ಸಂವಿಧಾನವು ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದರೂ, ದಲಿತರು ಇನ್ನೂ ಭೂಮಿ ಮತ್ತು ವಸತಿ ಹಕ್ಕಿಗಾಗಿ ಹೋರಾಡುತ್ತಲೇ ಇದ್ದಾರೆ. ಭೂಮಿ ಎಂಬುದು ಕೇವಲ ಆರ್ಥಿಕ ಸಂಪತ್ತಲ್ಲ, ಅದು ಗೌರವದ, ಬದುಕಿನ ಮತ್ತು ಸ್ವಾಭಿಮಾನದ ಪ್ರತೀಕ. ಆದರೆ ಶತಮಾನಗಳಿಂದಲೂ ನಡೆಯುತ್ತಿರುವ ಜಾತಿ ಆಧಾರಿತ ಅಸಮಾನತೆ ಈ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲು ಪ್ರಯತ್ನಿಸಿದೆ. ಇಂತಹ ಪರಿಸ್ಥಿತಿಯಲ್ಲಿ ದಲಿತರ ಭೂಮಿ ಮತ್ತು ವಸತಿ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟ ಕೇವಲ ಒಂದು ವರ್ಗದ ಹೋರಾಟವಲ್ಲ — ಅದು ಸಮಾನತೆಯ, ಮಾನವೀಯತೆಯ ಮತ್ತು ನ್ಯಾಯದ ಹೋರಾಟವಾಗಿದೆ. ಎಲ್ಲರಿಗೂ ಸಮಾನ ಹಕ್ಕು ಸಿಗುವ ದಿನ ಬರುವವರೆಗೂ ಈ ಹೋರಾಟ ನಿಲ್ಲಬಾರದು. ಆ ದೃಷ್ಠಿಯಿಂದ ಅಸಮಾನತೆ ತಾರತಮ್ಯ ಇನ್ನೆಷ್ಠು ದಿನ ? ದಲಿತರ ಭೂಮಿ ವಸತಿ ಹಕ್ಕಿಗಾಗಿ ಹೋರಾಡೋಣ ಎಂಬ ಶೀರ್ಷಿಕೆಯಡಿಯಲ್ಲಿ ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲೆಯ ಪ್ರಥಮ ಜಿಲ್ಲಾ ಸಮಾವೇಶ ಕುಂದಾಪುರದ ಹಂಚು ಕಾರ್ಮಿಕರ ಭವನದಲ್ಲಿ ಇಂದು ನಡೆಯಿತು.

ಕರ್ನಾಟಕ ದಲಿತ ಹಕ್ಕುಗಳ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರಾಜಣ್ಣ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಮಾವೇಶವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಅಸ್ಪೃಶ್ಯರ ನೋವು, ಸಂಕಟಗಳನ್ನು ಇಂದಿಗೂ ನಾವು ಕಾಣಬಹುದು. ಸಮಾಜದಲ್ಲಿ ಇರುವ ಈ ಅಸಮಾನತೆ ಮತ್ತು ಜಾತಿ ತಾರತಮ್ಯಗಳ ವಿರುದ್ಧ ಹೋರಾಟ ನಡೆಸಿದ ಮಹನೀಯರ ಚಿಂತನೆಗಳನ್ನು ನಾವು ನೆನಪಿಸಿಕೊಳ್ಳಬೇಕು. ಜ್ಯೋತಿ ಬಾ ಫುಲೆ, ಸಾವಿತ್ರಿ ಬಾ ಫುಲೆ, ನಾರಾಯಣಗುರು, ಬಸವಣ್ಣ, ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ನಮ್ಮ ಜಿಲ್ಲೆಯ ಮಹನೀಯ ಕುದ್ಮುಲ್ ರಂಗರಾವ್ ಅವರೆಲ್ಲರೂ ಜಾತಿ ಮತ್ತು ಅಸಮಾನತೆಯ ವಿರುದ್ಧ ಹೋರಾಟ ಮಾಡಿದವರು. ಅವರ ಚಿಂತನೆಗಳಿಂದಲೇ ಇಂದು ನಮ್ಮ ಸಂಘಟನೆ ಬೆಳೆಯುತ್ತಿದೆ ಎಂದು ಹೇಳಿದರು.
ಇಂದಿಗೂ ದಲಿತರಲ್ಲಿ ಶೇಕಡಾ 68 ರಷ್ಟು ಜನರಿಗೆ ಭೂಮಿ ಇಲ್ಲ, ವಾಸಿಸಲು ಮನೆ ಇಲ್ಲ, ಉದ್ಯೋಗವಿಲ್ಲ. ಬಡವರು ದುಡಿದು ಬದುಕಬೇಕಾದ ಪರಿಸ್ಥಿತಿ ಇದೆ. ಸಮಾಜದ ಬೌದ್ಧಿಕ ವಿನ್ಯಾಸವೇ ದಲಿತರನ್ನು ಶ್ರಮಿಕರಾಗಿ, ಕೂಲಿಕಾರರಾಗಿ ಬದುಕುವಂತೆ ಮಾಡಿದೆ. ಜಮೀನು, ಶಿಕ್ಷಣ, ಗೌರವ ಎಲ್ಲದರ ಮೇಲೂ ಅವರಿಗೆ ನಿರ್ಬಂಧ ಹೇರುವ ಕೆಲಸ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂದು 50 ಎಕರೆ, 100 ಎಕರೆ, 500 ಎಕರೆ ಭೂಮಿ ಹೊಂದಿರುವವರು ಕೆಲವೇ ಜನರು. ಆದರೆ 50 ಶೇಕಡಾ ಆಸ್ತಿ ಕೇವಲ 1 ಶೇಕಡಾ ಜನರ ಕೈಯಲ್ಲಿದೆ. ದುಡಿಯುವ ಜನರು, ಶ್ರಮಿಕರು, ದಮನಿತರು ಎಲ್ಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ವಿದ್ಯಾಭ್ಯಾಸ ಕಡಿಮೆ, ಬೆರಳಣಿಕೆಯಷ್ಟೇ ಉನ್ನತ ಹುದ್ದೆಗಳಲ್ಲಿರುವವರು. ಈ ಅನ್ಯಾಯದ ವಿರುದ್ಧ ಹೋರಾಟದ ಅಗತ್ಯ ಇದೆ ಎಂದರು. ನಮ್ಮ ಸಂಘಟನೆ ಪ್ರತಿ ಗ್ರಾಮದಲ್ಲಿಯೂ ಸಂಚರಿಸಿ, ಅಲ್ಲಿ ಎಷ್ಟು ಜನರಿಗೆ ಭೂಮಿ ಇಲ್ಲ, ವಿದ್ಯಾಭ್ಯಾಸವಿಲ್ಲ, ಉದ್ಯೋಗವಿಲ್ಲ ಎಂಬ ಅಂಕಿ ಅಂಶ ಸಂಗ್ರಹ ಮಾಡುತ್ತದೆ. ಆ ಮಾಹಿತಿಯ ಆಧಾರದ ಮೇಲೆ ಜನರಿಗೆ ಜಾಗೃತಿ ಮೂಡಿಸಿ, ಹೋರಾಟದ ಮೂಲಕ ಅವರ ಹಕ್ಕುಗಳಿಗಾಗಿ ಹೋರಾಟ ಮಾಡುವುದು ನಮ್ಮ ಧ್ಯೇಯ ಎಂದು ಹೇಳಿದರು.

ರಾಜ್ಯ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಸ್ವಾತಂತ್ರ್ಯ ಸಿಕ್ಕು 78 ವರ್ಷಗಳಾದರೂ ಅಸ್ಪೃಶ್ಯತೆ ದೇಶದ ವಿವಿಧ ಭಾಗಗಳಲ್ಲಿ ಇನ್ನೂ ಬೇರೆ ಬೇರೆ ರೂಪಗಳಲ್ಲಿ ನಡೆಯುತ್ತಿದೆ. ನಮ್ಮ ಜಿಲ್ಲೆಯಲ್ಲಿ ಕಡಿಮೆ ಇದ್ದರೂ, ಬೇರೆ ಜಿಲ್ಲೆಗಳಲ್ಲಿ ಅದು ವಿಭಿನ್ನ ರೀತಿಯಲ್ಲಿ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಕೇವಲ ಸಂಘಟನೆ ನಿರ್ಮಾಣ ಮಾಡಿದಷ್ಟರಲ್ಲಿ ಸಾಕಾಗುವುದಿಲ್ಲ, ಅದಕ್ಕಿಂತ ಹೆಚ್ಚಾಗಿ ಸಾಮಾಜಿಕ ಹಾಗೂ ರಾಜಕೀಯ ಪ್ರಜ್ಞೆಯನ್ನು ಬೆಳಸಿಕೊಳ್ಳಬೇಕಾಗಿದೆ. ಮತದಾನ ಮಾಡುವುದು ಒಂದು ರೀತಿಯ ರಾಜಕೀಯ ಪ್ರಜ್ಞೆ ಹೌದು, ಆದರೆ ನಾವು ಯಾರಿಗೆ ಮತ ನೀಡುತ್ತೇವೆ ಎಂಬುದರ ಅರಿವು ನಮಗೆ ಬೇಕಾಗಿದೆ. ಸರ್ಕಾರಗಳು ಬದಲಾದರೂ ನಿರುದ್ಯೋಗ, ಬೆಲೆ ಏರಿಕೆ, ಬಡತನ ಇವುಗಳ ಸ್ಥಿತಿ ಬದಲಾಗಿಲ್ಲ. ಶ್ರೀಮಂತರಾದವರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ, ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ತಮ್ಮ ಮೊಬೈಲ್ ಗೆ ಬಂದ ವೀಡಿಯೋ ಬಗ್ಗೆ ತಿಳಿಸುತ್ತಾ, ಸಾವಿರ ವರ್ಷಗಳ ಹಿಂದೆ ಗಜಿನಿ ಮಹಮ್ಮದ್ ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿದಾಗ, ಹೊರಗೆ 50 ಸಾವಿರ ಜನ ಇದ್ದರೂ ಯಾರಿಗೂ ಒಳಗೆ ಹೋಗಿ ವಿರೋಧಿಸಲು ಧೈರ್ಯ ಇರಲಿಲ್ಲ. ಯಾಕೆಂದರೆ ದೇವಸ್ಥಾನದ ಹೊರಗೆ ನೆರೆದಿದ್ದ ಜನರಿಗೆ ದೇವಸ್ಥಾನದ ಒಳಗೆ ಪ್ರವೇಶ ಮಾಡುವ ಹಕ್ಕಿರಲಿಲ್ಲ. ದಾಳೀ ಮಾಡಿದರೂ ಸಹ ಒಳಗೆ ಹೋಗಿ ವಿರೋಧ ಮಾಡಲು ಒಂದು ರೀತಿಯ ಭಯವಿತ್ತು. ಅಂದಿನಿಂದಲೂ ಭಯದ ವಾತಾವರಣ ನಮ್ಮ ಸಮಾಜದಲ್ಲಿ ನಿರ್ಮಾಣಗೊಂಡಿತ್ತು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಬರೆದ ನಂತರವೂ ಭಯದ ಆ ವಾತಾವರಣ ಬೇರೆ ಬೇರೆ ರೂಪಗಳಲ್ಲಿ ಮುಂದುವರಿದಿದೆ ಎಂದು ಹೇಳಿದರು.
ಕುಂದಾಪುರದ ಶಕುಂತಳ ಎಂಬ ಮಹಿಳೆಯ ಮನೆಯಲ್ಲಿ ನಡೆದ ಹಲ್ಲೆಯ ಘಟನೆಯನ್ನೂ ನೆನಪಿಸಿದ ಅವರು, ಶಕುಂತಳ ಅವರ ಮನೆಯಲ್ಲಿ ಮದುವೆ ಸಮಾರಂಭದ ವೇಳೆ ದನದ ಮಾಂಸ ಮಾಡಿದರೆಂದು ಆರೋಪಿಸಿ ಹಲ್ಲೆ ಮಾಡಲಾಯಿತು. ಶಕುಂತಳ ಹಿಂದು, ಹಲ್ಲೆ ಮಾಡಿದವರೂ ಹಿಂದು ಇಂತಹ ವಿಚಿತ್ರ ಸ್ಥಿತಿ ನಮ್ಮ ಸಮಾಜದಲ್ಲಿ ನಿರ್ಮಾಣವಾಗಿದೆ. ಒಂದು ಕಡೆ ‘ನಾವು ಎಲ್ಲರೂ ಹಿಂದುಗಳು ಒಂದೇ ಎಂದು ಹೇಳುತ್ತೇವೆ, ಮತ್ತೊಂದು ಕಡೆ ರಾಜಕೀಯ ಶಡ್ಯಂತ್ರಗಳ ಮೂಲಕ ಸಮಾಜವನ್ನು ವಿಭಜಿಸುತ್ತೇವೆ ಎಂದು ಹೇಳಿದರು. ಉಡುಪಿ ಜಿಲ್ಲೆಯಲ್ಲಿ 25 ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವ ದಲಿತರು ಯಾರೂ ಇಲ್ಲ. ಸರ್ಕಾರದ ಅಂಕಿ ಅಂಶ ಪ್ರಕಾರ ಜಿಲ್ಲೆಯಲ್ಲಿ 305 ಕುಟುಂಬಗಳ ಕೈಯಲ್ಲಿ 11,597 ಎಕರೆ ಜಮೀನು ಇದೆ. ರಾಜ್ಯದಲ್ಲಿ 10,000 ವೈದ್ಯರಲ್ಲಿ ಕೇವಲ 6 ಮಂದಿ ಮಾತ್ರ ದಲಿತರು, ಉನ್ನತ ಹುದ್ದೆಗಳಲ್ಲಿ ಸಹ ದಲಿತರ ಸಂಖ್ಯೆ ತುಂಬಾ ಕಡಿಮೆ. ಇದು ಕೇವಲ ಸಾಮಾಜಿಕ ವಿಚಾರವಲ್ಲ, ರಾಜಕೀಯ ಸಂಬಂಧ ಹೊಂದಿದ ವಿಷಯವೂ ಆಗಿದೆ ಎಂದು ವಿಶ್ಲೇಷಿಸಿದರು. ನಾವು ಎಷ್ಟು ಹೋರಾಟ ಮಾಡಿದರೂ ಅದರ ಬಗ್ಗೆ ತಿಳುವಳಿಕೆ, ಅಧ್ಯಯನ ಮತ್ತು ರಾಜಕೀಯ ಪ್ರಜ್ಞೆ ಬೆಳೆಸದೇ ಇದ್ದರೆ ನಮ್ಮ ಹೋರಾಟ ಯಶಸ್ಸಾಗುವುದಿಲ್ಲ. ಸಮಾಜದ ಅಸಮಾನತೆ, ಭೂ ಹಕ್ಕು ಮತ್ತು ಶಿಕ್ಷಣದ ಹೋರಾಟಗಳಿಗೆ ವಿಚಾರಪೂರ್ಣ ನಾಯಕತ್ವ ಅಗತ್ಯವಿದೆ ಎಂದು ಹೇಳಿದರು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ, ನಮ್ಮ ಸುತ್ತಮುತ್ತ ಅಥವಾ ಮನೆಯೊಳಗೆ ದಲಿತರ ಬಗ್ಗೆ ಮಾತನಾಡುವಾಗ ಇನ್ನೂ ಬೇರೆ ರೀತಿಯ ಭಾವನೆಯಿಂದ ನೋಡುವ ಮನೋಭಾವನೆ ಇದೆ. ದಲಿತರನ್ನು ಮನೆ ಒಳಗೆ ಯಾಕೆ ಸೇರಿಸಿಕೊಳುತ್ತೀಯ ? ಎನ್ನುವಂತಹ ಮಾತುಗಳು ಇಂದಿಗೂ ಕೇಳಿ ಬರುತ್ತಿವೆ. ಇಂತಹ ಮನೋಭಾವನೆಗಳನ್ನು ಸಮಾಜದಿಂದ ಸಂಪೂರ್ಣವಾಗಿ ಹೋಗಲಾಡಿಸಬೇಕು” ಎಂದು ಹೇಳಿದರು. ಇಂತಹ ಅಸಮಾನತೆ ಹೋಗಲಾಡಿಸಲು ದಲಿತರು ಮತ್ತು ದಲಿತೇತರರು ಒಟ್ಟಾಗಿ ಸಂಘಟನೆಯಾಗಿ ಬಲಿಷ್ಠವಾದ ಹೋರಾಟ ನಡೆಸಬೇಕು. ಒಟ್ಟಾಗಿ ಸಂಘಟನೆಯ ಬುನಾದಿ ಕಟ್ಟಿದಾಗ ಮಾತ್ರ ಸಮಾನತೆ ಸಾಧ್ಯ. ಇಂತಹ ಸಮಾವೇಶಗಳು ಮತ್ತು ನಿರಂತರವಾದ ಅಧ್ಯಯನ, ತರಬೇತಿಗಳ ಮೂಲಕ ಮಾತ್ರ ಮನಸ್ಸಿನ ಬದಲಾವಣೆಯನ್ನು ತರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಇಂದಿಗೂ ಕೆಲವು ಊರುಗಳಲ್ಲಿ ಪರಿಶಿಷ್ಠ ಜಾತಿ ಮತ್ತು ಪಂಗಡದವರು ಊರಿನ ಆಚೆ ಮನೆ ಕಟ್ಟಬೇಕಾದ ಪರಿಸ್ಥಿತಿ ಮುಂದುವರಿದಿದೆ. ಇದು ಕೇವಲ ಕಾನೂನಿನಿಂದ ಹೋಗಲಾಡಿಸುವ ಸಮಸ್ಯೆಯಲ್ಲ, ಇದು ಸಮಾಜದ ಮನಸ್ಸಿನಲ್ಲಿ ಬೇರೂರಿರುವ ಅಸಮಾನತೆ. ಅದನ್ನು ಜನಸಾಮಾನ್ಯರ ಒಕ್ಕೂಟದ ಮೂಲಕವೇ ನಿವಾರಣೆ ಮಾಡಬಹುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಲಿತ ಹಕ್ಕುಗಳ ಸಮಿತಿಯ ಉಡುಪಿ ಜಿಲ್ಲಾ ಸಂಚಾಕರದಾದ ಸಂಜೀವ ಬಳ್ಕೂರು ವಹಿಸಿ ಮಾತನಾಡಿ, ದಲಿತ ಹಕ್ಕುಗಳ ಸಮಿತಿ (DHS) ಇದು ದಲಿತರ ಹಕ್ಕು, ಭೂಮಿ ಮತ್ತು ಗೌರವಯುತ ಬದುಕಿಗಾಗಿ ಹೋರಾಟ ನಡೆಸುವ ಸಂಘಟನೆ. ಸಮಾಜದ ಶ್ರಮಜೀವಿ ವರ್ಗದ ಬಹುಮುಖ್ಯ ಅಂಗವಾದ ದಲಿತರು ಇನ್ನೂ ಸಾಮಾಜಿಕ ದಮನ, ಆರ್ಥಿಕ ಶೋಷಣೆ ಮತ್ತು ಜಾತಿ ಅಸ್ಪೃಶ್ಯತೆಯಿಂದ ಮುಕ್ತರಾಗಿಲ್ಲ. ಈ ಅನ್ಯಾಯದ ವಿರುದ್ಧ, ದಲಿತ ಮತ್ತು ದಲಿತೇತರರ ರಾಜ್ಯಮಟ್ಟದ ವಿಶಾಲ ವೇದಿಕೆಯಾಗಿ ನಮ್ಮ ಸಮಿತಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ 1.08 ಕೋಟಿ ಹಾಗೂ ಉಡುಪಿ ಜಿಲ್ಲೆಯಲ್ಲಿ ಸುಮಾರು 86,925 ಪರಿಶಿಷ್ಟ ಜಾತಿ ಜನರು ಮತ್ತು 72,445 ಪರಿಶಿಷ್ಟ ಪಂಗಡದ ಜನರು ವಾಸಿಸುತ್ತಿದ್ದಾರೆ. ಜಿಲ್ಲೆಯ ಆರ್ಥಿಕ ಬೆಳವಣಿಗೆ ನಡೆಯುತ್ತಿದ್ದರೂ, ಶೇಕಡಾ 85ರಷ್ಟು ಜನರು ಇನ್ನೂ ಭೂರಹಿತ ಕೃಷಿ ಕೂಲಿ ಕಾರ್ಮಿಕರಾಗಿದ್ದಾರೆ. ಸರ್ಕಾರದ ಅನೇಕ ಯೋಜನೆಗಳು ಅಸ್ತಿತ್ವದಲ್ಲಿದ್ದರೂ, ದಲಿತರಿಗೆ ಭೂಮಿ ಮತ್ತು ವಸತಿ ಹಕ್ಕುಗಳು ತಲುಪಿಲ್ಲ,” ಎಂದು ವಿಷಾದ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಅಂದಾಜು 4009.10 ಎಕರೆ ಡಿಸಿ ಮನ್ನಾ ಭೂಮಿ ಇದ್ದರೂ, ಅದರ ವಿಲೇವಾರಿ ದಲಿತರಿಗೆ ಸರಿಯಾಗಿ ಆಗಿಲ್ಲ ಎಂದು ಅವರು ಆರೋಪಿಸಿದರು. “ಸರ್ಕಾರಿ ನಿಯಮದ ಪ್ರಕಾರ ಪ್ರತಿ ಗ್ರಾಮದಲ್ಲಿ ಲಭ್ಯವಿರುವ ಸರ್ಕಾರಿ ಭೂಮಿಯ ಶೇಕಡಾ 50ರಷ್ಟು ದಲಿತರಿಗೆ ನೀಡಬೇಕಾಗಿದೆ, ಆದರೆ ಅದು ಮೇಲ್ವರ್ಗದವರ ಪಾಲಾಗಿದೆ. ಇದನ್ನು ಪ್ರಶ್ನಿಸುವ ಮತ್ತು ನ್ಯಾಯಯುತ ಹಂಚಿಕೆಗಾಗಿ ಹೋರಾಟದ ಅಭಿಯಾನ ರೂಪಿಸಬೇಕಾಗಿದೆ,” ಎಂದು ಅವರು ಹೇಳಿದರು. ಖಾಸಗಿ ವಲಯದಲ್ಲಿ ದಲಿತ ಯುವಕರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ವಿಷಯ, ಹೊರಗುತ್ತಿಗೆಯಲ್ಲಿ ಮೀಸಲಾತಿ ನಿಯಮಗಳ ಅನುಷ್ಠಾನ – ಇವುಗಳ ಕುರಿತಾಗಿ ಸಂಘಟಿತ ಹೋರಾಟ ಅಗತ್ಯವಿದೆ ಎಂದು ಅವರು ತಿಳಿಸಿದರು. ಎಸ್ಪಿ, ಎಸ್‌ಪಿ, ಟಿಎಸ್‌ಪಿ ಯೋಜನೆಗಳಲ್ಲಿ 12 ವರ್ಷಗಳಿಂದ ಖರ್ಚಾಗದೆ ಉಳಿದಿರುವ ₹1,75,000 ಕೋಟಿ ಅನುದಾನವನ್ನು ನೇರವಾಗಿ ದಲಿತ ಕುಟುಂಬಗಳಿಗೆ ತಲುಪಿಸಬೇಕೆಂದು ನಾವು ವಿಧಾನಸೌಧ ಚಲೋ ಪ್ರತಿಭಟನೆಗಳ ಮೂಲಕ ಆಗ್ರಹಿಸುತ್ತಿದ್ದೇವೆ. ದಲಿತರಿಗೆ ವಾಸಕ್ಕೆ ಯೋಗ್ಯವಾದ ಮನೆ ನಿರ್ಮಾಣಕ್ಕೆ ₹5 ಲಕ್ಷ ಅನುದಾನ, ಗಂಗಾ ಕಲ್ಯಾಣ ಯೋಜನೆಯಡಿ ನೀರು ಮತ್ತು ಭೂಮಿ ಸೌಲಭ್ಯ ದೊರಕಬೇಕೆಂದು ಸಮಿತಿ ಆಗ್ರಹಿಸುತ್ತಿದೆ, ಎಂದರು.

ಕೋಮುವಾದಿ ಮತ್ತು ಜಾತಿವಾದಿ ಶಕ್ತಿಗಳು ಸಂವಿಧಾನವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ, ಸಂವಿಧಾನದ ರಕ್ಷಣೆಯ ಹೋರಾಟ ಕೂಡ ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸು ಜಾತಿ ನಿರ್ಮೂಲನೆಯಾಗಿತ್ತು. ಆದರೆ ಸರ್ಕಾರಗಳು ದಲಿತರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಯಾವುದೇ ನಿರ್ದಿಷ್ಟ ಕ್ರಮ ತೆಗೆದುಕೊಳ್ಳದಿರುವುದು ವಿಷಾದನೀಯ. ದಲಿತ ಹಕ್ಕುಗಳ ಸಮಿತಿಯು ಮುಂದಿನ ದಿನಗಳಲ್ಲಿ ಎಲ್ಲಾ ಬಗೆಯ ಶೋಷಣೆ, ತಾರತಮ್ಯ, ಅಸಮಾನತೆ ವಿರುದ್ಧ ನಿರಂತರ ಹೋರಾಟ ನಡೆಸಲಿದೆ ಹೇಳಿದರು.

ದಲಿತರ ಹಕ್ಕಿನ ಭೂಮಿಗಾಗಿ ಹೋರಾಟದ ಧ್ವನಿ ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡಿದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕರಾದ ಡಾ| ಕೃಷ್ಣಪ್ಪ ಕೊಂಚಾಡಿ, ವಸಾಹತು ಶಾಹಿ ಬ್ರಿಟಿಷರ ಕಾಲ ಮುಗಿದು ಸಂವಿಧಾನ ಬಂದರೂ, ದಲಿತರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಯಲ್ಲಿ ಮೂಲಭೂತ ಬದಲಾವಣೆ ಆಗಿಲ್ಲ. ಇಂದಿನ ದಲಿತ ಸಮುದಾಯದ ಸರಾಸರಿ ಜೀವನಮಟ್ಟ, ಶಿಕ್ಷಣ, ಆಯುಷ್ಯ, ಆರ್ಥಿಕ ಸ್ಥಿತಿ ಎಲ್ಲವೂ ಪ್ರಶ್ನಾರ್ಹವಾಗಿದೆ. ನಾವು ಸ್ವಾತಂತ್ರ್ಯ ಮತ್ತು ಸಂವಿಧಾನ ಹೊಂದಿದ್ದರೂ ಅದು ಸಮಾನತೆ ತರಲಿಲ್ಲ ಎಂದು ಹೇಳಿದರು. ಕರಾವಳಿ ಕರ್ನಾಟಕದ ದಲಿತ ಹಾಗೂ ಬುಡಕಟ್ಟು ಸಮುದಾಯಗಳು ಕೊರಗ, ಆದಿದ್ರಾವಿಡ, ಮಲೆಕುಡಿಯ ಮತ್ತು ಇತರರು ಇಂದಿಗೂ ಭೂಹೀನರಾಗಿ ಬದುಕುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಈ ಕುಟುಂಬಗಳಿಗೆ ಕೇವಲ ವಸತಿ ಮನೆಗಳಷ್ಟೇ ದೊರಕಿವೆ; ಕೃಷಿ ಮಾಡಲು ಯೋಗ್ಯವಾದ ಭೂಮಿ ನೀಡುವ ನಿಲುವು ಸರ್ಕಾರದಲ್ಲೇ ಇಲ್ಲ ಎಂದು ಹೇಳಿದರು. ಮಂಗಳೂರಿನಲ್ಲಿ ದಲಿತ ಸಮುದಾಯದ ಮನೆಗಳು ನೀರಿಲ್ಲದ, ಪಾಳು ಪ್ರದೇಶಗಳಲ್ಲಿ ಇರುವುದನ್ನು ಉಲ್ಲೇಖಿಸಿದ ಅವರು, ಕೃಷಿ ಮಾಡಲು ಸಾಧ್ಯವಿಲ್ಲದ ಪ್ರದೇಶಗಳನ್ನು ಭೂಮಿಯಾಗಿ ಹಂಚುವುದು ಒಂದು ರೀತಿಯ ಕಪಟ ನ್ಯಾಯವಾಗಿದೆ” ಎಂದು ಟೀಕಿಸಿದರು.

ಭೂ ಸುಧಾರಣಾ ಹೋರಾಟದ ಫಲವಾಗಿ ದಲಿತರಿಗೆ ಶೇ.2ರಷ್ಟೇ ಭೂಮಿ ದೊರಕಿದೆ ಎಂಬುದನ್ನು ಅವರು ಅಂಕಿ ಅಂಶಗಳೊಂದಿಗೆ ತಿಳಿಸಿದರು. ಎಲ್ಲಾ ಭೂಮಾಲಿಕರು ಕಾರ್ಮಿಕರಾಗಿ ಉಳಿದಿದ್ದಾರೆ, ಕೃಷಿ ಯೋಗ್ಯ ಭೂಮಿ ದೊರೆಯದ ಕಾರಣದಿಂದ ದಲಿತರು ಉತ್ಪಾದಕ ವರ್ಗವಾಗಿ ಬೆಳೆಯುವ ಅವಕಾಶವೇ ಕಳೆದುಕೊಂಡಿದ್ದಾರೆ ಎಂದು ಹೇಳಿದರು. ಶಿಕ್ಷಣದಿಂದ, ಆರ್ಥಿಕ ಸಂಪನ್ಮೂಲಗಳ ಕೊರತೆ ಮತ್ತು ಬದುಕಿನ ಅಸಮಾನತೆ ಇಂದಿಗೂ ಮುಂದುವರಿದಿದೆ. ಆದ್ದರಿಂದ ಭೂಮಿ ಹಾಗೂ ವಸತಿ ಹಕ್ಕುಗಳನ್ನು ಪಡೆಯಲು ನಿರಂತರ ಹೋರಾಟ ಅನಿವಾರ್ಯವಾಗಿದೆ. ದಲಿತರ ಭೂ ಹಕ್ಕು ಹೋರಾಟವು ಕೇವಲ ಆರ್ಥಿಕ ಪ್ರಶ್ನೆಯಲ್ಲ, ಅದು ಸಾಮಾಜಿಕ ನ್ಯಾಯದ ಹೋರಾಟ, ಭೂಮಿ ಎಂದರೆ ಕೇವಲ ಒಂದು ಆಸ್ತಿ ಅಲ್ಲ, ಅದು ಸ್ವಾವಲಂಬನೆ, ಆತ್ಮಗೌರವ ಮತ್ತು ಬದುಕಿನ ಹಕ್ಕಿನ ಸಂಕೇತವಾಗಿದೆ ಎಂದು ಹೇಳಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ CITU ಜಿಲ್ಲಾ ಉಪಾಧ್ಯಕ್ಷರಾದ ಎಚ್. ನರಸಿಂಹ, ಕಟ್ಟಡ ಕಾರ್ಮಿಕ ಸಂಘ, ಬೈಂದೂರು ತಾಲೂಕು ಅಧ್ಯಕ್ಷರಾದ ರಾಜೀವ ಪಡುಕೋಣೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಲಿತ ಹಕ್ಕುಗಳ ಸಮಿತಿ, ಮೂಡುಬೆಳ್ಳೆ ಘಟಕದ ಶ್ರೀರಾಮ ದಿವಾಣ ಮೂಡುಬೆಳ್ಳೆ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಸಹ ಸಂಚಾಲಕಿಯಾದ ನಾಗರತ್ನಾ ಆರ್. ನಾಡಾ ಕಾರ್ಯಕ್ರಮ ನಿರೂಪಿಸಿದರು.

ಸಮಾವೇಶದಲ್ಲಿ ದಲಿತರ ಹಕ್ಕಿನ ಭೂಮಿಗಾಗಿ ಊರಾಟದ ಧ್ವನಿ ಮತ್ತು ದಲಿತ ದೌರ್ಜನ್ಯ – ಸಮಕಾಲೀನ್ ಸವಾಲುಗಳು ಎಂಬ ವಿಷಯದಲ್ಲಿ ಗೋಷ್ಟಿಯನ್ನು ನಡೆಸಲಾಯಿತು. ಪ್ರಥಮ ಗೋಷ್ಠಿಯಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕರಾದ ಡಾ| ಕೃಷ್ಣಪ್ಪ ಕೊಂಚಾಡಿ ವಿಷಯ ಮಂಡನೆ ಮಾಡಿದರು, ದಲಿತ ಹಕ್ಕುಗಳ ಸಮಿತಿ, ಮೂಡುಬೆಳ್ಳೆ ಘಟಕದ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ, ದಲಿತ ಹಕ್ಕುಗಳ, ಸಮಿತಿಯ ಜಿಲ್ಲಾ ಸಹ ಸಂಚಾಲಕರಾದ ರಾಮ ಕಾರ್ಕಡ ಉಪಸ್ಥಿತರಿದ್ದರು. ದ್ವಿತೀಯ ಗೋಷ್ಠಿಯಲ್ಲಿ ದಲಿತ ಹಕ್ಕುಗಳ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರಾಜಣ್ಣ ವಿಷಯ ಮಂಡನೆ ಮಾಡಿದರು. ಸಾಮಾಜಿಕ ಹೋರಾಟಗಾರರಾದ ಮನೋಜ್ ಕುಮಾರ್ ಕಾವಾಡಿ, ದಲಿತ ಹಕ್ಕುಗಳ ಸಮಿತಿಯ, ಜಿಲ್ಲಾ ಸಹ ಸಂಚಾಲಕರಾದ ರವಿ ವಿ.ಎಂ ವೇದಿಕೆಯಲ್ಲಿ ಉಪಸ್ಥಿರಿದ್ದರು.

ಸಮುದಾಯ ಕುಂದಾಪುರ ತಂಡದ ವಾಸುದೇವ ಗಂಗೇರ ಅವರಿಂದ ಹೋರಾಟದ ಗೀತೆಗಳನ್ನು ಹಾಡಿದರು. ಅಪರಾಹ್ನ ದಲಿತ ಹಕ್ಕುಗಳ ಸಮಿತಿ, ಬಳ್ಳೂರು ಮಹಿಳಾ ಸದಸ್ಯರಿಂದ ‘ಜಾನಪದ ನೃತ್ಯ’ ಮತ್ತು ಗೆಂಡೆಕೆರೆ ಘಟಕದ ಸದಸ್ಯರ ಮಕ್ಕಳ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸಮಾವೇಶದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಲಿತ ಹಕ್ಕುಗಳ ಸಮಿತಿಯ ಉಡುಪಿ ಜಿಲ್ಲಾ ಸಂಚಾಕರದಾದ ಸಂಜೀವ ಬಳ್ಕೂರು ವಹಿಸಿದ್ದರು. ಸಾಹಿತಿ, ಹೋರಾಟಗಾರರಾದ ವಾಸುದೇವ ಉಚ್ಚಿಲ ಸಮಾರೋಪ ಭಾಷಣ ಮಾಡಿದರು. ವೇದಿಕೆಯಲ್ಲಿ CITU ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ವಿ, ಗೋವಿಂದ, ನಾಗರತ್ನ ನಾಡ, ಶಾರದಾ ಉಪಸ್ಥಿತರಿದ್ದರು. ಸುಶೀಲ ಬಳ್ಕೂರು ವಂದಿಸಿದರು.

ಈ ಸಮಾವೇಶದ ಕೊನೆಯಲ್ಲಿ ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲೆಯ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಜಿಲ್ಲಾಧ್ಯಕ್ಷರಾಗಿ ಸಂಜೀವ ಬಳ್ಕೂರು, ಪ್ರಧಾನ ಕಾರ್ಯದರ್ಶಿಯಾಗಿ ರವಿ ವಿ ಎಂ ಮತ್ತು ಕೋಶಾಧಿಕಾರಿಯಾಗಿ ನಾಗರತ್ನಾ ಆರ್ ನಾಡಾರನ್ನು ಆಯ್ಕೆ ಮಾಡಲಾಯಿತು.



