ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿ, ಸಂಬಂಧಿತ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಜೀದ್-ಇ-ಅಲ್ಲಾ ನೇತೃತ್ವದಲ್ಲಿ ನೂರಾರು ಮುಸ್ಲಿಂ ಸಮುದಾಯದ ಸದಸ್ಯರು ಶನಿವಾರ ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಗುಂಚಿ ಸರ್ಕಲ್‌ನಲ್ಲಿರುವ ಮಸೀದಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯ ವೇಳೆ ಆರೋಪಿತೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಕೆಲ ಪ್ರತಿಭಟನಾಕಾರರು ಆರೋಪಿತೆಯ ಭಾವಚಿತ್ರವನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮನವಿಯಲ್ಲಿ, ಪ್ರವಾದಿ ಮಹಮ್ಮದ್ ಹಾಗೂ ಅವರ ಪತ್ನಿಯ ಕುರಿತು ಅವಹೇಳನಕಾರಿ ಮತ್ತು ಆಧಾರರಹಿತ ಹೇಳಿಕೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿವೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ.
ಕರ್ನಾಟಕ ಮುಸ್ಲಿಂ ಜಮಾಆತ್‌ನ ತುಮಕೂರು ಉಸ್ತುವಾರಿ ಅಬ್ದುರ್ ರೆಹಮಾನ್ ಮೊಗರ್ ಪಾಣೆ ಮಾತನಾಡಿ, ಪ್ರವಾದಿ ಮಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ಸರ್ಕಾರ ತಕ್ಷಣ ಕಾನೂನು ಕ್ರಮ ಕೈಗೊಳ್ಳದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಮಜೀದ್-ಇ-ಅಲ್ಲಾ ಕಾರ್ಯದರ್ಶಿ ಫಯಾಜ್ ಖಾನ್ ಮಾತನಾಡಿ, ಪ್ರವಾದಿ ಹಾಗೂ ಅವರ ಪತ್ನಿಯ ಕುರಿತು ಅವಹೇಳನಕಾರಿ ಹೇಳಿಕೆಗಳು ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿವೆ. ಆದ್ದರಿಂದ ಆರೋಪಿತೆಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು
ಪ್ರತಿಭಟನೆಯಲ್ಲಿ ವಕ್ಫ್ ಸಮಿತಿ ಮಾಜಿ ಉಪಾಧ್ಯಕ್ಷ ಮೌಲಾನಾ ಆರೀಫ್ ರಜಾ, ರಿಜ್ವಾನ್ ಪಾಷಾ ಜುನೇದಿ, ಅಬ್ರಹಾರ್ ಖಾದ್ರಿ, ಸುನ್ನತ್ ಸ್ಟೂಡೆಂಟ್ ಆರ್ಗನೈಜೇಷನ್‌ನ ಪದಾಧಿಕಾರಿಗಳು, ಸುನ್ನತ್ ಜಮಾಆತ್‌ನ ಮೌಲ್ವಿಗಳು ಹಾಗೂ ವಿವಿಧ ಮುಸ್ಲಿಂ ಸಂಘಟನೆಗಳ ಮುಖಂಡರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.





