ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 156ನೇ ಜಯಂತಿ – ಗಾಂಧಿ ಭಾರತ – ವಿಶೇಷ ಉಪನ್ಯಾಸ – ಸಾಕ್ಷ್ಯಚಿತ್ರ ಪ್ರದರ್ಶನ ” ಗಾಂಧಿ ಮತ್ತು ಹಿಂದ್ ಸ್ವರಾಜ್.
ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಕನ್ನಡ ಮತ್ತು ರಾಜ್ಯ ಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 156ನೇ ಜಯಂತಿ ಹಾಗೂ ಗಾಂಧಿ ಭಾರತದ ಅಂಗವಾಗಿ ವಿಶೇಷ ಉಪನ್ಯಾಸ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನ ” ಗಾಂಧಿ ಮತ್ತು ಹಿಂದ್ ಸ್ವರಾಜ್ ” ಗುರುವಾರ ನಡೆಯಿತು.
ನಿವೃತ್ತ ಪ್ರಾಂಶುಪಾಲರಾದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ದಿನೇಶ ಹೆಗ್ಡೆ ವಿಶೇಷ ಉಪನ್ಯಾಸ ನೀಡಿ ಗಾಂಧಿ ಸ್ವರಾಜ್ಯದ ಪರಿಕಲ್ಪನೆ ಪೂರ್ಣ ಪ್ರಮಾಣದ ಸ್ವಾವಲಂಬಿ, ಸ್ವತಂತ್ರ ದೇಶ ನಿರ್ಮಾಣವೇ ಹೊರತು ಸ್ವದೇಶಿ ಮತ್ತು ಬಂಡವಾಳಿಗರ ಅವಲಂಬನೆ ಅಲ್ಲ. ವಸ್ತು ಮತ್ತು ವಿಚಾರಗಳೇಡರಲ್ಲೂ ಯಾರನ್ನೂ ಅವರು ಅವಲಂಬಿಸದೆ ಪೂರ್ಣ ಸ್ವಾಯತ್ತತೆಯನ್ನು ಗಳಿಸಿಕೊಳ್ಳುವುದಕ್ಕೆ ಭೂಮಿಯಕೆಯಾಗಿ ಅಹಿಂಸೆ, ಶಾಂತಿ ಮತ್ತು ಮತರೂಪಗಳ ಗೋಡೆಗಳನ್ನು ದಾಟಿ ಸಾಧಿಸುವ ಸಾಮರಸ್ಯವನ್ನು ಅಳವಡಿಸಿಕೊಳ್ಳುವುದೇ ಆಗಿದೆ ಎಂದು ಪ್ರತಿಪಾದಿಸಿದ ರಾಜಕೀಯ ಸಂತ ಗಾಂಧಿ ಆಗಿದ್ದರು ಎಂದು ಡಾ. ಹೆಗ್ಡೆ ಅಭಿಪ್ರಾಯಪಟ್ಟರು.

ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಯಪ್ರಕಾಶ ಶೆಟ್ಟಿ ಎಚ್ ಅಧ್ಯಕ್ಷತೆ ವಹಿಸಿ ಮಾತನಾಡಿ ಏಕಕಾಲದಲ್ಲಿ ಅನೇಕ ಧರ್ಮಗಳನ್ನು ಬದುಕಿದ ಗಾಂಧಿಗೆ, ಸತ್ಯವೇ ದೇವರಾಗಿತ್ತಲ್ಲದೆ, ದೇವರೇ ಸತ್ಯ ಎಂಬ ಮಾನಸಿಕ ಕುರುಡು ಅವರಲ್ಲಿರಲಿಲ್ಲ. ಧರ್ಮ ಅವರಿಗೆ ಎದೆಯ ಭಾಗವಾಗಿತ್ತಲ್ಲದೆ, ನೆತ್ತಿಯ ನಂಜು ಆಗಿರಲಿಲ್ಲ ಎಂದು ತಿಳಿಸಿದರು.
ಕನ್ನಡ ಉಪನ್ಯಾಸಕ ರಾಮಾಂಜಿ ಉಡುಪಿ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ಪ್ರೋ. ನಂದೀಶ್ ಕುಮಾರ್ ಕೆ.ಸಿ, ವಿದ್ಯಾರ್ಥಿ ನಾಯಕ ಈರಬಸು, ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿ.ಎಂ, ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ವಿಖ್ಯಾತ್ ಗಾಂಧಿಪ್ರಿಯ ಮಂತ್ರ ಪಠಣ ಮಾಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಅಪರ್ಣಾ ಕೆಯು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಅಶ್ವಿನಿ ಡಿ.ಎಸ್ ನಿರೂಪಿಸಿ, ಸಂತೋಷ್ ವಂದಿಸಿ, ದೀಕ್ಷಾ ಸ್ವಾಗತಿಸಿದರು.
