ಮೈಸೂರು ಜಿಲ್ಲೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಹೆಚ್‍ಡಿ ಕೋಟೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯಾಧಿಕಾರಿಗಳ ಕಚೇರಿ ಸಾರ್ವಜನಿಕ ಆಸ್ಪತ್ರೆ ಹೆಚ್.ಡಿ.ಕೋಟೆ ಇವರ ಸಹೋಗದೊಂದಿಗೆ, ‘ವಿಕಲಚೇತನರ ಮನೆ ಬಾಗಿಲಿಗೆ ಯುಡಿಐಡಿ ಕಾರ್ಡ್’ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ತಿಳಿಸಿದರು.
ಹೆಗ್ಗಡದೇವನಕೊಟೆ ತಾಲ್ಲೂಕಿನಲ್ಲಿ 300 ರಿಂದ 350 ವಿಶೇಷಚೇತನರಿಗೆ ಯುಡಿಐಡಿ ಕಾರ್ಡ್ ಮಾಡಿಸಬೇಕಾಗಿದೆ. ಆದ್ದರಿಂದ, ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಸರ್ಕಾರದಿಂದ ಬರುವ ಸವಲತ್ತುಗಳನ್ನು ವಿಶೇಷ ಚೇತನರಿಗೆ ನೀಡಬೇಕಾದರೆ ಯುಡಿಐಡಿ ಕಾರ್ಡ್ ಕಡ್ಡಾಯವಾಗಿರುತ್ತದೆ. ಆದುದರಿಂದ, ಫಲಾನುಭವಿಗಳು ಈ ಶಿಬಿರವನ್ನು ಸದುಪಯೋಗಪಡಿಸಿ ಪಡೆಸಿಕೊಂಡು ಯುಡಿಐಡಿ ಕಾರ್ಡನ್ನು ಪಡೆದುಕೊಳ್ಳಿ ” ಎಂದು ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಪೂರ್ಣಿಮಾ ಮಾತನಾಡಿ ಕೆಲವು ದಿನಗಳಿಂದ ಆಡಳಿತ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತಿದ್ದು, ಮುಂದಿನ ದಿನಗಳಲ್ಲಿ ಪ್ರತಿ 15 ದಿನಕ್ಕೊಮ್ಮೆ ವಿಶೇಷ ಚೇತನರಿಗೆ ಶಿಬಿರವನ್ನು ಆಯೋಜಿಸಿ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುವ ಮಾಹಿತಿಯನ್ನು ನೀಡಲಾಗುವುದು ಎಂದು ಹೇಳಿದರು.
ತಾಲೂಕು ದಂಡಾಧಿಕಾರಿ ಶ್ರೀನಿವಾಸ್ ಮಾತನಾಡಿ ‘ಆರೋಗ್ಯ ಇಲಾಖೆ ಹಾಗೂ ವಿಶೇಷಚೇತನರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯಿಂದ ವತಿಯಿಂದ ಈ ಶಿಬಿರವನ್ನು ನಡೆಸುತ್ತಿರುವುದು ತುಂಬಾ ಸಂತೋಷಕರವಾದ ವಿಷಯ. ಸರ್ಕಾರಿ ಸೌಲಭ್ಯವನ್ನು ತೆಗೆದುಕೊಳ್ಳಬೇಕಾದರೆ ಯುಡಿಐಡಿ ಕಾರ್ಡ್ ಬೇಕಾಗುತ್ತದೆ. ಆದುದರಿಂದ, ಈ ಕಾರ್ಯಕ್ರಮಕ್ಕೆ ಹೆಚ್ಚಿನ ಫಲಾನುಭವಿಗಳು ಬಂದು ಯುಡಿಐಡಿ ಕಾರ್ಡನ್ನು ಪಡೆದುಕೊಳ್ಳಿ ಎಂದು ಕರೆ ನೀಡಿದರು.’

ಈ ಕಾರ್ಯಕ್ರಮದಲ್ಲಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ ಭಾರತ ಸರ್ಕಾರದ ನಶೆಮುಕ್ತ ಭಾರತ ಅಭಿಯಾನ ಯೋಜನೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಶಿಬಿರಲ್ಲಿ ಒಟ್ಟು150 ವಿಶೇಷಚೇತನರಿಗೆ ಯುಡಿಐಡಿ ಕಾರ್ಡ್ ಮಾಡಿಸಲು ತಜ್ಞ ವೈದ್ಯರಿಂದ ತಪಾಸಣೆಯನ್ನು ಮಾಡಿಸಲಾಯಿತು. ತಾಲ್ಲೂಕು ವಿಕಲಚೇತನರ ಕಾರ್ಯಕರ್ತ ಮಹದೇವಯ್ಯ ಪ್ರಾಸ್ತವಿಕವಾಗಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ‘ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ – ಆರೋಗ್ಯ ಕರ್ನಾಟಕ ‘ ಅಂತಾರಾಷ್ಟ್ರೀಯ ಕಾರ್ಯಾಗಾರ
ಶಿಬಿರದಲ್ಲಿ ಸಾರ್ವಜನಿಕ ಆಸ್ಪತ್ರೆಯ ಕಣ್ಣಿನ ತಜ್ಞ ಡಾ. ರಾಜಶೇಖರ್, ಕಿವಿ ಮತ್ತು ಮೂಗಿನ ತಜ್ಞ ಡಾ. ಶಿವಕುಮಾರ್, ಮೂಳೆ ತಜ್ಞ ಡಾ. ಶ್ರೀನಿವಾಸ್ ಮೂರ್ತಿ, ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮದ ಶಿಕ್ಷಕರಾದ ಗಿರೀಶ್, ಮಹದೇವ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರವಿರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕರಾದ ಗಾಯತ್ರಿ, ಶಾಂತ, ವಿಶೇಷಚೇತನರ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರು, ವಿಶೇಷ ಚೇತನರು , ಹಿರಿಯ ನಾಗರಿಕರು ಸಾರ್ವಜನಿಕರು, ಸೇರಿದಂತೆ ಇನ್ನಿತರರು ಇದ್ದರು.