ಸುಪ್ರಿಂಕೋರ್ಟಿನ 2024ರ ಆಗಸ್ಟ್ 01 ರ ತೀರ್ಪಿನ ಅನ್ವಯ ಸರಕಾರ ನ್ಯಾ.ನಾಗಮೋಹನ್‌ದಾಸ್ ಸಮಿತಿ ರಚಿಸಿ, ಒಳಮೀಸಲಾತಿ ಜಾರಿಗೆ ಸಚಿವ ಸಂಪುಟದಒಪ್ಪಿಗೆ ನೀಡಿದೆ. ಇದನ್ನು ನಾವು ಸ್ವಾಗತಿಸುತ್ತೇವೆ.ಇದರ ಜೊತೆಗೆ ಸಕರಾರ ಕೂಡಲೇ ತೆಲಂಗಾಣ ಮಾದರಿಯಲ್ಲಿ ಪ್ರತ್ಯೇಕ ಕಾಯ್ದೆ ರಚನೆ ಮಾಡಬೇಕು ಎಂದು ಹಿರಿಯ ಹೋರಾಟಗಾರ ಬಸವರಾಜ ಕೌತಾಳ್ ಒತ್ತಾಯಿಸಿದರು.
ತುಮಕೂರು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಿಗೂ ಒಳಮೀಸಲಾತಿಯ ಲಾಭ ದೊರೆಯುವಂತೆ ಮಾಡಬೇಕು.ಸುಮಾರು 4.50 ಲಕ್ಷದಷ್ಟಿರುವ ಎಕೆ,ಎಡಿ,ಎಎ ಸಮುದಾಯಗಳ ಮೂಲಜಾತಿ ಹುಡುಕಿ ಅವರಿಗೆ ಜಾತಿ ಪ್ರಮಾಣ ಪತ್ರ ನೀಡುವಂತಹ ವ್ಯವಸ್ಥೆಯಾಗಬೇಕು.ಹೊಸ ರೋಸ್ಟರ್ ಬಿಂದು ಪ್ರಕಾರ ನೇಮಕಾತಿ ಆದೇಶ ಹೊರಡಿಸುವುದರ ಜೊತೆಗೆ,ಬಡ್ತಿ, ಮುಂಬಡ್ತಿಗೆ ರೋಸ್ಟರ್ ಬಿಂದು ರಚಿಸಬೇಕು, ಒಳಮೀಸಲಾತಿ ಹಂಚಿಕೆಯಲ್ಲಿಅಲೆಮಾರಿ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಶಾಶ್ವತ ಎಸ್ ಸಿ ಆಯೋಗ ರಚಿಸಬೇಕು. ಆಯೋಗದಲ್ಲಿ ಪರಿಶಿಷ್ಟ ಜಾತಿಯ ಎಲ್ಲಾ ಜಾತಿಯ ಮುಖಂಡರಿಗೆ ಅವಕಾಶ ಕಲ್ಪಿಸಬೇಕು. ಬಡ್ತಿ ರೋಸ್ಟರ್ ಬಿಂದು ಬಿಡುಗಡೆ ಮಾಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಸರಕಾರ ಸ್ಪಂದಿಸದಿದ್ದಲ್ಲಿ ಹೋರಾಟ ಅನಿವಾರ್ಯ ಎಂದರು.
ಹಿರಿಯ ಹೋರಾಟಗಾರ ಅಂಬಣ್ಣ ಅರೋಲಿಕರ್ ಮಾತನಾಡಿ, ಸರ್ವೋಚ್ಚ ನ್ಯಾಯಾಲಯದ ಆದೇಶದ ಮೂಲಕ ನಾವು ಒಳಮೀಸಲಾತಿ ವಿಚಾರದಲ್ಲಿ ತಾತ್ವಿಕವಾಗಿ ಗೆಲುವು ಸಾಧಿಸಿದ್ದರೂ ತಾಂತ್ರಿಕವಾಗಿ ಗೆಲುವು ಸಾಧಿಸಿಲ್ಲ. ಹಾಗಾಗಿಯೇ ಇನ್ನೂ ಸೂತಕದ ಛಾಯೆ ಮನೆ ಮಾಡಿದೆ. ಸಂಭ್ರಮಕ್ಕೆ ಅವಕಾಶ ವಿಲ್ಲದಂತಾಗಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಂತ್ರಿಗಳು ಸೇರಿದಂತೆ ಅಯಕಟ್ಟಿನ ಹುದ್ದೆಗಳಲ್ಲಿ ಒಂದೇ ಸಮುದಾಯದವರು ಹಲವಾರು ವರ್ಷಗಳಿಂದ ಬೀಡುಬಿಟ್ಟಿರುವ ಕಾರಣ ಮಾದಿಗರಿಗೆ, ಅಲೆಮಾರಿಗಳಿಗೆ ನ್ಯಾಯ ಸಿಗದಂತಾಗಿದೆ. ಒಳಮೀಸಲಾತಿ ಇದೊಂದು ಪಕ್ಷಾತೀತ ಹೋರಾಟ, ಸಾಮಾಜಿಕ ನ್ಯಾಯ ಮತ್ತು ಸಹಜ ನ್ಯಾಯದ ಪರಿಕಲ್ಪನೆ. ಅಲೆಮಾರಿಗಳಿಗೆ ಶೇ.1ರ ಪ್ರತ್ಯೇಕ ಮೀಸಲಾತಿ ನೀಡಬೇಕೆಂದು ನ್ಯಾಯಾಂಗ ಹೋರಾಟವೂ ಸಹ ನಡೆಯಲಿದೆ ಎಂದರು.
ಹಿರಿಯ ಚಿಂತಕ ಕೆ.ದೊರೆರಾಜು ಮಾತನಾಡಿ,ಒಳಮೀಸಲಾತಿ ಬಗ್ಗೆ ಸರಕಾರವೇ ಸೃಷ್ಟಿಸಿರುವ ಗೊಂದಲಗಳನ್ನು ಬಗೆಹರಿಸಲು ಮುಂದಾಗಬೇಕು. ಜಿಲ್ಲೆಯ ಮಧುಗಿರಿ ತಾಲೂಕು ಕೋಡಿಗೇನಹಳ್ಳಿ ಹೋಬಳಿ ಪೋಲೆನಹಳ್ಳಿ ಗ್ರಾಮದ ದಲಿತ ಯುವಕನನ್ನು ಭರ್ಬರವಾಗಿ ಹತ್ಯೆ ಮಾಡಲಾಗಿದೆ.ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಕಾನೂನು ಸುವ್ಯವಸ್ಥೆಯಲ್ಲಿ ಲೋಪದೋಷಗಳು ಕಂಡು ಬರುತ್ತಿದ್ದು,ತಪಿತಸ್ಥರ ವಿರುದ್ದ ಸೂಕ್ತ ತನಿಖೆಯಾಗಬೇಕು. ಬಡವರು ಬದುಕುವಂತಹ ವಾತಾವರಣ ಸೃಷ್ಟಿಯಾಗಬೇಕೆಂದು ಆಗ್ರಹಿಸಿದರು.
ಮಾದಿಗ ದಂಡೋರದ ಪಾವಗಡ ಶ್ರೀರಾಮ್ ಮಾತನಾಡಿ, ಒಳಮೀಸಲಾತಿ ಕುರಿತು ಸುಪ್ರಿಂ ಕೋರ್ಟಿನ ತೀರ್ಪು ಬರುವವರೆಗು ಯಾವ ರಾಜಕೀಯ ಪಕ್ಷಗಳು ಒಳಮೀಸಲಾತಿ ಜಾರಿ ಕುರಿತು ಪ್ರಾಮಾಣಿಕ ಪ್ರಯತ್ನ ನಡೆಸಲಿಲ್ಲ. ಕಣೊರೆಸುವ ತಂತ್ರಕ್ಕಷ್ಟೇ ಸೀಮಿತವಾದವು. ಸರಕಾರ ಈಗ ಜಾರಿಗೆತಂದಿರುವ ಒಳಮೀಸಲಾತಿಯ 6-6-5ನ್ನು ಮೊದಲು ಸಮಾಜ ಕಲ್ಯಾಣ ಇಲಾಖೆಯಲ್ಲಿ ಅನುಷ್ಠಾನಕ್ಕೆ ತರಬೇಕು. ಎಕೆ,ಎಡಿ,ಎಎ ಅವರಿಗೆ ನಿಜವಾದ ಜಾತಿ ಪ್ರಮಾಣ ಪತ್ರ ನೀಡಲು ಕಂದಾಯ ಇಲಾಖೆಗೆ ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.
ಅಲೆಮಾರಿ ಸಮುದಾಯದ ಚಾವಡಿ ಲೋಕೇಶ್ ಮಾತನಾಡಿ,ಸರಕಾರ 49 ಇದ್ದ ಅಲೆಮಾರಿ ಸಮುದಾಯಗಳಿಗೆ ಹೆಚ್ಚುವರಿಯಾಗಿ 10 ಸಮುದಾಯಗಳನ್ನು ಸೇರಿಸಿ 59 ಜಾತಿಗಳಿಗೆ ಶೇ1ರ ಮೀಸಲಾತಿ ನೀಡಿ, ಅದನ್ನು ಪ್ರಬಲ ಜಾತಿಗಳಿರುವ ಸಿ.ಗುಂಪಿಗೆ ಸೇರಿಸುವ ಮೂಲಕ ನ್ಯಾ.ನಾಗಮೋಹನ್‌ದಾಸ್ ವರದಿಯ ಶಿಫಾರಸ್ಸನ್ನು ಗಾಳಿಗೆ ತೂರಿದೆ.ವಿಳಾಸವಿಲ್ಲದೆ ಬದುಕುತಿದ್ದ ನಮ್ಮನ್ನು ಮಾದಿಗ ಸಮಾಜದ ಸಹೋದರರು ಹೋರಾಟಕ್ಕೆ ದುಮುಕುವಂತೆ ಮಾಡಿದರು.ಆದರೆ ಸರಕಾರ ಪ್ರಬಲ ಜಾತಿಯ ಜೊತೆಗೆ ನಮ್ಮನ್ನು ಸೇರಿಸುವ ಮೂಲಕ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಮಾಡಿದೆ. ಕೊನೆಗಳಿಗೆಯಲ್ಲಿ ನಮ್ಮಿಂದ ಮೀಸಲಾತಿಯನ್ನು ಕಸಿದುಕೊಳ್ಳಲಾಗಿದೆ. ಸರಕಾರ ನಮ್ಮ ಮನವಿಯನ್ನು ಪುರಸ್ಕರಿಸಬೇಕು. ಹಾಗೆಯೇ ಕೊಲಂಬೋ ಜಾತಿಯವರು ನಮಗೆ ನ್ಯಾ.ನಾಗಮೋಹನ್‌ದಾಸ್ ವರದಿ ಮಾಡಿದ್ದ ಶಿಫಾರಸ್ಸಿನಂತೆ ಶೇ1ರಷ್ಟು ಮೀಸಲಾತಿ ಬಿಟ್ಟುಕೊಟ್ಟು, ಉದಾರತೆ ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ನರಸೀಯಪ್ಪ,ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿಯಡಾ.ವೈ.ಕೆ.ಬಾಲಕೃಷ್ಣಪ್ಪ, ಡಿ.ಟಿ.ವೆಂಕಟೇಶ್,ಕೆಂಚಮಾರಯ್ಯ, ನರಸಿಂಹಯ್ಯ, ರಂಜನ್, ಅನಿಲ್‌ಕುಮಾರ್ ಚಿಕ್ಕದಾಳವಾಟ ಸೇರಿದಂತೆ ಹಲವರು ಉಪಸ್ಥಿತರಿದ್ದರು.