ನಮ್ಮ ಹೃದಯಗಳು ಬೇರೆ ಬೇರೆಯಾದಾಗ ನಮ್ಮೊಳಗೆ ಪ್ರೀತಿ ಕಡಿಮೆಯಾಗಿ ದ್ವೇಷ ಹೆಚ್ಚಾಗುತ್ತದೆ. ನಿಮ್ಮ ಸ್ನೇಹಿತರೊಂದಿಗೆ, ಆಪ್ತರೊಂದಿಗೆ ಉತ್ತಮ ಮಾತುಗಳಿಂದ ಸಂಪರ್ಕ ಸಾಧಿಸಿ ಎಂದು ಪ್ರವಾದಿ ಮುಹಮ್ಮದರು ಕಲಿಸಿಕೊಟ್ಟಿದ್ದಾರೆ. ನಾವು ಹಸಿದಿದ್ದರೂ ಇತರರಿಗೆ ಉಣಿಸುವವರಾಗಬೇಕು. ಧರ್ಮಗಳ ಆಚಾರ ವಿಚಾರಗಳಿಗಿಂತ, ಮೌಲ್ಯಗಳು ನಮ್ಮ ನಡುವೆ ಅತಿ ಹೆಚ್ಚು ಪ್ರಚಾರವಾಗಬೇಕು ಎಂದು ಚೊಕ್ಕಬೆಟ್ಟು ಮಸೀದಿಯ ಧರ್ಮಗುರುಗಳಾದ ಮೌಲಾನ ಅಬ್ದುಲ್ ಅಝೀಝ್ ದಾರಿಮಿ ಹೇಳಿದರು.

ಅವರು, ಕುಂದಾಪುರ ನಗರದ ಯುನಿಟಿ ಹಾಲ್ ನಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಕುಂದಾಪುರ ತಾಲೂಕು ಘಟಕದ ವತಿಯಿಂದ “ಪ್ರಸಕ್ತ ಪರಿಸ್ಥಿತಿ ಮತ್ತು ಪ್ರವಾದಿ ಸಂದೇಶ” ಎಂಬ ವಿಷಯದಲ್ಲಿ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ದಿನೇಶ್ ಹೆಗ್ಡೆ, ಧರ್ಮಗಳು ಪರಸ್ಪರ ಅರಿಯಲು ಮತ್ತು ಬೆರೆಯಲು ಇರುವಂತಹದು. ಯಾರು ನ್ಯಾಯವನ್ನು ಪಾಲಿಸುತ್ತಾನೆ ಅವನು ದೇವನ ಸಮೀಪ ಇರುವವನು ಎಂದು ಪ್ರವಾದಿ ಮುಹಮ್ಮದರು ಕಲಿಸಿದ್ದಾರೆ. ನ್ಯಾಯ ನಿಮ್ಮ ಮಾತಾಪಿತರ ಅಥವಾ ನಿಮ್ಮ ವಿರುದ್ದವೇ ಆಗಿದ್ದರು ನೀವು ನ್ಯಾಯ ಪಾಲಿಸಿ ಎಂಬ ಚಿಂತನೆ ಇಸ್ಲಾಮಿನದ್ದು ಎಂದು ಹೇಳಿದರು.

ಸಹಬಾಳ್ವೆ ಕುಂದಾಪುರ ಅಧ್ಯಕ್ಷರಾದ ರಾಮಕೃಷ್ಣ ಹೇರ್ಳೆ ಮಾತನಾಡಿ, ನಾನು ಶ್ರೇಷ್ಠ ಇತರರು ಕನೀಷ್ಠ ಎಂಬ ಅಶಯವನ್ನು ಇಟ್ಟುಕೊಂಡರೆ ಅಂತಹ ಆಶಯಗಳನ್ನು ದೇವನು ಮೆಚ್ಚುವುದಿಲ್ಲ. ನಾವು ಸಂವಿಧಾನವನ್ನು ರಚಿಸಿಕೊಂಡು ಇಲ್ಲಿ ಭ್ರಾತೃತ್ವದ ದೇಶ, ಜಾತ್ಯಾತೀತವಾಗಿ ಇರಬೇಕು, ಧರ್ಮಾತೀತವಾಗಿ ಇರಬೇಕು, ಧರ್ಮನಿರಪೇಕ್ಷವಾಗಿ ಇರಬೇಕು ಎನ್ನುವಂತಹ ಘೋಷವಾಕ್ಯಗಳನ್ನು ಹಾಕಿಕೊಂಡರೂ ಸಹ ಇಂದು ನಮ್ಮನ್ನು ಧರ್ಮಾಧಾರಿತವಾಗಿ, ಜಾತಿ ಆಧಾರಿತವಾಗಿ ಒಡೆಯಲಾಗುತ್ತಿದೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುಂದುವರೆದಿದ್ದರೂ ನಮ್ಮನ್ನು ತುಳಿಯುವಂತಹ ಪರಿಸ್ಥಿತಿ ಎದುರಾಗಿದೆ ಈ ಬಗ್ಗೆ ನಾವು ಜಾಗರೂಕರಾಗಿರಬೇಕು ಎಂದು ಹೇಳಿದರು.

ಹೋಲಿ ರೋಸರಿ ಚರ್ಚ್ ನ ಧರ್ಮಗುರುಗಳಾದ ವಂದನೀಯ ರೆ.ಫಾ. ಪಾವ್ ರೇಗೊ, ಕಾಂಗ್ರೇಸ್ ಮುಖಂಡ ದಿನೇಶ್ ಮಳವಳ್ಳಿ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಜ| ಮುಹಮ್ಮದ್ ಮೌಲಾ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಕುಂದಾಪರ ತಾಲೂಕು ಅಧ್ಯಕ್ಷರಾದ ಎಸ್. ದಸ್ತಗೀರ್ ಕಂಡ್ಲರ್ ವಹಿಸಿದ್ದರು. ಕಾರ್ಯಕ್ರಮದ ಸಂಚಾಲಕರಾದ ಮೌಲಾನ ಝಮೀರ್ ಅಹ್ಮದ್ ರಶಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಹಿರಿಯ ಉಪಾಧ್ಯಕ್ಷರಾದ ಮಹಮ್ಮದ್ ರಪೀಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಕಟಪಾಡಿ, ಜಿಲ್ಲಾ ಉಪಾಧ್ಯಕ್ಷರಾದ ಶಾಬಾನ್ ಹಂಗಳೂರು, ಜಿಲ್ಲಾ ಸಂಚಾಲಕರಾದ ಸಯ್ಯದ್ ಫರೀದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಕಾರ್ಯದರ್ಶಿ ರಿಯಾಝ್ ಕೋಡಿ ಸ್ವಾಗತಿಸಿದರು. ಮುನೀರ್ ಅಹ್ಮದ್ ಕಂಡೂರ್ ನಿರೂಪಿಸಿದರು. ಮುಜಾವರ್ ಅಬು ಮುಹಮ್ಮದ್ ಧನ್ಯವಾದವಿತ್ತರು.

ಈ ಸಂದರ್ಭದಲ್ಲಿ ರಾಮ್ಸನ್ ಸರಕಾರಿ ಪೌಢ ಶಾಲೆ ಕಂಡ್ಲೂರ್ ನ ಸಹ ಶಿಕ್ಷಕ ಸಂತೋಷ್, ನಿವೃತ್ತ ಪದವೀಧರ ಮುಖ್ಯೋಪಾಧ್ಯಾಯ ಜಿ ಮುಹಮ್ಮದ್ ರಫೀಕ್ ಹಾಗೂ ಬಸ್ರೂರು ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಪಿಯುಶ್ ಡಿಸೋಜರಿಗೆ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯಿತು.

