ತುಮಕೂರು ದಸರಾ ಜಂಬು ಸವಾರಿ : ಸಾಂಸ್ಕೃತಿಕ ವೈಭವ

Date:

Advertisements

 ತುಮಕೂರು ದಸರಾ ಉತ್ಸವದ ಅಂಗವಾಗಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅವರು ಗುರುವಾರ ಮಧ್ಯಾಹ್ನ ತುಮಕೂರು ನಗರದ ಬಿ.ಜಿ.ಎಸ್. ವೃತ್ತದ ಬಳಿ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಿ ಚಾಲನೆ ನೀಡಿದ ವೈಭವಯುತ ಜಂಬೂ ಸವಾರಿ ಮೆರವಣಿಗೆಯು ಸಾಂಸ್ಕೃತಿಕ ಹಾಗೂ ಭಕ್ತಿಭಾವದ ಸಂಗಮಕ್ಕೆ ಸಾಕ್ಷಿಯಾಯಿತು. 

ಜಂಬೂ ಸವಾರಿ ಮೆರವಣಿಗೆಯ ಪ್ರಮುಖ ಆಕರ್ಷಣೆ ಎಂದರೆ ಅಂಬಾರಿ ಹೊತ್ತಿದ್ದ ಶ್ರೀರಾಮ ಆನೆ. ಮೈಸೂರು ದಸರಾ ಸಂಪ್ರದಾಯವನ್ನು ನೆನಪಿಸುವಂತೆ ಶ್ರೀರಾಮನನ್ನು ಬಣ್ಣ-ಬಣ್ಣದ ವಸ್ತ್ರ ಹಾಗೂ ಹೂಗಳಿಂದ ಅಲಂಕರಿಸಿ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯನ್ನು ಕುಳ್ಳಿರಿಸಲಾಗಿತ್ತು.  

1002142380

ಶ್ರೀರಾಮ ಆನೆಯ ಪಕ್ಕದಲ್ಲಿ ಸಾಗಿದ ಎರಡು ಲಕ್ಷ್ಮೀ ಆನೆಗಳು ಗಾಂಭೀರ್ಯದಿಂದ ಮೆರವಣಿಗೆಯ ಸೊಬಗನ್ನು ಹೆಚ್ಚಿಸಿದವು. ಗಜಪಡೆಯ ಸಮನ್ವಯದೊಂದಿಗೆ ಸಾಗಿದ ಈ ಜಂಬೂ ಸವಾರಿ, ಕೇವಲ ಧಾರ್ಮಿಕ ಉತ್ಸವವಷ್ಟೇ ಅಲ್ಲದೆ, ಸಂಸ್ಕೃತಿಯ ಪ್ರತಿಬಿಂಬವಾಗಿ ಹೊರಹೊಮ್ಮಿತು. ಸಾವಿರಾರು ಭಕ್ತರ “ಜೈ ಚಾಮುಂಡೇಶ್ವರಿ” ಘೋಷಣೆಗಳು ನಗರದ ವಾತಾವರಣವನ್ನು ಆವರಿಸಿದ್ದವು. 

Advertisements
1002142377

ಮೆರವಣಿಗೆಯಲ್ಲಿ ಗಜಪಡೆಯ ಸೊಬಗು, ಲಕ್ಷ್ಮೀ ಆನೆಗಳ ಗಾಂಭೀರ್ಯ, ಶ್ರೀರಾಮ ಆನೆಯ ಧೈರ್ಯ ಇವುಗಳ ನಡುವೆ ಶ್ರೀ ಚಾಮುಂಡೇಶ್ವರಿ ದೇವಿಯ ಮೆರವಣಿಗೆಯು ನಿಜಕ್ಕೂ ಐತಿಹಾಸಿಕ ಘಳಿಗೆಯನ್ನು ಸೃಷ್ಟಿಸಿತು. ಮೆರವಣಿಗೆಯನ್ನು ವೀಕ್ಷಿಸಲು ದಾರಿಯುದ್ದಕ್ಕೂ ಅಲ್ಲಲ್ಲಿ ಗ್ಯಾಲರಿಗಳನ್ನು ನಿರ್ಮಿಸಲಾಗಿತ್ತು. ಅನೇಕರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಜಂಬೂ ಸವಾರಿಯ ದೃಶ್ಯಗಳನ್ನು ಸೆರೆ ಹಿಡಿದು ಅಮೂಲ್ಯ ನೆನಪುಗಳನ್ನು ತಮ್ಮದಾಗಿಸಿಕೊಂಡರು. 

1002142376

ಜಂಬೂ ಸವಾರಿ ಭವ್ಯ ಮೆರವಣಿಗೆಯಲ್ಲಿ ಸೀತಕಲ್ಲು ಶ್ರೀ ಚಾಮುಂಡೇಶ್ವರಿ, ಎನ್.ಆರ್. ಕಾಲೋನಿಯ ಶ್ರೀ ದುರ್ಗಾಂಬ, ಶ್ರೀ ಪೂಜಾಂಬ ಹಾಗೂ ಶ್ರೀ ದಾಳಂಬ, ದಿಬ್ಬೂರಿನ ಶ್ರೀ ಮುಳಕಟ್ಟಮ್ಮ, ಜಯಪುರ ಬಡಾವಣೆಯ ಶ್ರೀ ಮಹಾಲಕ್ಷ್ಮೀ  ದೇವಿ, ಯಲ್ಲಾಪುರದ ಶ್ರೀ ಕಾಳಿಕಾಂಬ, ವಿನಾಯಕ ನಗರದ ಶ್ರೀ ಆದಿಶಕ್ತಿ ಅಮ್ಮ, ಶೆಟ್ಟಿಹಳ್ಳಿಯ ಶ್ರೀ ರೇಣುಕಾ ಯಲ್ಲಮ್ಮ, ಚನ್ನಪ್ಪನ ಪಾಳ್ಯದ ಶ್ರೀ ಮಾರಮ್ಮ, ಚಿಕ್ಕಪೇಟೆಯ ಗ್ರಾಮದೇವತೆ, ಪಾಂಡುರಂಗ ನಗರದ ಶ್ರೀ ಅಂಕಲಾಮ್ಮ, ಮಂಡಿಪೇಟೆಯ ಶ್ರೀ ಭದ್ರಕಾಳಿ ಹಾಗೂ ಶ್ರೀ ರಾಜರಾಜೇಶ್ವರಿ ಗಂಗಾಭವಾನಿ, ಅಂಬೇಡ್ಕರ್ ನಗರದ ಶ್ರೀ ದುರ್ಗಾ ಪರಮೇಶ್ವರಿ, ಬನಶಂಕರಿಯ ಶ್ರೀ ಆದಿಶಕ್ತಿ ಹಟ್ಟಿಮಾರಮ್ಮ ಸೇರಿದಂತೆ 50ಕ್ಕೂ ಹೆಚ್ಚು ಗ್ರಾಮ ದೇವತೆಗಳು ಹೂಗಳಿಂದ ಅಲಂಕರಿಸಲ್ಪಟ್ಟ ಸಾರೋಟು(ಬೆಳ್ಳಿ ರಥ)ಗಳಲ್ಲಿ ಸಾಗಿದ್ದು, ಜನರಲ್ಲಿ ಅದ್ವಿತೀಯ ಭಕ್ತಿ ಭಾವ ಮೂಡಿಸಿತು. ಪ್ರತಿಯೊಂದು ದೇವರ ಪ್ರತಿಷ್ಠೆ, ಜನಪರ ನಂಬಿಕೆ, ಸಂಪ್ರದಾಯಗಳು ಈ ಮೆರವಣಿಗೆಯಲ್ಲಿ ಮೂಡಿಬಂದವು. ದಾರಿಯುದ್ದಕ್ಕೂ ಭಕ್ತರು ನಮನ ಸಲ್ಲಿಸುತ್ತಾ ಹೂಮಾಲೆಗಳನ್ನು ಅರ್ಪಿಸಿ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು. 

1002142394

ಮೆರವಣಿಗೆಯಲ್ಲಿ ಸಾಗುತ್ತಿದ್ದ ಗ್ರಾಮ ದೇವತೆಗಳಿಗೆ ಹೆಲಿಕಾಪ್ಟರ್‌ನಿಂದ ಪುಷ್ಪಗಳ ಮಳೆಯನ್ನು ಸುರಿಸಲಾಯಿತು. ಆಕಾಶದಿಂದ ಸುರಿದ ಹೂವಿನ ಮಳೆಯು ಮೆರವಣಿಗೆಯ ಮಾರ್ಗದಲ್ಲಿದ್ದ ಜನರನ್ನು ಆನಂದಭರಿತರನ್ನಾಗಿಸಿತು. ಪುಷ್ಪಾರ್ಚನೆಯ ಸೊಬಗಿನಲ್ಲಿ ಹೂವಿನಿಂದ ಆವೃತವಾದ ದೇವರ ರಥಗಳು, ಅಂಬಾರಿ ಆನೆಗಳು, ಕಲಾತಂಡಗಳು ಎಲ್ಲವೂ ಜನಮನ ಸೆಳೆದವು.

1002142391

ಮೆರವಣಿಗೆ ಮಾರ್ಗದಲ್ಲಿ ನಂದಿಧ್ವಜ, ಭೂತಕಾಳಿ ವೇಷ ಕುಣಿತ, ಸೋಮನಕುಣಿತ, ಗೊರವರ ಕುಣಿತ, ಚಕ್ಕೆಭಜನೆ, ತಮಟೆ, ಹಗಲು ವೇಷ, ಹುಲಿ ವೇಷ, ಯಕ್ಷಗಾನ, ನಾಸಿಕ್ ಡೋಲ್, ಚಿಟ್ಟಿ ಮೇಳ, ವೀರಗಾಸೆ, ಅರೆವಾದ್ಯ, ಗಾರುಡಿ ಗೊಂಬೆ, ಕೀಲು ಕುದುರೆ, ಡೊಳ್ಳು ಕುಣಿತ, ತಾಳ ಮದ್ದಳೆ, ನಾದಸ್ವರ, ಪೂಜಾ ಕುಣಿತ ಸೇರಿದಂತೆ ನೂರಾರು ಕಲಾ ತಂಡಗಳು ಕಲಾ ಪ್ರದರ್ಶನ ನೀಡುತ್ತಾ ಸಾಗಿದವು. ವಿಶೇಷವಾಗಿ ಗಾರುಡಿ ಗೊಂಬೆಗಳ ಉದ್ದನೆಯ ಪ್ರತಿರೂಪಗಳು ಮಕ್ಕಳ ಗಮನ ಸೆಳೆದವು. ಡೊಳ್ಳಿನ ದನಿಗೆ ಹೆಜ್ಜೆ ಹಾಕಿದ ವೀರರು ಭಕ್ತರನ್ನು ಆಕರ್ಷಿಸಿದವು. ದಾರಿಯುದ್ದಕ್ಕೂ ಮಕ್ಕಳಿಂದ ವೃದ್ಧರಾದಿಯಾಗಿ ಮೆರವಣಿಗೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು.

1002142389

ನೂರಾರು ಕಲಾತಂಡಗಳ ಕಲಾ ವೈಭವ, ದೇವತೆಗಳ ರಥಯಾತ್ರೆ, ಗಜಪಡೆಯ ಸೊಬಗು ಮತ್ತು ಆಕಾಶದಿಂದ ಸುರಿದ ಪುಷ್ಪಾರ್ಚನೆ – ಇವೆಲ್ಲವೂ ಸೇರಿ ಈ ವರ್ಷದ ತುಮಕೂರು ದಸರಾ ಜಂಬೂ ಸವಾರಿ ಜನಮನದಲ್ಲಿ ಅಜರಾಮರ ನೆನಪು, ನಗರದ ಬೀದಿಗಳನ್ನು ಜೀವಂತಗೊಳಿಸಿದ ಈ ಮೆರವಣಿಗೆ ನಾಡಹಬ್ಬದ ನಿಜವಾದ ಭಾವವನ್ನು ಮೂಡಿಸಿತು.

ಶಮೀ ಪೂಜೆ ಸಂಪನ್ನ :

 ಜಂಬೂ ಸವಾರಿ ಮೆರವಣಿಗೆಯು ನಗರದ ಬಿ.ಜಿ.ಎಸ್. ವೃತ್ತದಿಂದ ಚರ್ಚ್ ಸರ್ಕಲ್, ಡೀಸಿ ಕಚೇರಿ, ಅಮಾನಿಕೆರೆ ರಸ್ತೆ, ಕೋತಿ ತೋಪು, ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದ ಮಾರ್ಗವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನವನ್ನು ತಲುಪಿತು. 

1002142378

 ನಂತರ ವಿವಿಧ ಗ್ರಾಮ ದೇವತೆಗಳ ಸಮ್ಮುಖದಲ್ಲಿ ಸಚಿವ ಪರಮೇಶ್ವರ ಅವರು ಕದಳಿ ಛೇದನ ಮಾಡುವ ಮೂಲಕ ಶಮೀ ಪೂಜೆ ಸಂಪನ್ನಗೊಂಡಿತು. 

1002142390

ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಸುರೇಶ್ ಗೌಡ, ಟಿ.ಬಿ. ಜಯಚಂದ್ರ, ಸಚಿವರ ಧರ್ಮಪತ್ನಿ ಕನ್ನಿಕಾ ಪರಮೇಶ್ವರ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಗಾಂಧೀ ತತ್ವಗಳಿಗೆ ವಿಶ್ವ ಮನ್ನಣೆ : ಡಾ. ಜಿ.ಪರಮೇಶ್ವರ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವಗಳಿಗೆ ಇಡೀ ವಿಶ್ವದಲ್ಲಿಯೇ ಮನ್ನಣೆ ದೊರೆತಿದೆ...

ಶಿವಮೊಗ್ಗ | ಸತ್ಯ – ಅಹಿಂಸೆ ಪ್ರಬಲ ಅಸ್ತ್ರಗಳು : ಡಾ. ಟಿ. ಅವಿನಾಶ್

ಶಿವಮೊಗ್ಗ, ಭಾರತ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಮಹಾತ್ಮ ಗಾಂಧೀಜಿಯವರು ಬಳಸಿದ ಅಸ್ತ್ರಗಳೆಂದರೆ...

ಉಡುಪಿ | ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾತ್ಮಾ ಗಾಂಧೀಜಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ

ದೇಶದಲ್ಲಿ ಸಮಾನತೆಯನ್ನು ಬಯಸಿದ್ದೇ ಗಾಂಧೀಜಿಯವರ ಹತ್ಯೆಗೆ ಕಾರಣವಾಯಿತು, ಶೂದ್ರ ಮತ್ತು ಅತ್ಯಂತ...

ಉಡುಪಿ | ಉಚ್ಚಿಲ ದಸರಾ : ಇಂದು ವೈಭವದ ಭವ್ಯ ಶೋಭಾ ಯಾತ್ರೆ

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀಕ್ಷೇತ್ರ ಉಚ್ಚಿಲದಲ್ಲಿ...

Download Eedina App Android / iOS

X