ಉಡುಪಿ | ಗೃಹ ಜ್ಯೋತಿ: ಕತ್ತಲೆಯಲ್ಲೇ ಜೀವನ ದೂಡುತ್ತಿದೆ ಈ ಕುಟುಂಬ

Date:

Advertisements
ಸಿವಿಲ್ ನ್ಯಾಯಾಲಯ ಅಂತಿಮ ತೀರ್ಪು ನೀಡಿ ಒಂಬತ್ತು ತಿಂಗಳುಗಳಾದರೂ ವಿದ್ಯುತ್ ಸಂಪರ್ಕ ನೀಡಿಲ್ಲ. ಮೆಸ್ಕಾಂ ಅಧಿಕಾರಿಗಳು ನ್ಯಾಯಾಲಯದ ತೀರ್ಪು ಪಾಲಿಸದೇ ಇರುವುದು ನ್ಯಾಯಾಂಗ ನಿಂದನೆಯಾಗುವುದು ಮಾತ್ರವಲ್ಲ, ಸರ್ಕಾರದ ಕಲ್ಯಾಣ ಯೋಜನೆಯೊಂದರ ಅನುಷ್ಠಾನದಲ್ಲಿನ ನಿರ್ಲಕ್ಷವೂ ಆಗಿದೆ

ರಾಜ್ಯ ಸರ್ಕಾರದ ಪ್ರತಿ ಮನೆಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ‘ಗೃಹ ಜ್ಯೋತಿ’ ಯೋಜನೆಯನ್ನು ಜಾರಿಗೆ ತಂದಿದೆ. ರಾಜ್ಯದ ಬಹುತೇಕ ಕುಟುಂಬಗಳು ‘ಗೃಹ ಜ್ಯೋತಿ’ಯ ಫಲಾನುಭವ ಪಡೆಯುತ್ತಿದ್ದಾರೆ. ಕರಾವಳಿಯ ಗ್ರಾಮವೊಂದರಲ್ಲಿ ಕುಟುಂಬವೊಂದು ಉಚಿತ ವಿದ್ಯುತ್‌ ಇರಲಿ, ವಿದ್ಯುತ್‌ ಸಂಪರ್ಕವೇ ಇಲ್ಲದೆ ಕತ್ತಲೆಯಲ್ಲೇ ಜೀವನ ದೂಡುತ್ತಿದೆ. ವಿದ್ಯುತ್‌ ಸಂಪರ್ಕ ಪಡೆಯುವ ಎಲ್ಲ ಅರ್ಹತೆಗಳು ಆ ಕುಟುಂಬಕ್ಕಿದ್ದರೂ, ಇದೂವರೆಗೂ ವಿದ್ಯುತ್ ಬೆಳಕನ್ನು ಆ ಮನೆ ಕಂಡಿಲ್ಲ. ಕ್ಷುಲ್ಲಕ ಕಾರಣವೊಂದರಿದಾಗಿ ದೀಪದ ಬುಡ್ಡಿಯ ಬೆಳಕಲ್ಲೇ ಆ ಕುಟುಂಬ ಜೀವನ ಸಾಗಿಸುತ್ತಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸೌಕೂರು ಗ್ರಾಮದಲ್ಲಿ ಇಡೀ ಊರಿಗೆ ಊರು ವಿದ್ಯುತ್ ಬೆಳಕನ್ನು ಹೊಂದಿದೆ. ಆದರೆ, ಈ ಒಂದು ಕುಟುಂಬ ಆ ಬೆಳಕಿನಿಂದ ವಂಚಿತವಾಗಿದೆ. ಗ್ರಾಮದ ಮಾಲತಿ ಎಂಬವರ ಮನೆಗೆ ವಿದ್ಯುತ್‌ ಸಂಪರ್ಕವಿಲ್ಲದೆ ಮಾಲತಿ, ಅವರ ಪತಿ, ಮಗಳು, ಮೊಮ್ಮಗಳು – ಕತ್ತಲ ಮನೆಯಲ್ಲಿಯೇ ಬದುಕುತ್ತಿದ್ದಾರೆ.

ಅವರ ಈ ದುಸ್ಥಿತಿಗೆ ಕ್ಷ್ಯಲ್ಲಕ ಸಮಸ್ಯೆಯೊಂದು ಕಾರಣವಾಗಿದೆ. ಅಂದಹಾಗೆ, ಮಾಲತಿ ಅವರ ತಾಯಿ ಸುಬ್ಬು ದೇವಾಡಿಗರ ಅವರಿಗೆ ಸೇರಿದ್ದ ಈ ಮನೆ, ಆಕೆಯ ನಿಧನಾನಂತರ 2010ಲ್ಲಿ ಮಾಲತಿ ಅವರ ಪಾಲಿಗೆ ಬಂದಿತ್ತು. ಮುಂಬೈನಲ್ಲಿ ತನ್ನ ಪತಿ ಗಣೇಶ್ ದೇವಾಡಿಗ ಅವರೊಂದಿಗೆ ಕೂಲಿ ಮಾಡಿ ಬದುಕುತ್ತಿದ್ದ ಮಾಲತಿ ಅವರು ಪತಿಯೊಂದಿಗೆ 2019ರಲ್ಲಿ ತನ್ನೂರಿಗೆ ಮರಳು ಬಂದರು. ತಾಯಿಯಿಂದ ತನಗೆ ಬಂದಿದ್ದ ಸೌಕೂರಿನ ಮನೆಯಲ್ಲಿಯೂ ಜೀವನ ಕಟ್ಟಿಕೊಂಡಿದ್ದರು.

ಬಿಪಿಎಲ್‌ ಕಾರ್ಡ್‌ ಹೊಂದಿದ್ದ ಮಾಲತಿ ಅವರು ತಮ್ಮ ಮನೆಗೆ ವೈಯರಿಂಗ್ ಮಾಡಿಸಿ,2019ರಲ್ಲಿಯೇ ವಿದ್ಯುತ್‌ ಸಂಪರ್ಕಕ್ಕಾಗಿ ಮೆಸ್ಕಾಂಗೆ ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಬೆಳಕು ಯೋಜನೆ ಅಡಿ ಫಲಾನುಭವಿಯಾಗಿ ಆಯ್ಕೆಯಾದರು. ಮನೆಯ ಕಾಂಪೌಂಡ್ ಪಕ್ಕದಲ್ಲಿಯೇ ವಿದ್ಯುತ್ ಕಂಬವೂ ಇತ್ತು. ಆದರೆ, ಅವರ ಪಕ್ಕದ ಮನೆಯ ವಾಸುದೇವ ದೇವಾಡಿಗ ಎಂಬವರು ಮಾಲತಿ ಅವರ ಮನೆಗೆ ವಿದ್ಯುತ್ ಸಂಪರ್ಕ ನೀಡುವುದಕ್ಕೆ ಆಕ್ಷೇಪಿಸಿದರು. ‘ತನಗೆ ಸೇರಿದ ಜಮೀನಿನ ಒಂದು ಭಾಗದ ಮೇಲೆ ವಿದ್ಯುತ್ ತಂತಿ ಹಾದು ಹೋಗುತ್ತದೆ. ಇದರಿಂದ ತಮಗೆ ತೊಂದರೆಯಾಗುತ್ತದೆ’ ಎಂಬ ಕಾರಣವನ್ನು ಅವರು ನೀಡಿದ್ದರು. ಅವರ ಆಕ್ಷೇಪಣೆಗೆ ಮಣಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿದ್ಯುತ್ ಸಂಪರ್ಕ ಒದಗಿಸದೆ ವಾಪಸ್ ಹೋದರು.

ಬಿಪಿಎಲ್ ಕಾರ್ಡ್ ಹೊಂದಿರುವಂತಹ ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಹೊಣೆ ಹೊತ್ತ ಮೆಸ್ಕಾಂ ಅಧಿಕಾರಿಗಳು ಭಾರತೀಯ ವಿದ್ಯುತ್ ಕಾಯ್ದೆಯ 164 ಅಡಿಯಲ್ಲಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರಿಗೆ ದೂರು ಸಲ್ಲಿಸಿದ್ದರು. ಸಮಸ್ಯೆ ಪರಿಹಾರಿಸುವಂತೆ ಕೋರಿದ್ದರು. ವಾದಿ-ವಾದಿವಾದಿಗಳಿಗೆ ನೋಟೀಲ್ ಜಾರಿ ಮಾಡಿದ್ದ ಜಿಲ್ಲಾಧಿಕಾರಿಗಳು ಲಿಖಿತವಾಗಿ ಉತ್ತರ ನೀಡುವಂತೆ ನಿರ್ದೇಶಿಸಿದ್ದರು. 2020ರ ಏಪ್ರಿಲ್‌ನಲ್ಲಿ ಪ್ರತಿವಾದಿಗಳ ಹೇಳಿಕೆಗಳನ್ನು ತಿರಸ್ಕರಿಸಿದ ಜಿಲ್ಲಾಧಿಕಾರಿ, ಆಕ್ಷೇಪದಾರರ ಸ್ವತ್ತುಗಳಿಗೆ ಹಾನಿಯಾಗದಂತೆ ಎಚ್ಚರವಹಿಸಿ ಮಾಲತಿ ಅವರ ಮನೆಗೆ ವಿದ್ಯುತ್ ಸಂಪರ್ಕ ನೀಡಲು ಮೆಸ್ಕಾಂ ಅಧಿಕಾರಿಗಳಿಗೆ ಸ್ಪಷ್ಟವಾಗಿ ಆದೇಶಿಸಿದರು. ಆದರೂ, ಅವರ ಮನೆಗೆ ಇದೂವರೆಗೂ ವಿದ್ಯುತ್ ಸಂಪರ್ಕ ದೊರೆತಿಲ್ಲ.

ವಿದ್ಯುತ್ ಸಂಪರ್ಕದ ಸಮಸ್ಯೆ ಬಗ್ಗೆ ಈದಿನ.ಕಾಮ್‌ ಜೊತೆ ಮಾತನಾಡಿದ ಮಾಲತಿ ಅವರ ಮಗಳು ರೇಣುಕಾ, “ನಾವು ಕತ್ತಲಲ್ಲಿಯೇ ಜೀವನ ನಡೆಸುತ್ತಿದ್ದೇವೆ. ನಮ್ಮ ಅಜ್ಜಿಯೂ ಕೂಡ ಸಾಯುವವರೆಗೂ ಕತ್ತಲಲ್ಲಿಯೇ ಜೀವನ ಸಾಗಿಸಿದರು. ಈಗ ಅಜ್ಜಿಯ ಮನೆ ನಮ್ಮ ಅಮ್ಮನ ಹೆಸರಿನಲ್ಲಿದ್ದರೂ ಸಹ, ಅಮ್ಮನ ಹೆಸರಿನಲ್ಲಿ ವಿದ್ಯುತ್ ಸಂಪರ್ಕ ಪಡೆಯಲಾಗುತ್ತಿಲ್ಲ. ನಾಲ್ಕು ವರ್ಷದ ಹಿಂದೆ ಭಾಗ್ಯ ಜ್ಯೋತಿ ಯೋಜನೆ ಅಡಿಯಲ್ಲಿ ವಿದ್ಯುತ್ ಸಂಪರ್ಕ ಕಂಬ ಮಂಜುರಾಗಿತ್ತು. ಆಗಲೇ ಅಕ್ಕ ಪಕ್ಕದ ಮನೆಯವರು ತಕರಾರು ಮಾಡಿದ್ದರಿಂದ ವಾಪಸ್ಸು ಹೋಯಿತು. ಮನೆಗೆಲ್ಲ ವೈರಿಂಗ್ ಮಾಡಿಕೊಂಡಿದ್ದೇವೆ. ಇತ್ತೀಚೆಗೆ, ಮತ್ತೆ ವಿದ್ಯುತ್ ಸಂಪರ್ಕಕ್ಕಾಗಿ ವಿದ್ಯುತ್ ಕಂಬ ಬಂದಿತು. ಮತ್ತದೇ ಆಕ್ಷೇಪಣೆಯಿಂದ ವಾಪಸ್ ಹೋಯಿತು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಉಡುಪಿ | ಬಿಜೆಪಿ ಸರ್ಕಾರವೇ ಪ್ರಸ್ತಾವನೆ ತಿರಸ್ಕರಿಸಿತ್ತು; ಆದರೂ, ಪರಶುರಾಮ ಥೀಂ ಪಾರ್ಕ್ ನಿರ್ಮಾಣ

“ಮನೆಯಲ್ಲಿ ಒಂಬತ್ತು ತಿಂಗಳ ಮಗುವಿದೆ. ಕಳೆದ ಏಳು ತಿಂಗಳನ ಹಿಂದೆ ಮಗುವಿಗೆ ಹೃದಯ ಚಿಕಿತ್ಸೆ ಕೂಡ ಆಗಿದೆ. ಬಡತನದಿಂದ ಬದುಕುವ ನಮಗೆ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದೆ, ಸೋತು ಹೋಗಿದ್ದೇವೆ. ಪ್ರತಿಯೊಂದಕ್ಕೂ ಸಮಸ್ಯೆ. ದಯವಿಟ್ಟು ಸಂಬಂಧಪಟ್ಟ ಇಲಾಖೆಯವರು ನಮ್ಮ ಮೇಲೆ ಕರುಣೆ ತೋರಿಯಾದರು ವಿದ್ಯುತ್ ಸಂಪರ್ಕ ನೀಡಿ ಪುಣ್ಯ ಕಟ್ಟುಕೊಳ್ಳಲಿ” ಎಂದು ಅಳಲು ತೋಡಿಕೊಂಡಿದ್ದಾರೆ.

ಈದಿನ.ಕಾಮ್ ಜೊತೆ ಮಾತನಾಡಿದ ತಲ್ಲೂರು ಭಾಗದ ಮೆಸ್ಕಾಂ ಸಹಾಯಕ ಇಂಜಿನಿಯರ್ ಹರೀಶ್ ಕುಮಾರ್, “ಮಾಲತಿ ಅವರ ಮನೆಗೆ ವಿದ್ಯುತ್ ಸಂಪರ್ಕ ನೀಡಲು ಸ್ಥಳಿಯರಿಂದ ತಕರಾರು ಇತ್ತು. ಆದ್ದರಿಂದ, ಪ್ರಕರಣ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಹೋಗಿತ್ತು. ನಂತರದಲ್ಲಿ ಕುಂದಾಪುರ ಸಿವಿಲ್ ಕೋರ್ಟ್‌ಗೆ ಹೋಗಿತ್ತು. ಈಗಲೂ ನ್ಯಾಯಾಲಯದ ವಿಚಾರಣೆ ನಡೆಯುತ್ತಿದೆ. ಮುಂದಿನ ತಿಂಗಳು 16 ತಾರೀಖು ವಿಚಾರಣೆ ಇದೆ. ಕೋರ್ಟ್‌ನಲ್ಲಿ ಪ್ರಕರಣದ ವ್ಯಾಜ್ಯ ಮುಗಿದ ನಂತರ ನಾವು ಕೆಲಸ ಮಾಡಬೇಕು” ಎಂದು ಹೇಳಿದರು.

ಅಧಿಕಾರಗಳ ಸಬೂಬನ್ನು ಮಾಲತಿ ಅವರ ಪರ ವಕೀಲ ಬಿ ಪಿ ಭಟ್ ಅವರು ಈದಿನ.ಕಾಮ್ ಜೊತೆ ಮಾತನಾಡಿದ್ದು, “ತಕರಾರು ಮಾಡಿದ ಮನೆಯವರಿಗೆ ಯಾವುದೇ ತೊಂದರೆ ಆಗದಂತೆ ವಿದ್ಯುತ್ ಸಂಪರ್ಕ ತಂತಿಗೆ ಕೇಬಲ್ ಹಾಕಿಯೋ ಅಥವಾ ನೆಲದ ಅಡಿಯಿಂದ ಸಂಪರ್ಕ ನೀಡಿಯೋ ಮಾಲತಿ ಅವರ ಮನೆಗೆ ವಿದ್ಯುತ್ ಸಂಪರ್ಕ ಕೊಡಿ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಅಲ್ಲದೆ, ಸಿವಿಲ್ ನ್ಯಾಯಾಲಯ ಮತ್ತು ಹಿರಿಯ ಸಿವಿಲ್ ನ್ಯಾಯಾಲಯಗಳು ಕೂಡ ಅಕ್ಷೇಪ ಎತ್ತಿದ್ದವರು ಸಲ್ಲಿಸಿದ್ದ ತಡೆಯಾಜ್ಞೆ ಅರ್ಜಿಯನ್ನು ತಿರಸ್ಕರಿಸಿದ್ದವು. ಆದರೂ, ಮಾಲತಿ ಅವರ ಮನೆಗೆ ವಿದ್ಯುತ್ ಸಂಪರ್ಕ ನೀಡಲಾಗಿಲ್ಲ. ಸಿಪಿಸಿ ಸೆಕ್ಷನ್ 4 (ಎಚ್1) ಅಡಿಯಲ್ಲಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರೆ ಅದನ್ನು ಪಾಲಿಸಲೇಬೇಕು. ಮಾನವ ಹಕ್ಕುಗಳ ರಕ್ಷಣೆ ಸಂಸ್ಥೆಯ ಡಾ. ರವೀಂದ್ರ ಶಾನ್ ಬೋಗ್ ಅವರ ಮೂಲಕ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಇಷ್ಟು ದಿನ ಆ ಕುಟುಂಬ ಅನುಭವಿಸಿದ ಕಷ್ಟಕ್ಕೆ ಪರಿಹಾರವನ್ನೂ ಕೊಡಬೇಕು” ಎಂದು ಹೇಳಿದ್ದಾರೆ.

“ಮೆಸ್ಕಾಂ ಅಧಿಕಾರಿಗಳು ಇನ್ನೂ ಯಾರಿಗಾಗಿ, ಏಕಾಗಿ ಕಾಯುತ್ತಿದ್ದಾರೆ? ಈ ಪ್ರಕರಣದಲ್ಲಿ ಸಂತ್ರಸ್ತೆ ಮಾಲತಿಯವರು ಒಂದಲ್ಲ, ಮೂರು ನ್ಯಾಯಾಲಯಗಳಲ್ಲಿ ತನ್ನ ಪರವಾಗಿ ತೀರ್ಪು ಪಡೆದಿದ್ದಾರೆ. ಹಿರಿಯ ಸಿವಿಲ್ ನ್ಯಾಯಾಲಯವು ಅಂತಿಮ ತೀರ್ಪು ನೀಡಿ ಒಂಬತ್ತು ತಿಂಗಳುಗಳಾದರೂ ಸಂಪರ್ಕ ನೀಡಿಲ್ಲ. ಮೆಸ್ಕಾಂ ಅಧಿಕಾರಿಗಳು ನ್ಯಾಯಾಲಯದ ತೀರ್ಪು ಪಾಲಿಸದೇ ಇರುವುದು ನ್ಯಾಯಾಂಗ ನಿಂದನೆಯಾಗುವುದು ಮಾತ್ರವಲ್ಲ, ಸರ್ಕಾರದ ಕಲ್ಯಾಣ ಯೋಜನೆಯೊಂದರ ಅನುಷ್ಠಾನದಲ್ಲಿ ನಡೆದಿರುವ ನಿರ್ಲಕ್ಷವೂ ಆಗಿದೆ” ಎಂದು ಕಿಡಿಕಾರಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಸರಕಾರ ದೇವದಾಸಿ ಮಹಿಳೆಯರ ಕುಟುಂಬ ಸದಸ್ಯರನ್ನು ಗಣತಿ ಪಟ್ಟಿಗೆ ಸೇರಿಸುವ ಕ್ರಮ ಸ್ವಾಗತ

"ಸರಕಾರ ಈಚೆಗೆ ದೌರ್ಜನ್ಯದ ದೇವದಾಸಿ ಪದ್ಧತಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ದೇವದಾಸಿ...

ಗದಗ | ತಹಸೀಲ್ದಾರ ಕಚೇರಿಗಳಲ್ಲಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ

"ಜಿಲ್ಲೆಯ ಎಲ್ಲಾ ತಾಲೂಕ ತಹಶೀಲ್ದಾರ್ ಕಚೇರಿ ಹಾಗೂ ಹೋಬಳಿಗಳಲ್ಲಿ ವೃಧ್ಯಾಪ್ಯ ವೇತನ,...

ಜನಮನ ಗೆದ್ದ ತುಮಕೂರು ದಸರಾ ಉತ್ಸವ : ಡಾ. ಜಿ.ಪರಮೇಶ್ವರ

 ತುಮಕೂರು ದಸರಾ ಉತ್ಸವವು ನಾಡಿನಾದ್ಯಂತ ಜನರ ಮನಸ್ಸನ್ನು ಗೆಲ್ಲುವ ಮೂಲಕ ಐತಿಹಾಸಿಕ...

Download Eedina App Android / iOS

X