ಹಿರಿಯ ರಂಗಕರ್ಮಿ ಜಿ.ವಿ. ಮಾಲತಮ್ಮ ಅವರ 102ನೇ ಜನ್ಮದಿನದ ಅಂಗವಾಗಿ ನಾಡಿನ ಹಿರಿಯ ಸಾಹಿತಿಗಳು ಹಾಗೂ ರಂಗಕರ್ಮಿಗಳ ಸಮ್ಮಿಲನ ಕಾರ್ಯಕ್ರಮವನ್ನು ಜಿ.ವಿ. ಮಾಲತಮ್ಮ ಆರ್ಟ್ ಫೌಂಡೇಷನ್ ಮತ್ತು ಗುಬ್ಬಿ ವೀರಣ್ಣ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಹಿರಿಯ ರಂಗಕಲಾವಿದೆ ಬಿ. ಜಯಶ್ರೀ ಅವರ ನೇತೃತ್ವದಲ್ಲಿ ತಾಲ್ಲೂಕಿನ ಕಸಬಾ ಹೋಬಳಿಯ ತೊಂಗನಹಳ್ಳಿ ಸಮೀಪದ ಬನದ ಅಮ್ಮ ಬಯಲು ರಂಗದಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕನ್ನಡ ವೃತ್ತಿ ರಂಗಭೂಮಿಯ ದಿಗ್ಗಜರಾದ ಗುಬ್ಬಿ ವೀರಣ್ಣ ಹಾಗೂ ಜೆ. ಶ್ರೀರಂಗಾಚಾರ್ಯರ ಕೊಡುಗೆಗಳನ್ನು ಸ್ಮರಿಸಲಾಯಿತು. ಕನ್ನಡ ರಂಗಭೂಮಿಯ ಬೆಳವಣಿಗೆಗೆ ಅವರು ನೀಡಿದ ಕೊಡುಗೆ ಮತ್ತು ರಂಗಕಲೆಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯದ ಕುರಿತು ಚರ್ಚಿಸಲಾಯಿತು.
ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಪುತ್ರ ಜಿ.ಎಸ್. ಜಯದೇವ ಮಾತನಾಡಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸರಳತೆ ಮಹತ್ವದ ಗುಣವಾಗಿದೆ. ಹಲವು ದಶಕಗಳಿಂದ ಬಿ. ಜಯಶ್ರೀ ಅವರು ಸಾಂಸ್ಕೃತಿಕ ರಾಯಭಾರಿಯಾಗಿ ಗುರುತಿಸಿಕೊಂಡಿದ್ದಾರೆ. ದಾನಶೀಲತೆ ಮತ್ತು ಕಲಾಪ್ರೇಮ ಎರಡನ್ನೂ ಒಟ್ಟಿಗೆ ಮೈಗೂಡಿಸಿಕೊಳ್ಳುವುದು ಅಪರೂಪ. ಸರಳತೆ ಹಾಗೂ ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿರುವ ಜಯಶ್ರೀ ಅವರ ರಂಗಕಲೆಯ ಉಳಿವು ಮತ್ತು ಬೆಳವಣಿಗೆಯ ಪ್ರಯತ್ನ ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸಿದರು.
ಖ್ಯಾತ ಲೇಖಕಿ ವಿಜಯಮ್ಮ ಮಾತನಾಡಿ, ಮಾಲತಮ್ಮ ಅವರ ರಂಗಭೂಮಿಯ ಬಗೆಗಿನ ಆಸಕ್ತಿ ಮತ್ತು ಬದ್ಧತೆಯನ್ನು ಮರೆಯಲು ಸಾಧ್ಯವಿಲ್ಲ. ರಂಗಭೂಮಿಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಅವರು, ಕುಟುಂಬದೊಂದಿಗೆ ಸೇರಿ ಕಲೆಯ ಬೆಳವಣಿಗೆಗಾಗಿ ಶ್ರಮಿಸಿದ್ದಾರೆ. ಅವರ ಪರಿಶ್ರಮದ ಪರಂಪರೆಯನ್ನು ಮುಂದುವರಿಸುತ್ತಿರುವ ಜಯಶ್ರೀ ಅವರು ತಾವು ಕಾರ್ಯನಿರ್ವಹಿಸಿದ ಕ್ಷೇತ್ರಗಳಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ ಎಂದು ಹೇಳಿದರು.
ಸಾಹಿತಿ ಹನೂರು ಕೃಷ್ಣಮೂರ್ತಿ ಮಾತನಾಡಿ, ಜಾನಪದವೇ ರಂಗಕಲೆಯ ಮೂಲ ಎಂಬುದನ್ನು ಮರೆಯಬಾರದು. ಗ್ರಾಮೀಣ ಪ್ರದೇಶಗಳಲ್ಲಿ ಕುಮಾರವ್ಯಾಸನ ಕಾವ್ಯವನ್ನು ಓದುವ ಪರಂಪರೆ ಇಂದಿಗೂ ಕಾಣಸಿಗುತ್ತದೆ. ಗುಬ್ಬಿ ವೀರಣ್ಣ ಅವರು ಕೇವಲ ವ್ಯಕ್ತಿಯಾಗಿ ಉಳಿಯದೆ, ತಮ್ಮ ವ್ಯಕ್ತಿತ್ವ ಮತ್ತು ಕಲಾಸೇವೆಯ ಮೂಲಕ ಎಲ್ಲೆಡೆ ಪ್ರಭಾವ ಬೀರಿದ್ದಾರೆ. ಅವರು ದೊಡ್ಡ ಪಾತ್ರಗಳನ್ನು ನಿರ್ವಹಿಸುವುದಕ್ಕಿಂತಲೂ ದೊಡ್ಡ ಕಲಾವಿದರನ್ನು ರೂಪಿಸಿದವರು ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ರಂಗಕಲಾವಿದೆ ಬಿ. ಜಯಶ್ರೀ, ನಿರ್ದೇಶಕ ಟಿ.ಎಸ್. ನಾಗಾಭರಣ, ಶ್ರೀನಿವಾಸ ಜಿ. ಕಪ್ಪಣ್ಣ, ರವೀಂದ್ರ ಭಟ್, ಜಿ.ಎನ್. ಮೋಹನ್, ಗುಬ್ಬಿ ವೀರಣ್ಣ ಟ್ರಸ್ಟ್ ಸದಸ್ಯ ರಾಜೇಶ್ ಗುಬ್ಬಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಪರ್ಯಾಯ ಶೀರ್ಷಿಕೆ: ಮಾಲತಮ್ಮ ಜನ್ಮದಿನದ ನೆಪದಲ್ಲಿ ರಂಗಭೂಮಿಯ ಪರಂಪರೆಯ ಮೆಲುಕು





