ನೀಟ್ ಅಕ್ರಮದ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸುವಂತೆ ಆಗ್ರಹಿಸಿ ನವದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು, ಸಂಸದರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿರುವ ಕ್ರಮವನ್ನು ಖಂಡಿಸಿ ತಿಪಟೂರಿನಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಜನಸ್ಪಂದನ ಅಧ್ಯಕ್ಷ ಸಿ. ಬಿ. ಶಶಿಧರ್ (ಟೂಡಾ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು
ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಪ್ರಧಾನ ಮಂತ್ರಿಯವರ ನಿವಾಸದ ಬಳಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಅಖಿಲೇಶ್ ಯಾದವ್ ಸೇರಿದಂತೆ ವಿರೋಧ ಪಕ್ಷದ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿರುವ ಕ್ರಮವನ್ನು ಕಾಂಗ್ರೆಸ್ ಮುಖಂಡ ಹಾಗೂ ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ. ಶಶಿಧರ್ (ಟೂಡಾ) ತೀವ್ರವಾಗಿ ಖಂಡಿಸಿದ್ದಾರೆ.
ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳನ್ನು ಆಲಿಸುವ ಬದಲು ಅವರ ಪರವಾಗಿ ಧ್ವನಿ ಎತ್ತಿದ ವಿರೋಧ ಪಕ್ಷದ ನಾಯಕರನ್ನು ವಶಕ್ಕೆ ಪಡೆಯುವುದು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲಿನ ನೇರ ದಾಳಿಯಾಗಿದೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿ ಸೇರಿದಂತೆ ಪ್ರತಿಭಟನಾಕಾರರನ್ನು ತಳ್ಳಾಡಿ ಅಮಾನವೀಯವಾಗಿ ನಡೆಸಿಕೊಂಡಿರುವ ದೃಶ್ಯಗಳು ದೇಶದ ಜನರನ್ನು ಆತಂಕಕ್ಕೀಡು ಮಾಡಿವೆ. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು ಲಾಠಿ, ಅಶ್ರುವಾಯು ಹಾಗೂ ಪೊಲೀಸ್ ಬಲದ ಮೂಲಕ ಪ್ರತಿಕ್ರಿಯಿಸುತ್ತಿರುವುದು ಕೇಂದ್ರ ಸರ್ಕಾರದ ಅಸಹಿಷ್ಣು ಮನೋಭಾವವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
ಪರೀಕ್ಷಾ ಅಕ್ರಮ, ನಿರುದ್ಯೋಗ ಮತ್ತು ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಕುರಿತು ದೇಶದ ಯುವಜನರು ಉತ್ತರ ಕೇಳುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿರುವುದನ್ನು ಹತ್ತಿಕ್ಕುವ ಪ್ರಯತ್ನವು ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಕ್ರಮವಾಗಿದೆ ಎಂದು ಟೀಕಿಸಿದರು.
ಪ್ರಧಾನ ಮಂತ್ರಿಯವರು ಭಿನ್ನಾಭಿಪ್ರಾಯವನ್ನು ದಮನಿಸುವ ರಾಜಕೀಯವನ್ನು ಕೈಬಿಟ್ಟು, ವಿದ್ಯಾರ್ಥಿಗಳ ಆತಂಕಗಳಿಗೆ ಸ್ಪಂದಿಸಬೇಕು. ದೇಶದ ಯುವಜನತೆಗೆ ನ್ಯಾಯ, ಪಾರದರ್ಶಕತೆ ಮತ್ತು ಗೌರವ ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ವಿದ್ಯಾರ್ಥಿಗಳ ಹಕ್ಕುಗಳು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವ ಹೋರಾಟದಲ್ಲಿ ಕಾಂಗ್ರೆಸ್ ಸದಾ ಅವರೊಂದಿಗೆ ನಿಲ್ಲಲಿದೆ. ನಾಯಕರನ್ನು ವಶಕ್ಕೆ ಪಡೆಯುವ ಮೂಲಕ ಸತ್ಯವನ್ನಾಗಲಿ, ಯುವಜನರ ಧ್ವನಿಯನ್ನಾಗಲಿ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಸಿ.ಬಿ. ಶಶಿಧರ್ (ಟೂಡಾ) ಹೇಳಿದರು.





