ರಾಜ್ಯ ಕಾಂಗ್ರೆಸ್ ಸರಕಾರ ಗ್ರಾಮ ಪಂಚಾಯತ್ ಗಳಲ್ಲಿ ಸರಾಗವಾಗಿ ಸಿಗುತ್ತಿದ್ದ 9/11 ಅಥವಾ ಏಕ ವಿನ್ಯಾಸ ನಕ್ಷೆ ಕೊಡುವ ಜವಾಬ್ದಾರಿಯನ್ನು ನಗರ ಪ್ರಾಧಿಕಾರಕ್ಕೆ ಹಸ್ತಾಂತರಿಸಿ ಅಧಿಕೃತ ಆದೇಶ ಮಾಡಿದ ಹಿನ್ನೆಲೆಯಲ್ಲಿ 9/11ಗಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ಉಡುಪಿಯ ಆದಿಉಡುಪಿಯಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿಯಂತೂ ಮಧ್ಯವರ್ತಿಗಳ ಮತ್ತು ಭ್ರಷ್ಟಾಚಾರ ತುಂಬಿದ ಸುಲಿಗೆಯ ತಾಣವಾಗಿದೆ. ಬಡವರ ಪರವಾಗಿ ಅದೆಷ್ಟೇ ಮಾತನಾಡಿದರೂ ನಿಯಮದ ಹೆಸರಲ್ಲಿ ಜನಸಾಮಾನ್ಯರಿಗೆ ಅಧಿಕಾರಿಗಳು ನಿತ್ಯ ಅಲೆದಾಡಿಸುತ್ತಿದ್ದಾರೆ. ಅನ್ಯಾಯ ಸರಿಪಡಿಸಿ ಎಂದು ಬಿಜೆಪಿ ಹೋರಾಟ ಮಾಡಿದರೆ 9/11 ಕಾನೂನು ಹಿಂದಿನ ಸರಕಾರದ್ದೆಂದು ಸುಳ್ಳು ಹೇಳಿ ಕಾಂಗ್ರೆಸ್ ಮುಖಂಡರು ಜನರ ದಾರಿ ತಪ್ಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜುಲೈ 28ರಂದು ಸೋಮವಾರ ಬೆಳಿಗ್ಗೆ ಗಂಟೆ 11.00ಕ್ಕೆ ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.
ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪಕ್ಷದ ಪ್ರಮುಖರು ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾವಿರಾರು ಕಡತ ವಿವಿಧ ತಾಲೂಕಿನ ಪ್ರಾಧಿಕಾರಗಳಲ್ಲಿ ತುಂಬಿ ತುಳುಕುತ್ತಿದ್ದು, ಅದನ್ನು ಸರಿಪಡಿಸುವ ಬದಲು ಕಾಂಗ್ರೆಸ್ ಪಕ್ಷ ಜನರಿಗೆ ತಪ್ಪು ಮಾಹಿತಿ ಒದಗಿಸುತ್ತಿದೆ. ಈ ಜನಪರ ಹೋರಾಟಕ್ಕೆ ಪಕ್ಷದ ಎಲ್ಲಾ ಮೋರ್ಚಾಗಳು ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು, ಸಂಸದರು, ಶಾಸಕರು ಬೆಂಬಲ ನೀಡಲಿದ್ದು, ಆಸಕ್ತ ಸಾರ್ವಜನಿಕರು ಕೂಡಾ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಮಾತನಾಡಿ, ಏಕ ವಿನ್ಯಾಸ ನಕ್ಷೆ ಗೊಂದಲ ಇಡೀ ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿದೆ. ಈ ಸಮಸ್ಯೆಯ ಮೂಲವನ್ನು ಜನತೆಗೆ ಮನವರಿಕೆ ಮಾಡಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬಲವಾದ ಹೋರಾಟ ಅತ್ಯಗತ್ಯ. ಈ ನಿಟ್ಟಿನಲ್ಲಿ ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕ ಬಂಧುಗಳು ಒಂದಾಗಿ ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ವಿಜಯ ಕೊಡವೂರು, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ವಿಠಲ ಪೂಜಾರಿ, ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರವೀಂದ್ರ ತಿಂಗಳಾಯ ಹಾಗೂ ಪಕ್ಷದ ಪ್ರಮುಖರು ಮತ್ತು ವಿವಿಧ ಸ್ತರದ ಪದಾಧಿಕಾರಿಗಳು ಉಪಸ್ಥಿತರಿದ್ದರು.