ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ರಾಜ್ಯ ಮಟ್ಟದ ಮಾಧ್ಯಮ ಹಬ್ಬ “ಸಂಭ್ರಮ-2026” ಕ್ಕೆ ಈಗಾಗಲೇ ವೇದಿಕೆ ಸಜ್ಜಾಗಿದ್ದು, ಈ ಮಾಧ್ಯಮ ಹಬ್ಬಕ್ಕೆ ಸಾಹೇ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ ಲಿಂಗೇಗೌಡ ಸಂಭ್ರಮ-2026ರ ಲೋಗೋವನ್ನು ಬಿಡುಗಡೆಗೊಳಿಸುವುದರ ಮೂಲಕ ಚಾಲನೆಯನ್ನು ನೀಡಿದರು.
ತುಮಕೂರು ನಗರದ ಎಸ್ಎಸ್ಐಟಿ ಕ್ಯಾಂಪಸ್ನ ಚಾಣಕ್ಯ ಬ್ಲಾಕ್ ಬಳಿ “ಸಂಭ್ರಮ-2026”ರ ಲೋಗೋ ಲಾಂಚ್ ಮಾಡಿ ಮಾತನಾಡಿದ ಅವರು, ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಿಂದ ಏಪ್ರಿಲ್ 23 ಮತ್ತು 24 ರಂದು ನಡೆಯುವ ರಾಜ್ಯಮಟ್ಟದ ಮಾಧ್ಯಮ ಹಬ್ಬ ‘ಸಂಭ್ರಮ-2026′ ಕಾರ್ಯಕ್ರಮವನ್ನು ‘ಪರಿಸರ ಪತ್ರಿಕೋಧ್ಯಮ’ ಪರಿಕಲ್ಪನೆಯಲ್ಲಿ ರೂಪಿಸಿದ್ದು, ಈ ಕಾರ್ಯಕ್ರಮವನ್ನು ‘ಪೌರ ಕಾರ್ಮಿಕರಿಗೆ ಸಮರ್ಪಣೆ’ ಮಾಡಲಾಗುತ್ತಿದೆ ಎಂದು ಹೇಳಿದರು.
ಪೌರಕಾರ್ಮಿಕರು ಲೋಕದ ಕಸವನ್ನು ಬಾಚಿ ಬಳಿಯುವುದರಲ್ಲೇ ತಮ್ಮ ಜೀವ-ಜೀವನ ತೇಯುತ್ತಿದ್ದಾರೆ. ಇವರ ಋಣ ಈ ನಾಗರಿಕ ಸಮಾಜದ ಮೇಲಿದೆ. ಈ ಹಿನ್ನೆಲೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯ 35 ವಾರ್ಡ್ ಗಳಲ್ಲಿ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಸ್ವಚ್ಛತಾ ಸೇನಾನಿಗಳನ್ನು ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವತಿಯಿಂದ ಗೌರವಿಸಲಾಗುತ್ತಿದೆ. ಇದು ಸಿದ್ದಾರ್ಥ ಮಾಧ್ಯಮ ಕಾಲೇಜಿನ ಸಾಮಾಜಿಕ ಕೆಲಸ. ಇಂತಹ ಸಮಾಜಮುಖಿ ಕೆಲಸದ ಮೂಲಕ ನಮ್ಮನ್ನೆ ನಾವು ಗೌರವಿಸಿಕೊಂಡಂತೆ. ಬನ್ನಿ ಈ ಕಾಯರ್ಕ್ರಮದಲ್ಲಿ ಭಾಗವಹಿಸೋಣ-ಸಂಭ್ರಮಿಸೋಣ. ನಮ್ಮ ಕಸ, ನಮ್ಮ ಜವಾಬ್ದಾರಿ – ಸ್ವಚ್ಛ ನಗರ ನಮ್ಮೆಲ್ಲರ ಹರಿವು ಎಂದು ಸಾಹೇ ಉಪಕುಲಪತಿ ಡಾ. ಕೆ.ಬಿ ಲಿಂಗೇಗೌಡ ತಿಳಿಸಿದರು.
ಸಂಭ್ರಮ 2026ರ ಏಪ್ರಿಲ್ ತಿಂಗಳ 23 ಮತ್ತು 24 ರಂದು ಅದ್ದೂರಿಯಾಗಿ ನಡೆಯಲಿದ್ದು, ಮಾಧ್ಯಮಕ್ಕೆ ಸಂಬಂಧಿಸಿದಂತೆ ಎಂಟು ಸ್ಪರ್ಧೆಗಳು ಆಯೋಜಿಸಿದ್ದು, ರಾಜ್ಯಾದಾದ್ಯಂತ ಪದವಿ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಈಗಾಗಲೇ ಈ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಎಸ್ ಆರ್ ಆರಾಧ್ಯ, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ.ಟಿ ಮುದ್ದೇಶ್, ಸಹಾಯಕ ಪ್ರಾಧ್ಯಾಪಕರಾದ ಡಾ. ಜ್ಯೋತಿ ಸಿ, ಶ್ವೇತಾ ಎಂ.ಪಿ, ರೇಡಿಯೋ ವಿಭಾಗದ ಗೌತಮ್ ಎ.ವಿ, ರವಿ ಕುಮಾರ್, ಮಧುಶ್ರೀ, ಹರೀಶ್ ಕುಮಾರ್, ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಮಣಿ ಎಚ್.ಜಿ, ಆಶಾ ಎಚ್.ಎನ್,, ರೇಖಾ ಯು, ಹಾಗೂ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು, ಎಸ್ಎಸ್ಸಿಎಂಎಸ್ನ ಬೋಧಕೇತರ ಸಿಬ್ಬಂದಿಗಳಾದ ಮಂಜುಳಾ ಟಿ ವಿ, ಶಿಲ್ಪ ಜಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.





