ಉಡುಪಿ | ಪರಶುರಾಮ ಥೀಮ್ ಪಾರ್ಕ್: ಪರಶುರಾಮನ ಕಂಚಿನ ಪ್ರತಿಮೆ ಅಸಲಿಯೋ? ನಕಲಿಯೋ?

Date:

Advertisements

40% ಭ್ರಷ್ಟಾಚಾರದ ಆರೋಪ ಹೊತ್ತು ಕರ್ನಾಟಕದಲ್ಲಿ ಸೋಲುಂಡ ಬಿಜೆಪಿ, ಇನ್ನೂ ನಾನಾ ರೀತಿಯ ಹೊಸ ಹೊಸ ಆರೋಪಗಳನ್ನು ಎದುರಿಸುತ್ತಿದೆ. ಇದೀಗ, ಬಿಜೆಪಿ ಮಾಜಿ ಸಚಿವ, ಶಾಸಕ ವಿ ಸುನೀಲ್ ಕುಮಾರ್‌ ಅವರು ನಿರ್ಮಾಣ ಮಾಡಿದ್ದೇನೆ ಎಂದು ಹೇಳಿಕೊಳ್ಳುತ್ತಿರುವ ಉಡುಪಿ ಜಿಲ್ಲೆಯ ಕಾರ್ಕಳದ ಬೈಲೂರಿನಲ್ಲಿರುವ ಪರಶುರಾಮ ಥೀಂ ಪಾರ್ಕ್ ವಿಚಾರವೂ ಚರ್ಚೆಗೆ ಗ್ರಾಸವಾಗಿದೆ. ಶಾಸಕರ ಸಾಧನೆಗೆ ಪೂರಕವಾದ ದಾಖಲೆಗಳೇ ಇಲ್ಲದೆ, ಸಾರ್ವಜನಿಕರ ಆಕ್ಷೇಪಗಳಿಗೆ ಕಾರಣವಾಗಿದ್ದು, ಥೀಂ ಪಾರ್ಕ್‌ ಮತ್ತು ಪರಶುರಾಮ ಪ್ರತಿಮೆಯ ಸತ್ಯಾಸತ್ಯತೆಗಳು ಈಗಾಗಲೇ ಬೆಳಕಿಗೆ ಬಂದಿವೆ.

ಕಾರ್ಕಳದ ಎರ್ಲಪಾಡಿಯ ಉಮ್ಮಿಕಲ್ ಬೆಟ್ಟದಲ್ಲಿ ಪರಶುರಾಮನ ಪಾರ್ಕ್ ನಿರ್ಮಾಣಗೊಂಡಿರುವ ಜಮೀನು ಗೋಮಾಳ ಜಮೀನಾಗಿದ್ದು, ಆ ಭೂಮಿಯನ್ನು ಥೀಂ ಪಾರ್ಕ್‌ ನಿರ್ಮಾಣಕ್ಕೆ ಮಂಜೂರಾತಿ ಕೋರಿದ್ದ ಪ್ರಸ್ತಾವನೆಯನ್ನು ಬಿಜೆಪಿ ಸರ್ಕಾರವೇ ತಿರಸ್ಕರಿಸಿತ್ತು. ಹಾಗಾದರೆ ಪರಶುರಾಮ ಥೀಂ-ಪಾರ್ಕ್ ಕಾನೂನು ಬಾಹಿರವಾಗಿ ನಿರ್ಮಾಣಗೊಂಡಿದೆಯೇ? ಮುಂದೆ ಅದರ ನಿರ್ವಹಣೆಯ ಜವಾಬ್ದಾರಿ ಯಾರ ಹೊಣೆ? ಎಂದು ಪುರಸಭಾ ಸದಸ್ಯ ಬ್ಲಾಕ್ ಕಾಂಗ್ರೇಸ್ ವಕ್ತಾರ ಶುಭದರಾವ್ ಅವರು ಕಳೆದ ವಾರ ಪತ್ರಿಕಾಗೋಷ್ಠಿ ನಡೆಸಿ ಪ್ರಶ್ನಿಸಿದ್ದರು.

ಎರ್ಲಪಾಡಿ ಗ್ರಾಮದ ಸರ್ವೆ ನಂ.329/1ರಲ್ಲಿ 1.58 ಎಕ್ರೆ ಜಮೀನು ಗೋಮಾಳ ಜಮೀನಾಗಿದ್ದು, ಅದರಲ್ಲಿ ನಿರ್ಮಾಣಗೊಂಡ ಪರಶುರಾಮ ಥೀಂ ಪಾರ್ಕ್‌ಗೆ ಆ ಜಾಗವನ್ನು ಮಂಜೂರು ಮಾಡಲು ಅವಕಾಶವಿಲ್ಲ ಎಂದು ಕಾರ್ಕಳ ತಹಶೀಲ್ದಾರ್ ಎರ್ಲಪಾಡಿ ಗ್ರಾ.ಪಂ.ಗೆ ಆದೇಶ ನೀಡಿದ್ದರು. ಆದರೂ, ಅಲ್ಲಿ ಕಾನೂನು ಬಾಹಿರವಾಗಿ ಥೀಂ ಪಾರ್ಕ್‌ ನಿರ್ಮಾಣ ಮಾಡಲಾಗಿದೆ. ಅಲ್ಲದೆ, ಅನಧಿಕೃತ ಥೀಂ ಪಾರ್ಕ್ಗೆ ಕೋಟ್ಯಾಂತರ ರೂಪಾಯಿ ಸರ್ಕಾರದ ಅನುದಾನವೇ ಬಳಕೆಯಾಗಿದೆ ಎನ್ನುವುದು ಸಾಬೀತಾಗಿದೆ.

2019ರ ನವೆಂಬರ್ 8ರಂದು ಎರ್ಲಪಾಡಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಈ ಜಮೀನನ್ನು ಪರಶುರಾಮ ಥೀಂ ಪಾರ್ಕ್ ನಿರ್ಮಾಣ ಮಾಡುವ ಉದ್ದೇಶಕ್ಕೆ ಕಾಯ್ದಿರಿಸುವಂತೆ ನಿರ್ಣಯ ಮಾಡಿ ಪ್ರಸ್ತಾವನೆಯನ್ನು ತಹಶೀಲ್ದಾರ್‌ಗೆ ಸಲ್ಲಿಸಿತ್ತು. ಡೀಮ್ಡ್ ಫಾರೆಸ್ಟ್, ಗೋಮಾಳ ಎನ್ನುವ ಕಾರಣಗಳಿಂದ ಗ್ರಾಮ ಪಂಚಾಯತಿಯು ತಹಸೀಲ್ದಾರ್ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಹಾಗೂ ಸರ್ಕಾರದ ಕಂದಾಯ ಅಧೀನ ಕಾರ್ಯದರ್ಶಿವರೆಗೂ ಪತ್ರ ವ್ಯವಹಾರ ನಡೆಯುತ್ತಲೇ ಇತ್ತು. ಆದರೆ, ಇನ್ನೊಂದೆಡೆ ಯಾವುದೇ ಅನುಮೋದನೆ ಇಲ್ಲದೆ, ಶಾಸಕ ಸುನೀಲ್ ಕುಮಾರ್ ಅವರು ಸರ್ಕಾರದ ಗರಿಷ್ಠ ಪ್ರಮಾಣದ ಅನುದಾನ ಅನಧೀಕೃತವಾಗಿ ಈ ಉಮಿಕಲ್ಲ್ ಬೆಟ್ಟದ ಮೇಲೆ ಸುರಿದರು. ತಮ್ಮದೇ ಸರ್ಕಾರವಿದೆ, ತಾನು ಮಾಡಿದ್ದೇ ಸರಿ ಎನ್ನುವ ರೀತಿ ನಡೆದುಕೊಂಡ ಶಾಸಕರು ರಾಜ್ಯದ ಮುಖ್ಯಮಂತ್ರಿಯನ್ನೇ ಉದ್ಘಾಟನೆಗೆ ಕರೆಸಿ ಪ್ರಚಾರ ಗಿಟ್ಟಿಸಿಕೊಂಡರು. ಮೂರು ದಿನಗಳ ಕಾಲ ನಡೆದ ಅದ್ದೂರಿ ಕಾರ್ಯಕ್ರಮ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆಯಂತೆ ನಡೆಯಿತು. ಪರಶುರಾಮನ ವಿಗ್ರಹದ ದರ್ಶನಕ್ಕೆ ಲಕ್ಷಾಂತರ
ಜನ ಆಗಮಿಸಿರುವುದೂ ಕಂಡು ಬಂತು. ಕೊನೇ ಕ್ಷಣದಲ್ಲಿ ಥೀಂ ಪಾರ್ಕ್‌ ನಿರ್ಮಾಣವು ಕಾನೂನು ಬಾಹಿರ ಎನ್ನುವುದು ಸಾಬೀತಾಗುತ್ತಿದ್ದಂತೆ ಕಾರ್ಕಳದ ಪ್ರಜ್ಞಾವಂತ ಜನರು ಮೌನ ಮುರಿಯುವಂತೆ ಮಾಡಿದೆ.

WhatsApp Image 2023 09 12 at 3.40.17 PM

2023ರ ಮಾರ್ಚ್‌ 15ರಂದು ಸರ್ಕಾರದ ಆಧೀನ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗೆ ಪತ್ರ ಬರೆದು ಥೀಂ ಪಾರ್ಕ್ ನಿರ್ಮಾಣಕ್ಕಾಗಿ ಎರ್ಲಪಾಡಿ ಗ್ರಾಮ ಪಂಚಾಯತಿ ಕಾಯ್ದಿರಿಸಿದ ಜಮೀನು ಗೋಮಾಳ ಜಮೀನಾಗಿದೆ. ಆ ಜಮೀನನ್ನು ಪ್ರಸ್ತಾವಿತ ಉದ್ದೇಶಕ್ಕೆ ಮಂಜೂರು ಮಾಡಲು ಅವಕಾಶವಿಲ್ಲವೆಂದು ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು. ಅದೇ ಆದೇಶವನ್ನು 2023ರ ಮೇ 22ರಂದು ಉಡುಪಿ ಜಿಲ್ಲಾಧಿಕಾರಿಗಳು ಕಾರ್ಕಳ ತಹಶೀಲ್ದಾರ್‌ಗೆ ಕಳುಹಿಸಿದ್ದರು. ತಹಶೀಲ್ದಾರರು 2023ರ ಜುಲೈ 05ರಂದು ಎರ್ಲಪಾಡಿ ಗ್ರಾಮ ಪಂಚಾಯತಿಗೆ ತಿರಸ್ಕಾರದ ಆದೇಶ ಕಳುಹಿಸಿದ್ದರು. ಬಿಜೆಪಿ ಸರ್ಕಾರವೇ ಥೀಂ ಪಾರ್ಕ್‌ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂಬುದು ಜಗಜ್ಜಾಹೀರಾಗಿದೆ.

WhatsApp Image 2023 09 12 at 3.40.15 PM

ಹೀಗಾಗಿ, ಸುನೀಲ್ ಕುಮಾರ್ ರವರು ಸಚಿವರಾಗಿದ್ದರೂ ಪಾರ್ಕ್ ನಿರ್ಮಾಣಕ್ಕೆ ಜಮೀನು ಕೊಡಿಸಲು ಸಾದ್ಯವಾಗದೆ ಕಾನೂನು ಬಾಹಿರ ಕಾಮಗಾರಿ ನಡೆಸಿದ ಉದ್ದೇಶವೇನು? ಜಮೀನು ಮಂಜೂರಾಗಲಿಲ್ಲ ಎಂದಾದ ಮೇಲೆ ಅಷ್ಟು ದೊಡ್ಡ ಮೊತ್ತದ ಅನುದಾನ ಬಿಡುಗಡೆ ಹೇಗೆ ಸಾಧ್ಯವಾಯಿತು? ಅನುಮೋದನೆ ಇಲ್ಲದ ಥೀಂ ಪಾರ್ಕ್‌ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಉಡುಪಿ ಜಿಲ್ಲಾಡಳಿತ (ಕೆಪಿಟಿಸಿಎಲ್, ಸಿಎಸ್‌ಆರ್), ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಒಟ್ಟು 6,71,92,943 ಕೋಟಿ ರೂ. ಬಿಡುಗಡೆಯಾಗಿದ್ದು ಹೇಗೆ? ಅನುಮೋದಿಸಲ್ಪಡದ ಕಾಮಗಾರಿಗೆ ಸರ್ಕಾರ ಕಾರ್ಯಾದೇಶವನ್ನು ನೀಡಲು ಸಾಧ್ಯವಿದೆಯೇ? ಸರ್ಕಾರದ ಯಾವುದೇ ಕಾರ್ಯದೇಶವಿಲ್ಲದೆ ನಿರ್ಮಿತಿ ಕೇಂದ್ರ ಇಷ್ಟೆಲ್ಲಾ ಕಾಮಗಾರಿಗಳನ್ನು ಯಾವ ಆಧಾರದ ಮೇಲೆ ಮಾಡಿದೆ? ಮತ್ತು ಗುತ್ತಿಗೆದಾರರಿಗೆ ಹಣ ಪಾವತಿ ಹೇಗೆ ಸಾದ್ಯವಾಯಿತು? ಸರ್ಕಾರದ ಅಧೀನ ಕಾರ್ಯದರ್ಶಿ ಮತ್ತು ಜಿಲ್ಲಾದಿಕಾರಿಯವರ ಆದೇಶ ಇದ್ದರೂ, ಪಾರ್ಕಿನಲ್ಲಿ ಕಾಮಗಾರಿ ನಡೆದ್ದದ್ದಾದರೂ ಹೇಗೆ? ಎಂಬ ಹಲವಾರು ಪ್ರಶ್ನೆಗಳು ತಾಲೂಕಿನ ಜನರು ಮತ್ತು ಹೋರಾಟಗಾರರನ್ನು ಕಾಡುತ್ತಿವೆ.

WhatsApp Image 2023 09 12 at 3.40.16 PM

ಈ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, “ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲ್ಲೇ‌ಬೇಕೆಂಬ ಪಣತೊಟ್ಟು ನಾನಾ ರೀತಿಯಲ್ಲಿ ಕಸರತ್ತು ನಡೆಸಿರುವ ಶಾಸಕ ಸುನೀಲ್‌ ಕುಮಾರ್ ಅವರಿಗೆ ಅಗ ನೆನಪಿಗೆ ಬಂದಿದ್ದು ಪರಶುರಾಮ ಥೀಮ್ ಪಾರ್ಕ್‌.
ಧರ್ಮ, ಕಾನೂನು, ದೇಶ, ಅಭಿವೃದ್ಧಿ ಎಂದೆಲ್ಲ ಮಂತ್ರ ಪಠಿಸುವ ಶಾಸಕ ಸುನೀಲ್ ಕುಮಾರ್ ಅವರು ಪರಶುರಾಮನ ಕಂಚಿನ ಪ್ರತಿಮೆ ಸ್ಥಾಪನೆಯಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಈಗ, ಅದು ಜಗಜಾಹೀರುಗೊಂಡಿದೆ. ಈ ಬೆನ್ನಲ್ಲೇ, ಜನರಿಗೆ ಅದು ತಿಳಿಯದಂತೆ ಮರೆಮಾಚಲು ನಾನಾ ಕಾರಣವೊಡ್ಡಿ ಪರಶುರಾಮ ಥೀಮ್ ಪಾರ್ಕ್‌ಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನಿರ್ಬಂಧಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಪರಶುರಾಮ ಮೂರ್ತಿ ಸ್ಥಾಪನೆಯಲ್ಲಿ ಪ್ರತಿಮೆ ನಿಲ್ಲಿಸಿರುವ ರೀತಿ ಸರಿ ಇಲ್ಲ ಎಂಬ ನೆಪದಲ್ಲಿ ಪ್ರತಿಮೆಯನ್ನೇ ಬದಲಾಯಿಸಿ ಕಂಚಿನ ಪ್ರತಿಮೆಯನ್ನು ಸ್ಥಾಪಿಸುವ ಹುನ್ನಾರ ಎಣೆದಿದ್ದಾರೆ. ಪರಶುರಾಮ ಥೀಂ-ಪಾರ್ಕ್ ನಿರ್ಮಾಣಕ್ಕೆ ನಮ್ಮ ವಿರೋದವಾಗಲಿ, ಆಕ್ಷೇಪವಾಗಲಿ ಇಲ್ಲ. ಆದರೆ ಮುಚ್ಚಿಟ್ಟಿರುವ ಸತ್ಯವನ್ನು ಜನರಿಗೆ ತಿಳಿಸುವುದು ನಮ್ಮ ಕರ್ತವ್ಯ ಅದನ್ನು ಮಾಡಿದ್ದೇವೆ. ಶಾಸಕರು ಕೂಡ ಈ ಬಗ್ಗೆ ಸತ್ಯಾಸತ್ಯತೆಯನ್ನು ಜನತೆಗೆ ತಿಳಿಸುವಂತೆ ಆಗ್ರಹಿಸುತೇನೆ” ಎಂದು ಹೇಳಿದರು.

ಪರಶುರಾಮ ಪ್ರತಿಮೆ ಅಸಲಿ – ನಕಲಿ ಕುರಿತ ಚರ್ಚೆಗೆ ಪ್ರತಿಕ್ರಿಯೆ ನೀಡಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, “ಕಾರ್ಕಳ ಶಾಸಕರು ಅಭಿವೃದ್ಧಿಗಾಗಿ ಪ್ರತಿಮೆ ನಿರ್ಮಾಣ ಮಾಡಿದ್ದೇನೆ ಎಂದು ಹೇಳುತ್ತಾರೆ. ಆದರೆ, ಅಕ್ರಮವಾಗಿ ಪ್ರತಿಮೆ ನಿರ್ಮಾಣ ಮಾಡಿದರೆ ಅಭಿವೃದ್ಧಿ ಹೇಗಾಗುತ್ತದೆ? ಅಭಿವೃದ್ಧಿ ಎಂದರೆ ಜನರಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಅನ್ನ ಮತ್ತು ಸೂರು ನೀಡುವುದಾಗಿದೆ. ಅದು ಬಿಟ್ಟು ಕಂದಾಯ ಇಲಾಖೆ ಸಹಿತ ಎಲ್ಲ ಇಲಾಖೆಗಳು ಅನುಮತಿ ನೀಡದೇ ಇದ್ದರೂ ಪಾರ್ಕ್‌ ನಿರ್ಮಾಣ ಮಾಡಿರುವುದು ಅಭಿವೃದ್ಧಿ ಎನಿಸಿಕೊಳ್ಳುವುದಿಲ್ಲ. ಭ್ರಷ್ಟಾಚಾರದ ವಿರುದ್ಧ ಎಂದು ಹೇಳುತ್ತಿರುವ ಕಾಂಗ್ರೆಸ್ ಸರ್ಕಾರ ಇದರ ಬಗ್ಗೆ ತನಿಖೆ ನಡೆಸುವ ನೈತಿಕತೆ ಹೊಂದಿಲ್ಲವೇ” ಎಂದು ಕಿಡಿಕಾರಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, “ಕಾರ್ಕಳ ತಾಲೂಕಿನ ಬೈಲೂರು ಪರಶುರಾಮ ಥೀಮ್ ಪಾರ್ಕ್‌ನ ವಿರುದ್ಧದ ಆರೋಪಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಸಂಬಂಧ ಜನರ ಆರೋಪ ಮತ್ತು ಬೇಡಿಕೆಗಳ ಕುರಿತ ಸಂಪೂರ್ಣ ಮಾಹಿತಿಯನ್ನು ರಾಜ್ಯ ಸರಕಾರಕ್ಕೆ ನೀಡಲಾಗಿದ್ದು, ಅಲ್ಲಿಂದ ಬರುವ ನಿರ್ದೇಶನದಂತೆ ಜಿಲ್ಲಾಡಳಿತ ಮುಂದಿನ ಕ್ರಮ ಕೈಗೊಳ್ಳಲಿದೆ. ಒಟ್ಟು 12.5 ಕೋಟಿ ರೂ. ವೆಚ್ಚದಲ್ಲಿ ಥೀಮ್‌ಪಾರ್ಕ್ ಕಾಮಗಾರಿಗೆ ಪ್ರವಾಸೋದ್ಯಮ ಇಲಾಖೆಯಿಂದ ಎರಡು ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಉಳಿದಂತೆ ಯಾವುದೇ ಇಲಾಖೆಯಿಂದ ಹಣ ನೀಡಿಲ್ಲ. ಈ ಕಾಮಗಾರಿಗೆ ಪ್ರವಾಸೋದ್ಯಮ ಇಲಾಖೆ ಆಡಳಿತ್ಮಾಕ ಅನುಮೋದನೆ ನೀಡಿರುವುದರಿಂದ ಈಗಾಗಲೇ ಈ ಕುರಿತು ಮಾಹಿತಿಯನ್ನು ಅವರಿಗೆ ನೀಡಲಾಗಿದೆ. ಇದೀಗ ಪತ್ರ ಕೂಡ ಬರೆಯಲಾಗಿದೆ” ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಪ್ರತಿನಿತ್ಯ ಚರ್ಚೆಯಲ್ಲಿರು ಈ ಪರಶುರಾಮ ಥೀಮ್ ಪಾರ್ಕ್‌ನ ಅಸಲಿ ಬಣ್ಣ ಇನ್ನೂ ಕೆಲವೇ ದಿನಗಳಲ್ಲಿ ಹೊರ ಬೀಳಲಿದೆ ಅಲ್ಲಿಯವರೆಗೆ ಕಾದುನೋಡಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುವಪರಿವರ್ತನೆ ಯಾತ್ರೆ: ಬಾಗಲಕೋಟೆಯಲ್ಲಿ ಚಾಲನೆ

ಯುವಜನರನ್ನು ರಾಜ್ಯದ ಅಭಿವೃದ್ಧಿಯತ್ತ ಚಿತ್ತಹರಿಸಲು, ಪ್ರಜೆಗಳ ಆರೋಗ್ಯ, ಶಿಕ್ಷಣ, ಸಬಲೀಕರಣ, ಉದ್ಯೋಗದ...

ಕೊಪ್ಪಳ | ಪ್ರವಾದಿ ಮಹಮ್ಮದ್‌ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್

'ಖುರಾನ್' ಬರುವ ಪ್ರವಾದಿ ಮಹಮ್ಮದ್‌ ಅವರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು...

ಶಿವಮೊಗ್ಗದ ಸಂಚಾರ ವ್ಯವಸ್ಥೆಯಲ್ಲಿ ಅರಾಜಕತೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಹೈರಾಣು

ಒಮ್ಮೆ ಶಾಂತ, ಶಿಕ್ಷಣ ಹಾಗೂ ಸಂಸ್ಕೃತಿಯ ತಾಣವಾಗಿದ್ದ ಶಿವಮೊಗ್ಗ ನಗರ ಇತ್ತೀಚಿನ...

ತುಮಕೂರು | ಗಾಂಧೀ ತತ್ವಗಳಿಗೆ ವಿಶ್ವ ಮನ್ನಣೆ : ಡಾ. ಜಿ.ಪರಮೇಶ್ವರ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವಗಳಿಗೆ ಇಡೀ ವಿಶ್ವದಲ್ಲಿಯೇ ಮನ್ನಣೆ ದೊರೆತಿದೆ...

Download Eedina App Android / iOS

X