ಮೊಬೈಲ್‌ನಲ್ಲಿ ರೀಲ್ಸ್ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ನೀರು ತುಂಬಿದ್ದ ಕಲ್ಲು ಕ್ವಾರಿಗೆ ಬಿದ್ದು, ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಗಳನ್ನು 10ನೇ ಓದುತ್ತಿದ್ದ ಮಾಳಮಡ್ಡಿ ನಿವಾಸಿ ಶ್ರೇಯಸ್ ನವಲೆ (16) ಮತ್ತು ಸಪ್ತಾಪುರದ ದ್ರುವ ದಾಸರ್ (16) ಎಂದು ಗುರುತಿಸಲಾಗಿದೆ.
ಸೋಮವಾರ, ಈ ಇಬ್ಬರೂ ಸೇರಿದಂತೆ ಆರು ವಿದ್ಯಾರ್ಥಿಗಳು ಸ್ನೇಹಿತರ ಮೆನೆಗೆ ಹೋಗುವುದಾಗಿ ಹೇಳಿ ಹೊರ ಹೋಗಿದ್ದರು. ಈ ವೇಳೆ, ಆರೂ ಮಂದಿ ಮನ್ಸೂರ್ ರಸ್ತೆಯಲ್ಲಿದ್ದ ಕಲ್ಲು ಕ್ವಾರಿಗೆ ತೆರಳಿದ್ದಾರೆ. ಕ್ವಾರಿಯ ರೀಲ್ಸ್ ಮಾಡುವಾಗ ನೀರಿನಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮೃತ ಶ್ರೇಯಸ್ ಮತ್ತು ದ್ರುವ ನೀರಿನಲ್ಲಿ ನಿಂತು ರೀಲ್ಸ್ ಮಾಡುತ್ತಿದ್ದರು. ಈ ವೇಳೆ, ಆಳದ ಜಾಗಕ್ಕೆ ಕಾಲಿಟ್ಟಿದ್ದು, ನೀರಿನಲ್ಲಿ ಮುಳುಗಿದ್ದಾರೆ ಎಂದು ಹೇಳಲಾಗಿದೆ. ಉಳಿದ ನಾಲ್ವರು ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ಧಾವಿಸಿ, ಘಟನೆಯ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಶ್ರೇಯಸ್‌ನ ಮೃತದೇಹವನ್ನು ಸೋಮವಾರ ಸಂಜೆ ಹೊರತೆಗೆಯಲಾಗಿತ್ತು. ದ್ರುವನ ಮೃತದೇಹ ಸಿಕ್ಕಿರಲಿಲ್ಲ. ಆತನ ಮೃಹದೇಹ ಮಂಗಳವಾರ ಸಿಕ್ಕಿದೆ. ಬಾಲಕರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.