ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀಕ್ಷೇತ್ರ ಉಚ್ಚಿಲದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆಯುತ್ತಿರುವ 4ನೇ ವರ್ಷದ ‘ಉಡುಪಿ ಉಚ್ಚಿಲ ದಸರಾ’ ವೈಭವದ ಭವ್ಯ ಶೋಭಾ ಯಾತ್ರೆ ಇಂದು (ಗುರುವಾರ) ನಡೆಯಲಿದೆ.
ಕರಾವಳಿಯ ನಾಡಹಬ್ಬವೆಂದೇ ವಿಶ್ವವಿಖ್ಯಾತಿ ಪಡೆಯುತ್ತಿರುವ ‘ಉಡುಪಿ ಉಚ್ಚಿಲ ದಸರಾ’ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ.ಜಿ.ಶಂಕರ್ ಮಾರ್ಗದರ್ಶನದಲ್ಲಿ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ ನೇತೃತ್ವದಲ್ಲಿ ಸೆ.22ರಿಂದ ಆರಂಭವಾಗಿದ್ದು, ಗುರುವಾರ ಭವ್ಯ ಶೋಭಾಯಾತ್ರೆಯ ಮೂಲಕ ಕೊನೆಗೊಳ್ಳಲಿದೆ. ಈ ಬಾರಿ ದಸರಾ ಜೊತೆ ಬಹಳ ಅದ್ದೂರಿಯಾಗಿ ಶೋಭಾ ಯಾತ್ರೆ ನಡೆಸಲು ನಿರ್ಧರಿಸರುವ ಕ್ಷೇತ್ರಾಡಳಿತ ಸಮಿತಿ, ಡಾ.ಜಿ.ಶಂಕರ್ ಹಾಗು ಜಯ ಸಿ.ಕೋಟ್ಯಾನ್ ನೇತೃತ್ವದಲ್ಲಿ ಹಲವು ಸುತ್ತಿನ ಸಭೆ ನಡೆಸಿ, ಪೊಲೀಸ್ ಇಲಾಖೆಯೊಂದಿಗೆ ಸಭೆ ಸೇರಿದಂತೆ ಅದಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತಾ ಕಾರ್ಯಗಳನ್ನು, ಸಂಬಂಧಿತರಿಗೆ ಈಗಾಗಲೇ ಸೂಕ್ತ ಜವಾಬ್ದಾರಿಗಳನ್ನು ನೀಡಲಾಗಿದೆ.
ಗುರುವಾರ ನಡೆಯುವ ಶೋಭಾ ಯಾತ್ರೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ರಾಷ್ಟ್ರೀಯ ಹೆದ್ದಾರಿ 66 ಮತ್ತು ಕಾಪು ಬೀಚ್ ರಸ್ತೆಯಲ್ಲಿ 18- 20 ಕಿ.ಮೀ. ಉದ್ದದ ವರೆಗೆ ಶೋಭಾಯಾತ್ರೆ ಸಾಗಲಿದ್ದು, 60ಕ್ಕೂ ಅಧಿಕ ಟ್ಯಾಬ್ಲೋ, ಭಜನಾ ತಂಡಗಳು, ವಾದ್ಯಮೇಳಗಳು ಭಾಗವಹಿಸುವ ಮೂಲಕ ಇನ್ನಷ್ಟು ರಂಗು ತರಲಿವೆ.
ಶೋಭಾಯಾತ್ರೆಗೆ ಮೆರುಗು ತರಲಿರುವ ಆಪರೇಷನ್ ಸಿಂಧೂರ ಟ್ಯಾಬ್ಲೋ: ಈ ಬಾರಿ ಶೋಭಾಯಾತ್ರೆಗೆ ಅಪರೇಶನ್ ಸಿಂದೂರ ಟ್ಯಾಬ್ಲೊ ಆಕರ್ಷಣೆಯ ಕೇಂದ್ರವಾಗಲಿದೆ. ಶೋಭಾಯಾತ್ರೆ ಯಲ್ಲಿ ಶಾರದೆ ಮತ್ತು ನವದುರ್ಗೆಯರನ್ನು ಹೊತ್ತ ಟ್ಯಾಬ್ಲೊಗಳ ಸಹಿತ ದೇವಸ್ಥಾನದ ಬಿರುದಾವಳಿ, ಸ್ಯಾಕ್ಸೋಫೋನ್, ನಾಗಸ್ವರ, ಕೊಂಬು ಕಹಳೆ, ವಾದ್ಯ ಬ್ಯಾಂಡ್, ನಾಸಿಕ್ ಬ್ಯಾಂಡ್, ಚೆಂಡೆ, ಕೊಡೆ, ತಟ್ಟಿರಾಯ, ಕಥಕ್ಕಳಿ, ಥೈಯ್ಯಂ, ಭಜನಾ ತಂಡಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಲಿವೆ.
ಆಮೆ, ಅಯೋಧ್ಯೆ ರಾಮ ಮಂದಿರ, ಉಚ್ಚಿಲ ಮಹಾಲಕ್ಷ್ಮೀ ದೇವರು, ಗಜಾಸುರ, ಹಂಸ ವಾಹಿನಿ ಮಹಾಲಕ್ಷ್ಮೀ, ದೋಣಿ, ರಾಧಾಕೃಷ್ಣ ವಿಲಾಸ, ಮಹಿಷಾಸುರ ಸಹಿತ ನವದುರ್ಗೆಯರು, ಬೃಹತ್ ಗೊಂಬೆಗಳು, ಮಹಿಳಾ ಬಳಗ, ಮಾಧವ ಮಂಗಳ ಗುರುಗಳ ಟ್ಯಾಬ್ಲೊ, ಸದಿಯ ಸಾಹುಕಾರ ಟ್ಯಾಬ್ಲೊ, ಹುಲಿ ವೇಷ, ಇಸ್ಕಾನ್ ಭಜನೆ, ಮಲ್ಪೆ ಭಜನಾ ಟ್ಯಾ ಬ್ಲೊ, ಪರ್ಸಿನ್ ಬೋಟ್ ಟ್ಯಾಬ್ಲೊ, ಡಿಜೆ ವಾಹನಗಳು ಮೆರವಣಿಗೆಗೆ ಇನ್ನಷ್ಟು ಮೆರುಗು ತರಲಿವೆ.
ಶೋಭಾಯಾತ್ರೆ ಸಾಗುವ ಮಾರ್ಗ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಿಂದ 5 ಗಂಟೆಗೆ ಹೊರಡುವ ಶೋಭಾಯಾತ್ರೆಯು ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ-ಮಂಗಳೂರು ರಸ್ತೆಯಲ್ಲಿ ಎರ್ಮಾಳು ಮಸೀದಿಯ ವರೆಗೆ ಸಾಗಿ, ಅಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಿರುಗಿ ಮಂಗಳೂರು-ಉಡುಪಿ ರಸ್ತೆ ಮೂಲಕವಾಗಿ ಉಚ್ಚಿಲ-ಮೂಳೂರು ಮಾರ್ಗವಾಗಿ ಕೊಪ್ಪಲಂಗಡಿಗೆ ತಲುಪಲಿದೆ. ಬಳಿಕ ಅಲ್ಲಿಂದ ಕಾಪು ಬೀಚ್ ರಸ್ತೆಯಲ್ಲಿ ಸಾಗಿ ರಾತ್ರಿ 10.30ಕ್ಕೆ ಕಾಪು ಕೊಪ್ಪಲಂಗಡಿ ಲೈಟ್ ಹೌಸ್ ಬಳಿಯ ಜಲಸ್ತಂಭನಾ ಪ್ರದೇಶಕ್ಕೆ ತಲುಪುವ ನಿರೀಕ್ಷೆಯಿದೆ. ಬಳಿಕ ಸಾಮೂಹಿಕ ಮಂಗಳಾರತಿ, ಗಂಗಾರತಿಯ ಬಳಿಕ ಸಮುದ್ರ ಮಧ್ಯಕ್ಕೆ ಕೊಂಡೊಯ್ದು 11 ಗಂಟೆ ಸುಮಾರಿಗೆ ಜಲಸ್ತಂಭನ ಕಾರ್ಯ ನಡೆಯಲಿದೆ.
ಶೋಭಾಯಾತ್ರೆ ಹಿನ್ನೆಲೆ ಪಾರ್ಕಿಂಗ್ ವ್ಯವಸ್ಥೆ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಮಂಗಳೂರು ಕಡೆಯಿಂದ ಬರುವ ಭಕ್ತರು ತಮ್ಮ ವಾಹನಗಳನ್ನು ಉಚ್ಚಿಲ ಸರಸ್ವತಿ ಮಂದಿರ ಶಾಲೆ, ಎರ್ಮಾಳು ಜನಾರ್ದನ ದೇವಸ್ಥಾನ, ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನೂಲುಗಡೆ ಮಾಡಬಹುದು. ಉಡುಪಿ ಕಡೆಯಿಂದ ಬರುವ ಭಕ್ತರಿಗೆ ಮಹಾಲಕ್ಷ್ಮೀ ಶಾಲಾ ಮೈದಾನ, ಮೊಗವೀರ ಭವನ ಬಳಿ, ದೇವಸ್ಥಾನದ ಪರಿಸರ, ಎರ್ಮಾಳು ಜನಾರ್ದನ ದೇವಸ್ಥಾನದ ಬಳಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಜಲಸ್ತಂಭನ ನಡೆಯುವ ಕಾಪು ಬೀಚ್‌ನಲ್ಲಿ ಪಾರ್ಕಿಂಗ್ ವ್ಯವಸ್ಥೆ: ಕಾಪು ಬೀಚ್‌ನಲ್ಲಿ ನಡೆಯುವ ವಿಸರ್ಜನೆ ಮತ್ತು ಜಲಸ್ತಂಭನದಲ್ಲಿ ಪಾಲ್ಗೊಳಲು ಮಂಗಳೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂಳೂರು ಮತ್ತು ಕೊಪ್ಪಲಂಗಡಿ ಬಳಿ, ಕರಾವಳಿ ಮೀನುಗಾರಿಕಾ ರಸ್ತೆ ಮತ್ತು ಬೀಚ್ ರಸ್ತೆಯಲ್ಲಿ ಬರುವವರು ಮೂಳೂರು ಸಾಯಿರಾಧಾ ರೆಸಾರ್ಟ್ ಬಳಿ, ಉಡುಪಿ- ಮಲ್ಪೆ ಪಡುಕೆರೆಯಿಂದ ಬರುವವರಿಗೆ ಪೊಲಿಪು ಶಾಲಾ ಮೈದಾನ, ಕೈಪುಂಜಾಲು ಶಾಲಾ ಮೈದಾನ, ಕಾಪು ಬೀಚ್ ಪಾರ್ಕಿಂಗ್, ಕೋಟ್ಯಾನ್ ಕಾರ್ ಮೂಲಸ್ಥಾನದ ಬಳಿ ವಾಹನ ಪಾರ್ಕಿಂಗ್‌ಗೆ ಸಂಘಟಕರು ಅವಕಾಶ ಮಾಡಿಕೊಟ್ಟಿದ್ದಾರೆ.
ಸಾರ್ವಜನಿಕರಲ್ಲಿ ಮನವಿ: ದಸರಾದಂತೆ ಈ ಬಾರಿಯ ಶೋಭಾಯಾತ್ರೆಗೂ ಲಕ್ಷಾಂತರ ಮಂದಿ ಸೇರುವ ನಿರೀಕ್ಷೆಯಿದೆ. ಶೋಭಾಯಾತ್ರೆ, ವಿಸರ್ಜನ ಮೆರವಣಿಗೆ, ಜಲಸ್ತಂಭನ ಸಂದರ್ಭ ಸಾರ್ವಜನಿಕರು ಮತ್ತು ಭಕ್ತರು ಪೊಲೀಸ್ ಇಲಾಖೆ, ಸ್ವಯಂಸೇವಕರ ನಿರ್ದೇಶನಗಳನ್ನು ಪಾಲಿಸಿ ಸಹಕರಿಸುವಂತೆ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ ಮತ್ತಿತರರು ಪ್ರಮುಖರು ಮನವಿ ಮಾಡಿದ್ದಾರೆ.