ಕಾಡುಗೊಲ್ಲ ಎಂಬುದು ಒಂದು ಪ್ರತ್ಯೇಕ ಜಾತಿ, ಗೊಲ್ಲ ಜಾತಿಯ ಉಪ ಜಾತಿಯಲ್ಲ. ಹಾಗಾಗಿ ರಾಜ್ಯದಲ್ಲಿರುವ ಎಲ್ಲಾ ಕಾಡುಗೊಲ್ಲರು,ಸೆಪ್ಟಂಬರ್ 22 ರಿಂದ ರಾಜ್ಯದಲ್ಲಿ ಆರಂಭವಾಗುವ ಸಾಮಾಜಿಕ ಮತ್ತು ಅರ್ಥಿಕ ಸಮೀಕ್ಷೆಯಲ್ಲಿ ಜಾತಿ ಮತ್ತು ಉಪಜಾತಿ ಎರಡು ಕಲಂಗಳಲ್ಲಿ ಕಾಡುಗೊಲ್ಲ ಎಂದೇ ನಮೂದಿಸುವಂತೆ ಕಾಡುಗೊಲ್ಲ ಸಮುದಾಯದ ಯುವಮುಖಂಡ ಡಾ.ಸಾಸಲು ಸತೀಶ್ ಮನವಿ ಮಾಡಿದರು
ತುಮಕೂರು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,1931ರ ಮೈಸೂರು ಸಂಸ್ಥಾನದ ಕೊನೆಯ ಜಾತಿ ಗಣತಿ ವೇಳೆಯೂ ಕಾಡುಗೊಲ್ಲ ಎಂಬ ಪ್ರತ್ಯೇಕ ಜಾತಿ ಇರುವುದನ್ನು ಗೆಜೆಟ್ ನಲ್ಲಿ ಕಾಣಬಹುದು.ಅಲ್ಲದೆ ಕಾಂತರಾಜು ಆಯೋಗದ ಸಮೀಕ್ಷೆಯ ಸಂದರ್ಭದಲ್ಲಿಯೂ ಕಾಡುಗೊಲ್ಲ ಪ್ರತ್ಯೇಕ ಜಾತಿಯಾಗಿದೆ. ಸರಕಾರ ನಮ್ಮದು ಪ್ರತ್ಯೇಕ ಜಾತಿ ಎಂಬುದನ್ನು ಪರಿಗಣಿಸಿಯೇ, ಕಾಡುಗೊಲ್ಲ ಅಭಿವೃದ್ದಿ ನಿಗಮವನ್ನು ಸ್ಥಾಪಿಸಿದೆ. ಒಂದು ಉಪಜಾತಿಗೆ ನಿಗಮ ಸ್ಥಾಪಿಸಿದ ಉದಾಹರಣೆ ದೇಶದಲ್ಲಿ ಇಲ್ಲ. ಹಾಗಾಗಿ ಕಾಡುಗೊಲ್ಲ ಜನಾಂಗದ ಯುವಜನರು, ಮುಖಂಡರು ಗಳು ಬೇರೆಯವರ ಮಾತಿಗೆ ಕಿವಿಗೊಡದೆ ಕ್ರಮ ಸಂಖ್ಯೆ 541ರಲ್ಲಿ ಇರುವ ಕಾಡುಗೊಲ್ಲ ಹೆಸರನ್ನೇ ತಮ್ಮ ಜಾತಿ ಮತ್ತು ಉಪಜಾತಿ ಕಲಂನಲ್ಲಿ ನಮೂದಿಸಬೇಕು ಎಂದರು.
ಕಾಡುಗೊಲ್ಲ ಎಂಬುದು ಪ್ರತ್ಯೇಕ ಜಾತಿಯಾಗಿದ್ದು, ತನ್ನದೆ ಆದ ಆಸ್ಮಿತೆಯನ್ನು ಹೊಂದಿದೆ.ತನ್ನದೇ ಆದ ಪ್ರತ್ಯೇಕ ಆಚಾರ, ವಿಚಾರ, ಸಂಪ್ರದಾಯಗಳು,ದೇವರುಗಳು,ಪೂಜಾ ವಿಧಿ ವಿಧಾನಗಳನ್ನು ಹೊಂದಿದೆ.ಹಾಗಾಗಿ ಕಾಡುಗೊಲ್ಲ ಗೊಲ್ಲ ಜಾತಿಯ ಉಪಜಾತಿ ಎಂಬುದು ಶುದ್ದ ತಪ್ಪು. ಇಂತಹ ತಪ್ಪು ಹೇಳಿಕೆಯನ್ನು ನಂಬುವುದರಿಃದ ಮುಂಬರುವ ದಿನಗಳಲ್ಲಿ ಕಾಡುಗೊಲ್ಲ ಸಮುದಾಯದ ಶೈಕ್ಷಣಿಕ, ಸಾಮಾಜಿಕ, ಅರ್ಥಿಕ, ರಾಜಕೀಯ ಅಭಿವೃದ್ದಿಗೆ ದೊಡ್ಡ ಹೊಡೆತ ಬೀಳುವುದಲ್ಲದೆ,ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾಡುಗೊಲ್ಲರನ್ನು ಗೊಲ್ಲ ಜಾತಿಯೊಳಗೆ ಸೇರಿಸಿಕೊಂಡು ತಮ್ಮ ಜಾತಿ ಸಂಖ್ಯೆ ಹೆಚ್ಚಿಸಿಕೊಂಡು,ನಮನ್ನು ತುಳಿಯುವ ಹುನ್ನಾರ ಅಡಗಿದೆ.ಇದುವರೆಗೂ ಮೋಸ ಹೋಗಿದ್ದೇವೆ.ಮುಂದೆ ಕಾಡುಗೊಲ್ಲರಿಗೆ ಮೋಸ ಆಗದಂತೆ ತಡೆಯಬೇಕೆಂದರೆ, ಸರಕಾರದ ಜಾತಿ ಗಣತಿ ವೇಳೆ ಜಾತಿ ಮತ್ತು ಉಪ ಜಾತಿ ಕಲಂನಲ್ಲಿ ಕಾಡುಗೊಲ್ಲ ಎಂದು ನಮೂದಿಸಬೇಕು ಎಂದು ಡಾ.ಸಾಸಲು ಸತೀಶ್ ತಿಳಿಸಿದರು.
ವಿಧಾನಪರಿಷತ್ ಸದಸ್ಯರು,ಪ್ರವರ್ಗ 1ರ ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷರು ಆಗಿರುವ ಡಿ.ಟಿ.ಶ್ರೀನಿವಾಸ್ ಹಾಗೂ ಶ್ರೀಯಾದವಾನಂದಸ್ವಾಮೀಜಿ ಮತ್ತು ಹೊಳಕಲ್ಲು ಮಠದ ಸ್ವಾಮೀಜಿಗಳು ಸಹ ಜಾತಿ ಕಲಂನಲ್ಲಿ ಗೊಲ್ಲ, ಉಪಜಾತಿ ಕಲಂನಲ್ಲಿ ಕಾಡುಗೊಲ್ಲ ಬರೆಸುವಂತೆ ಕೋರಿದ್ದಾರೆ. ಇದನ್ನು ಕಾಡುಗೊಲ್ಲ ಸಮುದಾಯ ಬಲವಾಗಿ ವಿರೋಧಿಸುತ್ತದೆ. ಇದುವರೆಗೂ ರಾಜ್ಯದಲ್ಲಿ ಕಾಡುಗೊಲ್ಲರ ಹೆಸರಿನಲ್ಲಿ ಗೊಲ್ಲರು ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲಾ ವಿಷಯಗಳಲ್ಲಿಯೂ ಕಾಡುಗೊಲ್ಲ ಅವಕಾಶಗಳನ್ನು ಕಬಳಿಸಿದ್ದಾರೆ.ನಮ್ಮ ಹೆಸರಿನಲ್ಲಿ ಅವರು ಎಲ್ಲಾ ಅಧಿಕಾರ ಪಡೆದು ನಮ್ಮನ್ನು ತುಳಿಯುತ್ತಿದ್ದಾರೆ. ಹಾಗಾಗಿ ಕಾಡುಗೊಲ್ಲ ಜನಾಂಗದ ಯುವಕರು ಎಚ್ಚೆತ್ತುಕೊಳ್ಳಬೇಕು.ಜಾತಿ ಕಲಂನಲ್ಲಿ ಗೊಲ್ಲ,ಉಪ ಜಾತಿ ಕಲಂನಲ್ಲಿ ಕಾಡುಗೊಲ್ಲ ಎಂದು ಬರೆಸುವುದರಿಂದ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆನ್ನುವ ನಮ್ಮ ಬಹುದಿನಗಳ ಹೋರಾಟಕ್ಕೆ ಕೊಡಲಿ ಪೆಟ್ಟು ಬೀಳಲಿದೆ.ಎಲ್ಲವನ್ನು ಕಳೆದುಕೊಂಡು ಬೀದಿಗೆ ಬೀಳಬೇಕಾಗುತ್ತದೆ.ಹಾಗಾಗಿ ಎಲ್ಲಾ ಕಾಡುಗೊಲ್ಲರ ಹಟ್ಟಿಗಳಿಗೂ ಭೇಟಿ ನೀಡಿ ಅರಿವು ಮೂಡಿಸುವ ಕೆಲಸ ಮಾಡಲಾಗುವುದು ಎಂದು ಡಾ.ಸಾಸಲು ಸತೀಶ್ ತಿಳಿಸಿದರು.
ಕಾಡುಗೊಲ್ಲರ ಅಸ್ಮಿತೆ ಹೋರಾಟ ಸಮಿತಿಯ ಜಿ.ಕೆ.ನಾಗಣ್ಣ ಮಾತನಾಡಿ,ರಾಜ್ಯದಲ್ಲಿ ನ್ಯಾ.ನಾಗಮೋಹನ್ ದಾಸ್ ಆಯೋಗದ ಸಮೀಕ್ಷೆಗೂ ಮುಂಚೆ ಮಾಹಿತಿ ಕಲೆ ಹಾಕಲು ಬರುವ ಬಿಎಲ್‌ಓ ಗಳ ವಿವರಗಳನ್ನು ಸಾರ್ವಜನಿಕವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಲಾಗಿತ್ತು.ಆದರೆ ಸೆಪ್ಟಂಬರ್ 22 ರಿಂದ ಗಣತಿ ಇದ್ದರೂ ಇದುವರೆಗೂ ಬಿಎಲ್‌ಓಗಳ ಮಾಹಿತಿಯನ್ನು ಪ್ರಕಟಿಸಿಲ್ಲ.ಹಾಗಾಗಿ ಸರಕಾರ ಕೂಡಲೇ ಪ್ರತಿ ವಾರ್ಡುಗಳಿಗೆ ಬರುವ ಬಿಎಲ್‌ಓಗಳ ವಿವರವನ್ನು ಇಲಾಖೆಯ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಬೇಕು.ಅಲ್ಲದೆ ವಿದ್ಯುತ್ ಮೀಟರ್ ಸಂಖ್ಯೆಯ ಮೂಲಕ ಕಾಡುಗೊಲ್ಲರ ಮಾಹಿತಿ ಸಂಗ್ರಹಿಸುವುದು ಕಷ್ಟ. ಎಷ್ಟೋ ಕಾಡುಗೊಲ್ಲರ ಹಟ್ಟಿಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲ.ಹಾಗಾಗಿ ಬಿಎಲ್‌ಓ ವಿವರ, ದೂರವಾಣಿ ಸಂಖ್ಯೆ ಪ್ರಕಟಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬರಹಗಾರರಾದ ಉಜಜ್ಜಿ ರಾಜಣ್ಣ ಉಪಸ್ಥಿತರಿದ್ದರು.