ಉಡುಪಿ ಜಿಲ್ಲೆಯ ಕಾಪು ಠಾಣಾ ವ್ಯಾಪ್ತಿಯಲ್ಲಿ ಮೃತಪಟ್ಟ ವ್ಯಕ್ತಿಯ ಸಹೋದರ ಅಂತ್ಯಕ್ರಿಯೆಗೆ ಶವ ಸ್ವೀಕರಿಸಲು ಒಪ್ಪದ ಕಾರಣ ಸಮಾಜ ಸೇವಕ ವಿಶು ಶೆಟ್ಟಿ ಅವರೇ ಮುಂದೆ ನಿಂತು ಮೃತನ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ರುದ್ರ ಭೂಮಿಯಲ್ಲಿ ನೆರವೇರಿಸಿದ ಘಟನೆ ಸೋಮವಾರ ನಡೆದಿದೆ.
ಮೃತ ವ್ಯಕ್ತಿಯ ಬಗ್ಗೆ ಕಾಪು ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಮೃತನ ಸಹೋದರನನ್ನು ಕರೆಯಿಸಿ ಕಾನೂನು ಪ್ರಕ್ರಿಯೆ ನಡೆಸಿದರು. ಕೊನೆಗೆ ಅಂತ್ಯಸಂಸ್ಕಾರ ನಡೆಸಲು ಮೃತ ದೇಹವನ್ನು ಪಡೆಯಲು ಸಹೋದರ ನಿರಾಕರಿಸಿದರು. ಆತನ ಮನವೊಲಿಸುವ ಕೆಲಸವೂ ವಿಫಲವಾಯಿತು. ಕೊನೆಗೆ ಜಿಲ್ಲಾಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ನಂತರ ವಿಶು ಶೆಟ್ಟಿ ಅವರೇ ಶವವನ್ನು ಸ್ವೀಕರಿಸಿ, ಮೃತ ವ್ಯಕ್ತಿಯ ಧರ್ಮದ ಪ್ರಕಾರ ದಫನ ಕಾರ್ಯ ನಡೆಸಿದರು.
ಕಾರ್ಯಾಚರಣೆಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಹುಸೇನ್, ರಾಮದಾಸ್ ಪಾಲನ್ ಉದ್ಯಾವರ ಹಾಗೂ ಉದ್ಯಾವರದ ಕನಸಿನ ಮನೆಯ ಶಿವ ನೆರವಾದರು. ಅಂಬಲಪಾಡಿ ಕೃಷ್ಣ ಜೆಸಿಬಿ ನೀಡಿ ಸಹಕರಿಸಿದರು.
ಈ ಪ್ರಕರಣವನ್ನು ಗಮನಿಸಿದಾಗ ಸಹೋದರತೆ, ಬಾಂಧವ್ಯ ಎಲ್ಲಾ ಮರೀಚಿಕೆಯೇ ಎಂಬ ಪ್ರಶ್ನೆ ಕಾಡದಿರದು ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.