ತುಮಕೂರು ತಾಲೂಕು ಮಲ್ಲೇನಹಳ್ಳಿಯಲ್ಲಿ ಊರಿನ ಹೊರಗಡೆ ಇರಿಸಲಾಗಿದ್ದ ಬಾಣಂತಿಯ ಮಗು ಅನಾರೋಗ್ಯದಿಂದ ಸಾವನ್ನಪ್ಪಿದ್ದ ಘಟನೆ ಎಲ್ಲರನ್ನೂ ಅತಂಕಕ್ಕೀಡು ಮಾಡಿತ್ತು. ಆದರೂ, ಗೊಲ್ಲ ಸಮುದಾಯ ಇನ್ನೂ ಜಾಗೃತಗೊಂಡಿಲ್ಲ. ಈಗಲೂ ಬಾಣಂತಿ ಮತ್ತು ಮಗುವನ್ನು ಊರ ಹೊರಗಿರಿಸುವ ಅಮಾನವೀಯ ಸಂಪ್ರದಾಯವನ್ನು (ಮೌಢ್ಯ) ಪಾಲಿಸುತ್ತಿದೆ. ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ.
ಗುಬ್ಬಿಯಿಂದ ಸುಮಾರು 6 ಕಿ.ಮೀ. ದೂರದಲ್ಲಿರುವ ವರದೇವನಹಳ್ಳಿ ಹಟ್ಟಿ ಗ್ರಾಮದಲ್ಲಿ ಬಾಣಂತಿ ಮತ್ತು ಮಗುವನ್ನು ಗ್ರಾಮದ ಹೊರಗೆ ಗುಡಿಸಲಿನಲ್ಲಿ ಇರಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಗುಬ್ಬಿಯ ಹಿರಿಯ ಸಿವಿಲ್ ನ್ಯಾಯಾಧೀಶ ಉಂಡಿ ಮಂಜುಳ ಶಿವಪ್ಪ ಹಾಗೂ ನ್ಯಾಯಾಲಯದ ಸಿಬ್ಬಂದಿ, ಆರಕ್ಷಕರು, ವಕೀಲರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಾಣಂತಿ ಮತ್ತು ಮಗುವನ್ನು ರಕ್ಷಿಸಿ, ಸುರಕ್ಷಿತವಾಗಿ ಅವರ ಮನೆಗೆ ಕಳುಹಿಸಿದ್ದಾರೆ. ಅನಿಷ್ಠ ಪದ್ಧತಿ ಬಗ್ಗೆ ಕುಟುಂಬಸ್ಥರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಮತ್ತೆ ಇಂತಹದ್ದೇ ಘಟನೆಗಳು ಮರುಕಳಿಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ..
ಈ ವೇಳೆ ಗುಬ್ಬಿ ತಾಲೂಕು ವಕೀಲರ ಸಂಘದ ಜಂಟಿ ಕಾರ್ಯದರ್ಶಿ ನಂದೀಶ್ ಬಿ.ವಿ., ವಕೀಲ ಎಂ.ಪಿ.ರವೀಶ್, ಸಿದ್ದಲಿಂಗಯ್ಯ ಮತ್ತು ನ್ಯಾಯಾಲಯದ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.