ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸುತ್ತಿರುವ ಸಾಮಾಜಿ, ಅರ್ಥಿಕ, ಶೈಕ್ಷಣಿಕ ಸಮೀಕ್ಷೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ವಿರೋಧಿಸುತ್ತಿದ್ದು, ಇದನ್ನು ಜಾಗೃತ ಕರ್ನಾಟಕ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ಜಾಗೃತ ಕರ್ನಾಟಕದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅನಿಲ್ ಕುಮಾರ್ ಚಿಕ್ಕದಾಳವಾಟ ತಿಳಿಸಿದರು.
ತುಮಕೂರು ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 1903ರ ಮಿಲ್ಲರ್ ಆಯೋಗದಿಂದ ಹಿಡಿದು, ನ್ಯಾ.ಕಾಂತರಾಜು ಆಯೋಗದ ವರದಿಯವರೆಗೆ ಮುಂದುವರೆದು, ಈಗಲೂ ಸಹ ವರದಿ ಸರಿಯಾಗಿ ನಡೆದಿಲ್ಲ ಎಂಬ ನೆಪವೊಡ್ಡಿ ವರದಿಯ ಶಿಫಾರಸ್ಸುಗಳನ್ನು ವಿರೋಧಿಸಲು ಕೆಲ ಪಕ್ಷಗಳ ಮುಖಂಡರುಗಳು ಸಂಚು ರೂಪಿಸುತ್ತಿದ್ದಾರೆ. ಇವರಿಗೆ ಸಂಪತ್ತಿನ ಸಮಾನ ಹಂಚಿಕೆ ಆಗುವುದು ಬೇಕಿಲ್ಲ ಎಂದು ಆರೋಪಿಸಿದರು.

ಸರ್ಕಾರ ರಾಜ್ಯದಲ್ಲಿ ವಾಸಿಸುತ್ತಿರುವ ಜನರ ಸಾಮಾಜಿಕ, ಅರ್ಥಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿಯುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸಲು ಹೊರಟಿದೆ. ಇದು ಸ್ವಾಗತಾರ್ಹ ಬೆಳವಣಿಗೆ. ಸರ್ಕಾರ ನಡೆಸುತ್ತಿರುವ ಈ ಗಣತಿಯಿಂದ ಇದುವರೆಗೂ ಕುಲಕಸುಬುಗಳನ್ನೇ ನಂಬಿ ಅತಂತ್ರ ಸ್ಥಿತಿಯಲ್ಲಿದ್ದ ಹತ್ತಾರು ಹಿಂದುಳಿದ ಮತ್ತು ಅತಿ ಹಿಂದುಳಿದ ಜಾತಿಗಳ ಜನರನ್ನು ಮೇಲೆತ್ತಲು ಅವಶ್ಯವಿರುವ ಯೋಜನೆಗಳನ್ನು ರೂಪಿಸಲು ಕಲೆ ಹಾಕುತ್ತಿರುವ ದತ್ತಾಂಶ ಇದಾಗಿದೆ. ಈ ದತ್ತಾಂಶದಿAದ ಒಬಿಸಿ ಪಟ್ಟಿಯಲ್ಲಿರುವ ಹಲವಾರು ತಳ ಸಮುದಾಯಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಸರ್ಕಾರ ಈಗಾಗಲೇ ಶೇ.75ರಷ್ಟು ಸಮೀಕ್ಷೆ ಕಾರ್ಯವನ್ನು ಪೂರ್ಣ ಗೊಳಿಸಿದೆ. ಶೇ100ರಷ್ಟು ಸಮೀಕ್ಷೆ ಪೂರ್ಣಗೊಳ್ಳಲು ನಾಡಿನ ಎಲ್ಲ ವರ್ಗದ ಜನರು ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದರು.
ಜಾಗೃತ ಕರ್ನಾಟಕದ ಮುಖಂಡ ಹರೀಶ್ ಕಮ್ಮನಕೋಟೆ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತುಗಳು ತಲುಪಬೇಕಾದರೆ ಹಾಗೂ ಜನ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು, ಸಮಾಜಿಕ ನ್ಯಾಯ ಒದಗಿಸಲು ಸರ್ಕಾರ ಈಗ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಅನಿವಾರ್ಯವಾಗಿದೆ. ಈ ಸಮೀಕ್ಷೆಯನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರ ತಿರುಚಿದ ಹೇಳಿಕೆಗಳ ಹಿಂದೆ ಬಹುದೊಡ್ಡ ಷಡ್ಯಂತ್ರ ಅಡಗಿದೆ ಎಂದರು.

ಜಾತಿ ಸಮೀಕ್ಷೆ ಮತಾಂತರಕ್ಕೆ ಕಾರಣವಾಗಲಿದೆ, ರೇಷನ್ ಕಾರ್ಡ್ ರದ್ದಾಗಲಿದೆ ಎನ್ನುತ್ತಿರುವ ಸಂಸದ ಪ್ರಲ್ಹಾದ್ ಜೋಷಿ, ತೇಜಸ್ವಿ ಸೂರ್ಯ, ಬಿ.ವೈ ವಿಜಯೇಂದ್ರ ಹಾಗೂ ಆರ್.ಅಶೋಕ್ ಅವರ ಹೇಳಿಕೆ ಬಾಲಿಷವಾಗಿದೆ. ಇವರ ಹೇಳಿಕೆಗಳ ಹಿಂದೆ ಷಡ್ಯಂತ್ರ ಇರುವುದು ಸತ್ಯ. ಈ ಸಮಾಜದಲ್ಲಿ ಅಸಮಾನತೆ ತುಂಬಿ ತುಳುಕುತ್ತಿದೆ. ಬಹುಪಾಲು ಸಂಪತ್ತು ಕೆಲವೇ ಸಂಖ್ಯೆಯಲ್ಲಿರುವ ಮೇಲ್ವರ್ಗದವರ ಬಳಿಯಿದೆ. ಜಾತಿ ಸಮೀಕ್ಷೆಯಿಂದ ಇವರ ಬಂಡವಾಳ ಬಯಲಾಗಲಿದೆ ಎಂಬ ದಿಗಿಲು ಇವರಲ್ಲಿ ಹುಟ್ಟಿಕೊಂಡಿದೆ. ಆದ್ದರಿಂದಲೇ ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇವರ ಪಿತೂರಿಗಳಿಗೆ ಬಲಿಯಾಗದೆ ಹಿಂದುಳಿದ ವರ್ಗಗಗಳ ಶಾಶ್ವತ ಆಯೋಗ ಸಿದ್ದಪಡಿಸಿರುವಂತಹ 60 ಪ್ರಶ್ನೆಗಳಿಗೂ ಸಮರ್ಪಕವಾದ ಮಾಹಿತಿ ನೀಡಿ ಎಲ್ಲರೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಆಯೋಗ ಸಿದ್ದಪಡಿಸಿರುವ ಅವರತ್ತು ಪ್ರಶ್ನೆಗಳ ಕುರಿತಾಗಿ ಅಪಸ್ವರ ಎತ್ತುವ ಮೂಲಕ ಸಮೀಕ್ಷೆ ವಿರುದ್ಧವೇ ನಿಂತಿರುವAತೆ ತೋರುತ್ತಿದೆ. ತುಮಕೂರು ಸಂಸದರಾದ ವಿ.ಸೋಮಣ್ಣನವರು ಹಿಂದುಳಿದ ಸಮುದಾಯಗಳ ಮತಗಳನ್ನು ಪಡೆದು ಗೆದ್ದು ಈಗ ಸಮೀಕ್ಷೆಯಿಂದ ಮೇಲ್ವರ್ಗಗಳನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಹಾಗಾಗಿ ಶೋಷಿತ ಸಮುದಾಯಗಳ ವಿರುದ್ಧವೇ ಮಾತನಾಡುವ ಇಂತವರನ್ನು ಚುನಾವಣೆಗಳಲ್ಲಿ ಬಹಿಷ್ಕರಿಸಬೇಕು ಎಂದು ಕರೆ ನೀಡಿದರು.
ಬಿಜೆಪಿಯವರು ಸಮಾಜಿಕ ನ್ಯಾಯದ ವಿರೋಧಿಗಳು. ಅವರಿಗೆ ಸಮಾನತೆ ಎಂಬುದು ಅಲರ್ಜಿ. ಆದರೆ ಇವರ ಆಟ ಇನ್ನು ನಡೆಯುವುದಿಲ್ಲ. ತಳ ಸಮುದಾಗಳಿಗೆ ಪ್ರಜ್ಞೆ ಬಂದಿದೆ. ಸರ್ಕಾರವೂ ಕೂಡ ಸಣ್ಣಪುಟ್ಟ ಲೋಪದೋಷಗಳನ್ನು ಸರಿಪಡಿಸಿ ಕೈಗೊಂಡಿರುವ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯ ಮಾಡಿದರು.

ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಕಿಶೋರ್ ಮಾತನಾಡಿ, ಸರ್ಕಾರ ಪ್ರತಿ ಹತ್ತು ವರ್ಷಕ್ಕೊಮ್ಮೆ ಇಂತಹ ಸಮೀಕ್ಷೆಗಳನ್ನು ನಡೆಸುವುದನ್ನು ಕಡ್ಡಾಯಗೊಳಿಸಿ, ಕಾಯ್ದೆಯ ರೂಪದಲ್ಲಿ ತರಬೇಕು. ಸರ್ಕಾರ ಸಮೀಕ್ಷೆ ನಡೆಸುತ್ತಿರುವುದು ಸವಲತ್ತುಗಳನ್ನು ನೀಡಲು ಹೊರತು, ಕಸಿಯಲು ಅಲ್ಲ. ಈ ಸ್ಪಷ್ಟತೆ ಓರ್ವ ಮಂತ್ರಿಯಾಗಿ ವಿ.ಸೋಮಣ್ಣ ಅವರಿಗೆ ಇರಬೇಕಿತ್ತು. ದೇಶದಲ್ಲಿರುವ ಅಸಮಾನತೆ, ವರ್ಣ, ವರ್ಗ ವ್ಯವಸ್ಥೆಯನ್ನು ಹೋಗಲಾಡಿಸಲು ಸಮೀಕ್ಷೆ ಅನಿವಾರ್ಯ ಎಂದರು.
ಸುದ್ದಿಗೋಷ್ಠಿಯಲ್ಲಿ ಜಾಗೃತ ಕರ್ನಾಟಕದ ರಾಜ್ಯ ಸಮಿತಿ ಸದಸ್ಯ ಆದಮ್ ಖಾನ್, ಪದವೀಧರರ ವೇದಿಕೆ ಅಧ್ಯಕ ದಯಾನಂದ್, ಮಲ್ಲಿಕಾರ್ಜುನ ಕೊರವರ್, ಮಂಜುಳಮ್ಮ ಮತ್ತು ಚಂದನ್ ಡಿ.ಎನ್ ಅವರುಗಳು ಉಪಸ್ಥಿತರಿದ್ದರು.