಿಂದ 5 – 06 ರ ಕುಂಭ ಲಗ್ನದ ನಡುವಲ್ಲಿ ಅರಮನೆ ಆವರಣದಲ್ಲಿ ಚಿನ್ನದ ಅಂಬಾರಿಗೆ ದಸರಾ ಉದ್ಘಾಟಕರು, ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ವತಿಯಿಂದ ಚಾಲನೆ ದೊರೆಯಲಿದ್ದು, ಅದೇ ದಿನ ಸಂಜೆ ಬನ್ನಿಮಂಟಪದ ಪಂಜಿನ ಕವಾಯತು ಕಾರ್ಯಕ್ರಮದ ಮೂಲಕ ದಸರಾ ಮಹೋತ್ಸವ ಮುಕ್ತಾಯಗೊಳ್ಳಲಿದೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಸಚಿವ ಈಶ್ವರ್ ಖಂಡ್ರೆಯವರಿಗೆ ಮನವಿ ಸಲ್ಲಿಕೆ

ಗಜಪಯಣ ಕಾರ್ಯಕ್ರಮದಲ್ಲಿ ಸಚಿವರಾದ ಡಾ. ಹೆಚ್. ಸಿ. ಮಹದೇವಪ್ಪ, ಕೆ. ವೆಂಕಟೇಶ್, ಸಂಸದ ಸುನೀಲ್ ಬೋಸ್, ಶಾಸಕರಾದ ಜಿ. ಡಿ. ಹರೀಶ್ ಗೌಡ, ರವಿಶಂಕರ್, ಅನಿಲ್ ಚಿಕ್ಕಮಾದು, ಗ್ಯಾರಂಟಿ ಯೋಜನೆ ರಾಜ್ಯ ಉಪಾಧ್ಯಕ್ಷರಾದ ಡಾ. ಪುಷ್ಪಾ ಅಮರನಾಥ್, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ್ ರೆಡ್ಡಿ, ರಾಜ್ಯ ವಕ್ತಾರ ಎಂ. ಲಕ್ಷ್ಮಣ್, ಮುಡಾ ಅಧ್ಯಕ್ಷ ಮರೀಗೌಡ, ಎಪಿಸಿಸಿಎಫ್ ಕುಮಾರ್ ಪುಷ್ಕರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯ, ಅರಣ್ಯ ಅಧಿಕಾರಿಗಳಾದ ಐ. ಬಿ. ಪ್ರಭುಗೌಡ, ಪಿ. ರಮೇಶ್ ಕುಮಾರ್, ಕೆ. ಎನ್. ಬಸವರಾಜು, ಸೀಮಾ,ಡಿಐಜಿ ಬೋರಲಿಂಗಯ್ಯ, ಎಡಿಸಿ ಶಿವರಾಜು ಸೇರಿದಂತೆ ತಾಲ್ಲೂಕು, ಜಿಲ್ಲಾಡಳಿತದ ಅಧಿಕಾರಿಗಳು ಇದ್ದರು.