ತುಮಕೂರು ಜಿಲ್ಲೆಯಾದ್ಯಂತ ಆಗಸ್ಟ್ ಕೊನೆಯಲ್ಲಿ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ನಷ್ಟಿದ್ದ ತಾಪಮಾನ, ಸೆಪ್ಟೆಂಬರ್ ಆರಂಭದಲ್ಲೇ 30 ಡಿಗ್ರಿ ಗಡಿ ದಾಟಿದೆ. ಸೆ.4ರಂದು 32 ಡಿಗ್ರಿ ದಾಖಲಾಗಿದ್ದರೆ, ಕಳೆದ ಎರಡು ದಿನಗಳಿಂದ ಗರಿಷ್ಠ ತಾಪಮಾನ 33 ಡಿಗ್ರಿಗೆ ತಲುಪಿದೆ. ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳು ಮಳೆಗಾಲದ ಕೊನೆಯ ಹಂತ. ಆದರೆ ಈ ಬಾರಿ ಜಿಲ್ಲೆಯ ಚಿತ್ರಣವೇ ಬದಲಾಗಿದೆ. ಮಳೆಯ ಬದಲು ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೆಪ್ಟೆಂಬರ್ನಲ್ಲೇ ತಾಪಮಾನ 33 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗಿದೆ. ಮಳೆ ಕೊರತೆ, ಒಣಹವೆ ಮತ್ತು ಹೆಚ್ಚುತ್ತಿರುವ ಉಷ್ಣಾಂಶ ತುಮಕೂರು ಜಿಲ್ಲೆಯ ಜನಜೀವನ ಹಾಗೂ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ.
ಹಿಂದಿನ ಐದಾರು ವರ್ಷಗಳ ದಾಖಲೆಗಳನ್ನು ಗಮನಿಸಿದರೆ ಸೆಪ್ಟೆಂಬರ್ನಲ್ಲಿ ಈ ಪ್ರಮಾಣದ ಬಿಸಿಲು ಅಪರೂಪ. ಮಳೆಗಾಲದಲ್ಲೇ ಬಿಸಿಲಿನ ತೀವ್ರತೆ ಹೆಚ್ಚಿರುವುದು ಜಿಲ್ಲೆಯ ಹವಾಮಾನದಲ್ಲಿ ಕಂಡುಬಂದಿರುವ ಗಮನಾರ್ಹ ಬದಲಾವಣೆಯಾಗಿದೆ.
ಬೆಳಿಗ್ಗೆ 8 ಗಂಟೆಯಾಗುತ್ತಿದ್ದಂತೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಮಧ್ಯಾಹ್ನದ ವೇಳೆಗೆ ಹೊರಗೆ ಓಡಾಡುವುದು ಜನರಿಗೆ ಕಷ್ಟವಾಗುತ್ತಿದ್ದು, ಅನಿವಾರ್ಯ ಕೆಲಸಗಳಿಲ್ಲದವರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲೂ ಮಧ್ಯಾಹ್ನದ ನಂತರ ಜನ ಹಾಗೂ ವಾಹನ ಸಂಚಾರ ಕಡಿಮೆಯಾಗುತ್ತಿರುವುದು ಕಂಡುಬರುತ್ತಿದೆ.
ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನರು ಕೊಡೆ, ಟೋಪಿ ಸೇರಿದಂತೆ ವಿವಿಧ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಹೆಚ್ಚುತ್ತಿರುವ ಉಷ್ಣಾಂಶದಿಂದ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಅಗತ್ಯ ಮುಂಜಾಗ್ರತಾ ಕ್ರಮಗಳ ಕುರಿತು ಆರೋಗ್ಯ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.
ಜಿಲ್ಲೆಯಲ್ಲಿ ಸತತವಾಗಿ ಮಳೆ ಕೊರತೆ ಮುಂದುವರಿದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಕಳೆದ ವರ್ಷವೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿರಲಿಲ್ಲ. ಈ ವರ್ಷವೂ ವಾಡಿಕೆಯ ಮಳೆ ಕೈಕೊಟ್ಟಿದೆ.
ಜನವರಿಯಿಂದ ಸೆಪ್ಟೆಂಬರ್ವರೆಗೆ ಜಿಲ್ಲೆಯಲ್ಲಿ 361 ಮಿ.ಮೀ. ವಾಡಿಕೆ ಮಳೆಯಾಗಬೇಕಿದ್ದು, ಇದುವರೆಗೆ 290 ಮಿ.ಮೀ. ಮಾತ್ರ ದಾಖಲಾಗಿದೆ. ಜೂನ್ 1ರಿಂದ ಸೆ.7ರವರೆಗೆ 236 ಮಿ.ಮೀ. ಮಳೆಯಾಗಬೇಕಿದ್ದರೂ 150 ಮಿ.ಮೀ. ಮಾತ್ರ ಸುರಿದಿದೆ. ಇದರಿಂದ ಶೇ.36ರಷ್ಟು ಮಳೆ ಕೊರತೆ ಉಂಟಾಗಿದೆ.
ಮಳೆಯ ಕೊರತೆಯಿಂದ ಮಣ್ಣಿನ ತೇವಾಂಶ ಕಡಿಮೆಯಾಗಿದ್ದು, ಉಷ್ಣಾಂಶ ಹೆಚ್ಚಳವು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ. ಇದರ ನೇರ ಪರಿಣಾಮ ಕೃಷಿ ಕ್ಷೇತ್ರದ ಮೇಲಾಗಿದೆ. ಜಿಲ್ಲೆಯಲ್ಲಿ ಈ ವರ್ಷ 3.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಇದುವರೆಗೆ 2.18 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ಆದರೆ ಬಿತ್ತನೆಯಾದ ಪ್ರದೇಶಗಳಲ್ಲೂ ಮಳೆಯ ಸಿಂಚನ ಇಲ್ಲದೆ ರಾಗಿ, ಅವರೆ, ಹಲಸಂದೆ ಸೇರಿದಂತೆ ಹಲವು ಬೆಳೆಗಳು ಬಾಡಲಾರಂಭಿಸಿವೆ.
ಮಳೆ ಬಾರದ ಹಿನ್ನೆಲೆಯಲ್ಲಿ ಈಗಾಗಲೇ ಬಿತ್ತನೆಯಾಗಿರುವ ಬೆಳೆ ಉಳಿಸಿಕೊಳ್ಳುವುದೇ ರೈತರಿಗೆ ಸವಾಲಾಗಿದೆ. ನೀರಿನ ಲಭ್ಯತೆ ಇರುವ ರೈತರು ಬೆಳೆ ರಕ್ಷಿಸಲು ಪರ್ಯಾಯ ನೀರಾವರಿ ವ್ಯವಸ್ಥೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಈದಿನ.ಕಾಮ್ ಜೊತೆಗೆ ಮಾತನಾಡಿದ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ತಜ್ಞ ಪ್ರಶಾಂತ್, “ಈ ಪರಿಸ್ಥಿತಿಯಲ್ಲಿ ರೈತರು ಹೊಸದಾಗಿ ಬಿತ್ತನೆ ಮಾಡುವ ಬದಲು ಈಗಾಗಲೇ ಇರುವ ಬೆಳೆಯನ್ನು ಉಳಿಸಿಕೊಳ್ಳಲು ಆದ್ಯತೆ ನೀಡಬೇಕು. ನೀರಿನ ಲಭ್ಯತೆ ಇರುವವರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಬೆಳೆ ಸಂರಕ್ಷಣೆಗೆ ಮುಂದಾಗಬೇಕು,” ಎಂದು ಸಲಹೆ ನೀಡಿದ್ದಾರೆ.
“ಜೈವಿಕ ಗೊಬ್ಬರದ ಬಳಕೆಯಿಂದ ಗಿಡಗಳಿಗೆ ಹೆಚ್ಚಿನ ಪೋಷಕಾಂಶ ಹಾಗೂ ಶಕ್ತಿ ದೊರೆಯಲಿದ್ದು, ಬೆಳೆ ಇಳುವರಿ ಸುಧಾರಿಸಲು ಸಹಕಾರಿಯಾಗುತ್ತದೆ. ತೋಟಗಳಲ್ಲಿ ಹಸಿರು ಹೊದಿಕೆ (ಮಲ್ಚಿಂಗ್) ವ್ಯವಸ್ಥೆ ಮಾಡುವುದರಿಂದ ಮಣ್ಣಿನಲ್ಲಿನ ತೇವಾಂಶ ಉಳಿಸಿಕೊಳ್ಳಲು ಹಾಗೂ ನೀರು ಆವಿಯಾಗುವುದನ್ನು ಕಡಿಮೆ ಮಾಡಲು ಸಾಧ್ಯ” ಎಂದು ಅವರು ತಿಳಿಸಿದ್ದಾರೆ.
ತಿಪಟೂರು ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಶಂಕರ್ ಮಾತನಾಡಿ “ಮುಂದಿನ 15 ದಿನಗಳವರೆಗೆ ಜಿಲ್ಲೆಯಲ್ಲಿ ಗಮನಾರ್ಹ ಮಳೆಯ ಮುನ್ಸೂಚನೆ ಕಾಣಿಸುತ್ತಿಲ್ಲ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ತೆಂಗು ಮತ್ತು ಅಡಿಕೆ ಬೆಳೆಯಲಾಗಿದೆ. ಅವುಗಳನ್ನು ಉಳಿಸಿಕೊಳ್ಳಲು ರೈತರು ಈಗಿನಿಂದಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಮಳೆ ಇಲ್ಲದೆ ಹೊಸದಾಗಿ ಬಿತ್ತನೆ ಮಾಡಿದರೆ ರೈತರಿಗೆ ಮತ್ತಷ್ಟು ನಷ್ಟವಾಗುವ ಸಾಧ್ಯತೆ ಇದೆ” ಎಂದು ಎಚ್ಚರಿಸಿದ್ದಾರೆ.
ಮಳೆ ಕೊರತೆಯ ಪರಿಣಾಮ ಜಿಲ್ಲೆಯಾದ್ಯಂತ ಬರದ ಪರಿಸ್ಥಿತಿ ತೀವ್ರಗೊಳ್ಳುತ್ತಿದೆ. ಈಗಾಗಲೇ ಜಿಲ್ಲೆಯ ಒಂಬತ್ತು ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ. ಎರಡನೇ ಪಟ್ಟಿಯಲ್ಲಿ ತಿಪಟೂರು ತಾಲ್ಲೂಕಿನ ಹೆಸರೂ ಸೇರುವ ಸಾಧ್ಯತೆ ಇದೆ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಒಟ್ಟಿನಲ್ಲಿ, ಸೆಪ್ಟೆಂಬರ್ನಲ್ಲಿ ಸುರಿಯಬೇಕಿದ್ದ ಮಳೆಯ ಬದಲು ಸುಡುಬಿಸಿಲು ಆವರಿಸಿರುವುದು ಜಿಲ್ಲೆಯ ಕೃಷಿ ಹಾಗೂ ಜನಜೀವನಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಮಳೆ ಕೊರತೆ ಮುಂದುವರಿದರೆ ಈಗಾಗಲೇ ಬಾಡುತ್ತಿರುವ ಬೆಳೆಗಳಷ್ಟೇ ಅಲ್ಲದೆ, ತೆಂಗು, ಅಡಿಕೆ ತೋಟಗಳ ಮೇಲೂ ಗಂಭೀರ ಪರಿಣಾಮ ಬೀರುವ ಆತಂಕ ರೈತರನ್ನು ಕಾಡುತ್ತಿದೆ. ಮಳೆಯ ನಿರೀಕ್ಷೆಯಲ್ಲಿರುವ ರೈತರು, ಬಿಸಿಲಿನ ಝಳಕ್ಕೆ ಬಸವಳಿದಿರುವ ಜನರು, ಇಬ್ಬರ ಕಣ್ಣುಗಳೂ ಈಗ ಆಕಾಶದತ್ತ ನೆಟ್ಟಿವೆ.





