ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಆಲಿಸಿ, ಸಂಬಂಧಪಟ್ಟ ಇಲಾಖೆಗಳ ಮೂಲಕ ಪರಿಹಾರ ಒದಗಿಸುವ ಉದ್ದೇಶದಿಂದ ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ವ್ಯಾಪ್ತಿಯ ಸಂತೆಪೇಟೆ ಗ್ರಾಮದಲ್ಲಿ ಶನಿವಾರ ಪ್ರಜಾ ಸೇವೆ ಅಭಿಯಾನ ಕಾರ್ಯಕ್ರಮ ನಡೆಯಿತು.
ಶಾಸಕ ಡಾ. ರಂಗನಾಥ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸ್ಥಳೀಯ ಆಡಳಿತವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ದು ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಜಾ ಸೇವೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ ಎಂದರು.
ಹೋಬಳಿ ಮಟ್ಟದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಾರ್ವಜನಿಕರಿಂದ ಸ್ಥಳೀಯ ಸಮಸ್ಯೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಿ ಐಪಿಜಿಆರ್‌ಎಸ್‌ನಲ್ಲಿ ನೋಂದಾಯಿಸಿ ಸ್ವೀಕೃತಿ ನೀಡಲಾಗುವುದು. ನಿಗದಿತ ಕಾಲಮಿತಿಯಲ್ಲಿ ಹಂತ ಹಂತವಾಗಿ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೈತರಿಂದ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ 40ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಯಿತು. ಕಂದಾಯ ಇಲಾಖೆಗೆ ಸಂಬಂಧಿಸಿದ ಒತ್ತುವರಿ ತೆರವು, ಜಮೀನು ಸರ್ವೆ, ಜಮೀನಿಗೆ ರಸ್ತೆ ಕಲ್ಪಿಸುವುದು ಹಾಗೂ ಜಮೀನಿನ ದುರಸ್ತಿ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಸಾರ್ವಜನಿಕರು ಮನವಿ ಸಲ್ಲಿಸಿದರು.
ಈ ವೇಳೆ ಪಿಂಚಣಿ ಸೌಲಭ್ಯದ ಕುರಿತು ಮಾಹಿತಿ ಪಡೆಯಲು ಬಂದ ಬೆಟ್ಟಹಳ್ಳಿ ಗ್ರಾಮದ ವಯೋವೃದ್ಧ ಮೋಟಯ್ಯ ಅವರು ಶಾಸಕರ ಬಳಿ ಖರ್ಚಿಗೆ ಹಣ ನೀಡುವಂತೆ ಕೇಳಿಕೊಂಡ ಘಟನೆ ಗಮನ ಸೆಳೆಯಿತು.
ಇನ್ನೊಂದೆಡೆ, ಹಾಲುವಾಗಿಲು ಗ್ರಾಮದಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ರಾಮಯ್ಯ ಎಂಬುವವರಿಗೆ ಕಳೆದ ಎರಡು ವರ್ಷಗಳಿಂದ ವೇತನ ಪಾವತಿಯಾಗಿಲ್ಲ ಎಂದು ಆರೋಪಿಸಿ ವಿಷದ ಬಾಟಲಿ ಹಿಡಿದು ಶಾಸಕರ ಎದುರು ಬಂದರು. ಸ್ಥಳದಲ್ಲಿದ್ದ ಸಿಪಿಐ ಮಾಧ್ಯನಾಯಕ್ ಅವರು ಅವರಿಂದ ವಿಷದ ಬಾಟಲಿಯನ್ನು ಪಡೆದುಕೊಂಡರು. ಬಳಿಕ ಶಾಸಕ ಡಾ. ರಂಗನಾಥ್ ಅವರು ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸುವಂತೆ ಸೂಚಿಸಿ ರಾಮಯ್ಯ ಅವರಿಗೆ ಸಮಾಧಾನ ಹೇಳಿದರು.
ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ಮಂದಿಗೆ ಪಿಂಚಣಿ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು. ಹಲವರಿಗೆ ಮನೆ ನಿರ್ಮಾಣಕ್ಕೆ ಮಂಜೂರಾತಿ ಪತ್ರಗಳನ್ನು ನೀಡಲಾಯಿತು.
ಹಾಲುವಾಗಿಲು ಗ್ರಾಮದಲ್ಲಿ ಹಲವು ದಲಿತರಿಗೆ ಭೂಮಿ ಮಂಜೂರು ಮಾಡಿ ಹಲವು ವರ್ಷಗಳಾಗಿದ್ದರೂ ಪೌತಿ ಖಾತೆ ಮಾಡಿಸಿ ಜಮೀನಿನ ಹದ್ದುಬಸ್ತು ಮಾಡಿಕೊಟ್ಟಿಲ್ಲ ಎಂದು ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಶಾಸಕರು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚನೆ ನೀಡಿ, ತಹಶೀಲ್ದಾರ್ ಅವರಿಗೆ ಆದ್ಯತೆಯ ಮೇರೆಗೆ ತ್ವರಿತವಾಗಿ ಸಮಸ್ಯೆ ಪರಿಹರಿಸುವಂತೆ ನಿರ್ದೇಶನ ನೀಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕರಿಯನಾಯಕ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಸಂತ್ ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮರಿಯಪ್ಪ, ಕೃಷಿ ಸಹಾಯಕ ನಿರ್ದೇಶಕ ರಂಗನಾಥ್, ಸಿಪಿಐ ಮಾಧ್ಯನಾಯಕ್, ಗ್ರಾಮ ಪಂಚಾಯಿತಿ ಪಿಡಿಒ ರಾಜಶೇಖರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಗೂ ರೈತರು ಉಪಸ್ಥಿತರಿದ್ದರು.





