ತುಮಕೂರು ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಕ್ಷುಲಕ ಕಾರಣಕ್ಕೆ ಇಬ್ಬರು ಪರಿಶಿಷ್ಟ ಜಾತಿಯ ಮಾದಿಗ ಸಮುದಾಯಕ್ಕೆ ಸೇರಿದವರನ್ನು ನೀರು ಕೇಳಿದಕ್ಕೆ ಮತ್ತು ರಸ್ತೆಯಲ್ಲಿ ಮಕ್ಕಳು ಆಟವಾಡುವಾಗ ಗಾಡಿಯನ್ನು ನಿದಾನಕ್ಕೆ ಓಡಿಸು ಎಂದಿದಕ್ಕೆ ಕಗ್ಗೋಲೆ ಮಾಡಿರುವುದು ಅಮಾನವೀಯ, ಸಂತ್ರಸ್ತ ಕುಟುಂಬಕ್ಕೆ ಸಾಂತ್ವಾನ ಹೇಳಲು ಗೃಹಸಚಿವರು, ಜಿಲ್ಲಾಡಳಿತ ಅಥವಾ ಜನಪ್ರತಿನಿಧಿಗಳು ಇದುವರೆಗೂ ಭೇಟಿ ನೀಡದೇ ಮಾನವೀಯತೆಯಿಂದ ನಡೆದುಕೊಳ್ಳದಿರುವುದನ್ನು ಖಂಡಿಸಿ, ತುಮಕೂರು ಪ್ರಗತಿಪರ ಸಂಘಟನೆಯಗಳ ಒಕ್ಕೂಟದಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಎದುರು ದಲಿತ ಕುಟುಂಬಗಳ ನ್ಯಾಯಕ್ಕಾಗಿ ಪ್ರಗತಿಪರ ಸಂಘಟನೆಯಗಳಿಂದ ಹೋರಾಟ ನಡೆಯುತ್ತಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗೃಹಸಚಿವರಾದ ಡಾ.ಜಿ.ಪರಮೇಶ್ವರ್ ಡಿಸಿ ಕಛೇರಿ ಸಭಾಂಗಣದೊಳಗೆ ಹಾಗೂ ಜಿಲ್ಲಾಡಳಿತ ಎಲ್ಲಾ ಅಧಿಕಾರಿಗಳು ದಸರಾ ಉತ್ಸವದ ಸಿದ್ದತೆಯಲ್ಲಿ ತಲ್ಲೀನರಾಗಿದ್ದರು. ಮನವಿ ಸ್ವೀಕರಿಸಲು ಭಾರದಿದ್ದಾಗ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಛೇರಿಗೆ ನುಗ್ಗಲು ಮುಂದಾದದರು ಈ ಸಂದರ್ಭದಲ್ಲಿ ಪೋಲಿಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಉದ್ವೀಜ್ಞತೆ ಉಂಟಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಹೋರಾಟಗಾರ ಕೆ.ದೊರೈರಾಜ್, ಮಧುಗಿರಿ ತಾಲ್ಲೂಕಿನ ಪೋಲೇನಹಳ್ಳಿ ಗ್ರಾಮದಲ್ಲಿ 35 ವರ್ಷದ ಆನಂದ ಎಂಬ ಯುವಕ ನೀರನ್ನು ಕೇಳಿದಕ್ಕಾಗಿ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ರಾಮಕೃಷ್ಣಪ್ಪ ಮತ್ತು ಮಗ ನಾಗೇಶ ಆನಂದನ ತಾಯಿ ಎದುರೆ ತನ್ನ ಬುಲೆರೋ ವಾಹನದಿಂದ ಗುದ್ದಿ ರಾಡಿನಿಂದ ಸತ್ತಮೇಲು ಹಲ್ಲೆ ಮಾಡಿರುವುದು ನಾಗೇಶ್ ನ ಕ್ರೌರ್ಯವಾಗಿದೆ, ಅದೇ ರೀತಿ ಪಾವಗಡ ತಾಲ್ಲೂಕು ನಿಡಗಲ್ಲು ಹೋಬಳಿ ಬೆಳ್ಳಿಬಟ್ಟಲು ಗ್ರಾಮದಲ್ಲಿ ಮಾದಿಗ ಸಮುದಾಯದ ಚಿಕ್ಕಮಕ್ಕಳು ರಸ್ತೆಯಲ್ಲಿ ಆಟವಾಡುತ್ತಿರುವಾಗ ವಾಲ್ಮೀಕಿ ಎಂಬ ಯುವಕ ಗಾಡಿಯನ್ನು ಜೋರಾಗಿ ಓಡಿಸಿಕೊಂಡು ಹೋಗುತ್ತಿದ್ದ ವೇಳೆ ಮಾದಿಗ ಸಮುದಾಯದ ಹನುಮಂತರಾಯಪ್ಪ ಗಾಡಿಯನ್ನು ನಿದಾನಕ್ಕೆ ಓಡಿಸು, ಮಕ್ಕಳಿದ್ದಾರೆ ಎಂದಿದ್ದಕ್ಕಾಗಿ ನನಗೆ ಬುದ್ಧಿ ಹೇಳುತ್ತಿಯ ಎಂದು ಹನುಮಂತರಾಯಪ್ಪನನ್ನು ರಾತ್ರಿ ವೇಳೆ ಮನೆಗೆ ಬಂದು ಕುಟುಂಬದ ಎದುರೇ ಕೊಲೆ ಮಾಡಿರುತ್ತಾನೆ. ಇದು ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಜಿಲ್ಲಾಡಳಿತ ಈ ಘಟನೆಗಳಿಗೆ ಸಂಬಂಧಿಸಿದಂತೆ ಇದುವರೆಗೂ ಗ್ರಾಮಗಳಿಗೆ ಭೇಟಿ ನೀಡಿ ಕುಟುಂಬಗಳಿಗೆ ಸಾಂತ್ವಾನ ಹೇಳುವ ಕೆಲಸ ಮಾಡಿಲ್ಲ. ಉಸ್ತುವಾರಿ ಸಚಿವರು ಭೇಟಿ ನೀಡಿ ಸರ್ಕಾರದ ಪರವಾಗಿ ಸಾಂತ್ವಾನ ಹೇಳುವ ಜೊತೆಗೆ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು.
ನಂತರ ಜಿಲ್ಲಾಡಳಿತದ ಪರವಾಗಿ ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ ಮನವಿ ಸ್ವೀಕರಿಸಿ ಜಿಲ್ಲಾಡಳಿತದಿಂದ ಉನ್ನತ ಅಧಿಕಾರಿಗಳು ಎರಡು ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳ ಜೊತೆ ಮಾತನಾಡಿ ಮನವಿಯಲ್ಲಿ ಸಲ್ಲಿಸಿರುವ ಹಕ್ಕೋತ್ತಾಯಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದರು.
ಹಕ್ಕೋತ್ತಾಯಗಳಲ್ಲಿ ಪಿಯುಸಿಎಲ್ ಮತ್ತು ಎಎಲ್ಎಫ್ ಹಾಗೂ ದಲಿತ ಮಾನವ ಹಕ್ಕುಗಳ ಸಂರಕ್ಷಣಾ ಸಂಘಟನೆಗಳು ಎರಡು ಗ್ರಾಮಕ್ಕೆ ಭೇಟಿ ನೀಡಿ ಸತ್ಯಶೋಧನೆ ನಡೆಸಿ ಜಿಲ್ಲಾಡಳಿತಕ್ಕೆ ಪ್ರಮುಖ ಶಿಫಾರಸ್ಸುಗಳೆಂದರೆ ಸಾಕ್ಷಿದಾರರ ಸಂರಕ್ಷಣಾ ಕಾಯಿದೆ 2018ರ ಸೆಕ್ಷನ್ 7ರ ಪ್ರಕಾರ ಕುಟಂಬಕ್ಕೆ ಮತ್ತು ಸಾಕ್ಷಿದಾರರಿಗೆ ರಕ್ಷಣೆ ಒದಗಿಸಬೇಕು. ಈ ಘಟನೆಗೆ ಕಾರಣರಾದ ಎಲ್ಲರ ಮೇಲು ಎಫ್ಐಆರ್ ದಾಖಲಿಸಬೇಕು, ಮೃತರ ಕುಟುಂಬದ ಪರವಾಗಿ ವಾದಿಸಲು ಸರ್ಕಾರ ವಿಶೇಷ ಅಭಿಯೋಜಕರನ್ನು ನೇಮಿಸಬೇಕು. ಸರ್ಕಾರದಿಂದ ತಕ್ಷಣ ಎರಡು ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು. ಕನಿಷ್ಠ 2 ಎಕರೆ ಭೂಮಿ ನೀಡಬೇಕು. ಮೃತರ ಕುಟುಂಬಕ್ಕೆ ಸರಕಾರಿ ಉದ್ಯೋಗ ನೀಡಿ ಕೊಲೆಗೀಡಾದ ಮಕ್ಕಳ ವಿದ್ಯಾಭ್ಯಾಸ ಸಂಪೂರ್ಣ ಹೊಣೆಗಾರಿಕೆಯನ್ನು ಸರಕಾರ ತೆಗೆದುಕೊಳ್ಳಬೇಕು. ಪೋಲಿಸ್ ಇಲಾಖೆ ಗ್ರಾಮ ಪಂಚಾಯಿತಿ ಹಾಗೂ ಇತರೆ ಇಲಾಖೆಗಳಿಗೆ ಜಾತಿ ಸಂವೇಧನೆ ಕುರಿತು ಕಾನೂನು ಅರಿವು ಮೂಡಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಕಾರ್ಮಿಕ ಮುಖಂಡರಾದ ಸೈಯದ್ ಮುಜೀಬ್, ಸ್ಲಂ ಜನಾಂದೋಲನದ ಎ,ನರಸಿಂಹಮೂರ್ತಿ, ಡಿಹೆಚ್ಎಸ್ನ ನಾಗರಾಜು, ಶಿರಾ ದಲಿತ ಮುಖಂಡರಾದ ಟೈರ್ ರಂಗನಾಥ್, ಮಧುಗಿರಿಯ ಸಿದ್ದಲಿಂಗ ಸ್ವಾಮಿ, ಪಾವಗಡದ ಅಜೀತ್ ಮಾದಿಗ, ಎಐಟಿಸಿಯ ಕಂಬೇಗೌಡ, ಗಿರೀಶ್, ಎಪಿಸಿಆರ್ನ ತಾಜುದ್ದೀನ್ ಷರೀಫ್, ವಕೀಲರಾದ ರಂಗದಾಮಯ್ಯ, ಜನವಾದಿ ಮಹಿಳಾ ಸಂಘಟನೆಯ ಕಲ್ಪನಾ, ಸಿಐಟಿಯುನ ಎನ್,ಕೆ ಸುಬ್ರಮಣ್ಯ, ತುಮಕೂರು ವಿಶ್ವವಿದ್ಯಾಲಯದ ನವೀನ್ ಮಾತನಾಡಿದರು.
ಪ್ರತಿಭಟನಾ ನೇತೃತ್ವವನ್ನು ತುಮಕೂರು ಪೌರಕಾರ್ಮಿಕ ಸಂಘಟನೆಯ ನಾಗರಾಜು, ಮತ್ತು ತುಮಕೂರು ಸ್ಲಂ ಸಮಿತಿ ಪದಾಧಿಕಾರಿಗಳಾದ ಅರುಣ್, ಚಿರಂಜೀವಿ, ಗೋವಿಂದ ಪೂರ್ಣಿಮಾ, ಗುಲ್ನಾಜ್, ಫೀರ್ಸಾಬ್, ಶಂಕರ್, ಕೃಷ್ಣ, ರಾಜ, ಗೋವಿಂದರಾಜ್, ಅಶ್ವತ್ ಮುಂತಾದವರು ವಹಿಸಿದ್ದರು.