ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವಗಳಿಗೆ ಇಡೀ ವಿಶ್ವದಲ್ಲಿಯೇ ಮನ್ನಣೆ ದೊರೆತಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ತಿಳಿಸಿದರು.
ತುಮಕೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ “ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 156ನೇ ಜನ್ಮ ದಿನಾಚರಣೆ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದ ನಂತರ ಮಾತನಾಡಿದ ಸಚಿವರು, ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಸರಳ ಜೀವನ, ಅಹಿಂಸೆ, ಸತ್ಯ, ಶಾಂತಿ, ತತ್ವಾದರ್ಶಗಳು ಸೂರ್ಯ-ಚಂದ್ರ ಇರುವವರೆಗೂ ಪ್ರಸ್ತುತವಾಗಿರುತ್ತವೆ. ಈ ಮಹನೀಯರ ತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೂ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಗಾಂಧೀಜಿಯವರಲ್ಲಿದ್ದ ನಡೆ-ನುಡಿ, ಬದ್ಧತೆ, ದೂರದೃಷ್ಟಿ ಗುಣಗಳು ಪ್ರಪಂಚದ ಯಾವುದೇ ದೇಶದ ನಾಯಕರಿಗೆ ಹೋಲಿಸಲು ಸಾಧ್ಯವಿಲ್ಲ. ಅವರ ಹುಟ್ಟು, ವಿದ್ಯಾಭ್ಯಾಸ, ದೇಶದ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟಗಳ ಕುರಿತು ಪುಸ್ತಕಗಳಿಂದ ತಿಳಿದುಕೊಂಡಿದ್ದೇವೆ. ಸುಮಾರು 2500 ವರ್ಷಗಳ ಹಿಂದೆ ಭಗವಾನ್ ಬುದ್ಧನು ಸತ್ಯಾನ್ವೇಷಣೆಗಾಗಿ ತನ್ನ ಚಕ್ರವರ್ತಿ ಸ್ಥಾನವನ್ನೇ ತ್ಯಾಗ ಮಾಡಿದಂತೆ ಗಾಂಧೀಜಿಯವರೂ ಸಹ ಸತ್ಯ, ಅಹಿಂಸೆ, ಶಾಂತಿ, ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದು ಹೇಳಿದರು.
ಸತ್ಯದ ಮಾರ್ಗ ಪ್ರತಿಯೊಬ್ಬರ ಸಂಗಾತಿಯಾಗಬೇಕು. ಇತ್ತೀಚೆಗೆ ಸಮಾಜದಲ್ಲಿ ಸತ್ಯವನ್ನು ದುರ್ಬಲಗೊಳಿಸಲಾಗುತ್ತಿರುವುದು ವಿಪರ್ಯಾಸ. ಸತ್ಯದ ಮೇಲೆ ಸಮಾಜ ನಿಂತಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವೆಂದು ಹೇಳಿದರಲ್ಲದೆ, ಯಾರ ಮನಸ್ಸಿಗೂ ನೋವುಂಟು ಮಾಡಬಾರದೆಂಬ ಅವರ ಅಹಿಂಸಾ ಮಾರ್ಗವನ್ನು ಸಂಯುಕ್ತ ರಾಷ್ಟçಗಳು ಒಪ್ಪಿಕೊಂಡು ಗಾಂಧೀ ಜಯಂತಿ ಅಕ್ಟೋಬರ್ 2ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸುತ್ತಿದ್ದು, ಗಾಂಧೀಜಿ ನಮ್ಮವರು ಎನ್ನಲು ಹೆಮ್ಮೆಯಾಗುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.
ಗಾಂಧೀಜಿ, ಶಾಸ್ತ್ರೀಜಿ ಅವರು ದೇಶದಲ್ಲಿ ಜಾತಿ ರಹಿತ, ವರ್ಗ ರಹಿತ ಸಮಾಜ ಕಟ್ಟುವ ವಿಶ್ವಾಸ ಹೊಂದಿದ್ದರು. ಕೆಳಸ್ತರದ ಹರಿಜನರನ್ನು ದೇವರ ಮಕ್ಕಳು ಎಂದು ಕರೆದ ಗಾಂಧೀಜಿ ಸ್ವದೇಶಿ ಉತ್ಪನ್ನಗಳನ್ನು ಬಳಸಬೇಕು. ವಿದೇಶಿ ಉತ್ಪನ್ನಗಳನ್ನು ಬಳಸಬಾರದೆಂದು ಖಾದಿ ಬಟ್ಟೆಯನ್ನು ತೊಟ್ಟು ದೇಶ ಪ್ರೇಮವನ್ನು ಮೆರೆದರು ಎಂದು ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪಾರ ನಂಬಿಕೆ ಇಟ್ಟಿದ್ದ ಗಾಂಧೀಜಿ ದೇಶದ ಪ್ರತಿಯೊಬ್ಬ ಪ್ರಜೆಯೂ ಯಾವುದೇ ಜಾತಿ, ಧರ್ಮವಿರಲಿ ಮೂಲತಃ ಭಾರತೀಯನಾಗಿರಬೇಕು. ದೇಶ ಕಟ್ಟುವಲ್ಲಿ ಪ್ರತೀ ಪ್ರಜೆಯ ಪಾತ್ರವಿರಬೇಕೆಂದ ಅವರು, ಅವರ ತತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ನಮ್ಮ ದೇಶದ ಅಡಿಪಾಯ ಮತ್ತಷ್ಟು ಭದ್ರವಾಗುತ್ತದೆ ಎಂದರು.
ಈ ದಿನ ಮತ್ತೊಬ್ಬ ಮಹನೀಯ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮದಿನವನ್ನು ಆಚರಿಸಲಾಗುತ್ತಿದ್ದು, ಪ್ರತಿಯೊಬ್ಬರೂ ಸರಳ ಜೀವನ ನಡೆಸಬೇಕು. ಹಂಚಿ ಬಾಳಬೇಕೆಂಬ ತತ್ವದ ಆಧಾರದ ಮೇಲೆ ನಂಬಿಕೆ ಇಟ್ಟಿದ್ದ ಶಾಸ್ತ್ರೀಜಿ ಸಮಾಜ, ಪ್ರಜೆಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಗಾಂಧೀಜಿಯವರ ತತ್ವಾದರ್ಶಗಳ ಮೇಲೆ ನಂಬಿಕೆ ಇಟ್ಟಿದ್ದ ಅವರ ಸರಳ ಜೀವನ ದೇಶಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ವಾರ್ತಾ ಇಲಾಖೆಯಿಂದ ಗಾಂಧೀಜಿಯವರ ಬದುಕು-ಸಂದೇಶದ ಬಗ್ಗೆ ಏರ್ಪಡಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಗಳ ವಿಜೇತರಿಗೆ ನಗದು ಬಹುಮಾನ ವಿತರಿಸಿ ಮಾತನಾಡುತ್ತಾ, ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿ ಭಾವಿ ಪ್ರಜೆಗಳಿಗೆ ಗಾಂಧೀ ತತ್ವಗಳ ಬೀಜ ಬಿತ್ತಲು ವಾರ್ತಾ ಇಲಾಖೆ ಮಾಡಿರುವ ಪ್ರಯತ್ನ ಶ್ಲಾಘನೀಯ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಗಾಂಧೀಜಿ ಕುರಿತು ಪ್ರಬಂಧ, ಚರ್ಚಾ, ಭಾಷಣ ಸ್ಪರ್ಧೆ ಸೇರಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದರಿಂದ ಗಾಂಧಿ ವಿಚಾರಧಾರೆಗಳ ಬಗ್ಗೆ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ತಿಳಿಯಲು ಸಾಧ್ಯವೆಂದು ತಿಳಿಸಿದರಲ್ಲದೆ, ಗಾಂಧೀ ತತ್ವಗಳು ಭಾರತಕ್ಕೆ ಮಾತ್ರ ಸೀಮಿತವಲ್ಲ. ಇಡೀ ವಿಶ್ವಕ್ಕೆ ಮಾದರಿಯಾಗಿದೆ. ತುಮಕೂರು ಜಿಲ್ಲೆಗೂ ಸ್ವಾತಂತ್ರ್ಯ ಹೋರಾಟದ ಕರೆ ನೀಡಲು ಗಾಂಧೀಜಿ ಭೇಟಿ ನೀಡಿದ ಬಗ್ಗೆ ಸ್ಮರಿಸಿದರು.
ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರು :
ಪ್ರೌಢಶಾಲಾ ವಿಭಾಗದಲ್ಲಿ ದಿವ್ಯ ಪ್ರಥಮ, ಆಕಾಶ್ ಟಿ.ಹೆಚ್. ದ್ವಿತೀಯ ಹಾಗೂ ಅನು ಎಂ. ಅವರು ತೃತೀಯ ಸ್ಥಾನ ಪಡೆದುಕೊಂಡರು. ಪದವಿಪೂರ್ವ ಕಾಲೇಜು ವಿಭಾಗದಲ್ಲಿ ಲೋಲಾಕ್ಷಿದೇವಿ ಎಲ್., ಪಾಲಮ್ಮ ಹಾಗೂ ಪಾರ್ವತಿ ಫ. ಕರಡಿ ಅವರು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಗಳಿಸಿದರು. ಪದವಿ/ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಭಾವನಾ ಎ.ಪಿ. ಅವರು ಮೊದಲನೇ, ಅರುಂಧತಿ ಎನ್. 2ನೇ ಹಾಗೂ ಜ್ಯೋತಿ ಬಿ.ಹೆಚ್. ಅವರು 3ನೇ ಬಹುಮಾನ ನೀಡಲಾಯಿತು.
ಇದಕ್ಕೂ ಮುನ್ನ ಗಾಂಧೀ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಲಲಿತಾ ಛಲಂ ಸಂಗಡಿಗರಿಂದ ಭಜನೆ ಕಾರ್ಯಕ್ರಮದಲ್ಲಿ “ಸರ್ವ ಧರ್ಮ ಪ್ರಾರ್ಥನೆ, ಹರಿನಾಮ ಜಿಹ್ವೆಯೊಳಿರಬೇಕು, ರಾಮನಾಮವ ನುಡಿ ನುಡಿ, ವಿಶ್ವ ವಿನೂತನ ವಿದ್ಯಾಚೇತನ, ಸುಮ್ಮನೆ ದೊರಕುವುದೆ, ಊರಿಗೆ ಬಂದರೆ ದಾಸಯ್ಯ, ರಾಮ ರಾಮ ರಾಮ ಎನ್ನಿರೊ, ರಾಮ ಮಂತ್ರವ ಜಪಿಸು, ಅಲ್ಲಿ ನೋಡಲು ರಾಮ, ತನು ಕರಗದವರಲ್ಲಿ, ವೈಷ್ಣವ ಜನತೋ, ರಘುಪತಿ ರಾಘವ” ಸೇರಿದಂತೆ ಮತ್ತಿತರ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು.
ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಧುಕುಮಾರ್ ನಿರೂಪಿಸಿದರು. ಡಾ: ಬಿ.ಆರ್. ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ರಾಜಶೇಖರ್ ವಂದಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ನಾಗಣ್ಣ, ವಾರ್ತಾ ಇಲಾಖೆಯ ಆರ್. ರೂಪಕಲಾ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲಾ-ಕಾಲೇಜಿನ ಪ್ರಾಂಶುಪಾಲರು ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.