ಯಕ್ಷಗಾನ ಕಲೆಯ ಸಾಂಪ್ರದಾಯಿಕ ಮುಖವರ್ಣಿಕೆ ಹಾಗೂ ಅದರ ವೈಶಿಷ್ಟ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಡಾ. ಬಿ.ಆರ್. ಅಂಬೇಡ್ಕರ್ ಮಹಿಳಾ ಸಂಘ (ರಿ.), ಬೈಂದೂರು ಇದರ ಆಶ್ರಯದಲ್ಲಿ ಯಕ್ಷಗಾನ ಮುಖವರ್ಣಿಕೆ ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.
ಅಂಬೇಡ್ಕರ್ ಯಕ್ಷ ಮಕ್ಕಳ ಮೇಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಯಕ್ಷಗಾನ ಕಲಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ಹಿರಿಯ ಯಕ್ಷಗಾನ ಕಲಾವಿದ ನಾರಾಯಣ ಬಿಜೂರು ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಯಕ್ಷಗಾನದಲ್ಲಿ ಮುಖವರ್ಣಿಕೆಗೆ ವಿಶೇಷ ಸ್ಥಾನವಿದ್ದು, ಪಾತ್ರದ ಸ್ವರೂಪ, ಗುಣ, ಭಾವನೆ ಹಾಗೂ ಕಥಾನಕವನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಮುಖವರ್ಣಿಕೆಯ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಯಕ್ಷಗಾನ ಗುರು ಗಣೇಶ್ ದೇವಾಡಿಗ ಬಿಜೂರು ಅವರು ವಿದ್ಯಾರ್ಥಿಗಳಿಗೆ ಮುಖವರ್ಣಿಕೆಯ ವಿವಿಧ ಪ್ರಕಾರಗಳು, ಬಣ್ಣಗಳ ಬಳಕೆ, ಪಾತ್ರಗಳಿಗೆ ಅನುಗುಣವಾದ ವಿನ್ಯಾಸ ಹಾಗೂ ಮುಖವರ್ಣಿಕೆಯ ಹಿಂದಿರುವ ಕಲಾತ್ಮಕತೆಯ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು. ಬಳಿಕ ವಿವಿಧ ಪಾತ್ರಗಳ ಮುಖವರ್ಣಿಕೆಯನ್ನು ನೇರವಾಗಿ ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಿದರು.
ಕಾರ್ಯಾಗಾರದಲ್ಲಿ ಶಿಬಿರಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ, ಮುಖವರ್ಣಿಕೆಯ ಸೂಕ್ಷ್ಮತೆಗಳನ್ನು ಪ್ರಾಯೋಗಿಕವಾಗಿ ಕಲಿತುಕೊಂಡರು. ಸಾಂಪ್ರದಾಯಿಕ ಯಕ್ಷಗಾನ ಕಲೆಯ ಪ್ರಮುಖ ಅಂಗವಾಗಿರುವ ಮುಖವರ್ಣಿಕೆ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವಲ್ಲಿ ಕಾರ್ಯಾಗಾರ ಮಹತ್ವದ ಪಾತ್ರ ವಹಿಸಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ತಾಲೂಕು ದಲಿತ ಸಂಘರ್ಷ ಸಮಿತಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ವಿನಯ ವಹಿಸಿದ್ದರು. ಯಕ್ಷಗಾನ ಪ್ರೇಮಿ ಹಾಗೂ ಯಡ್ತರೆ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಸುಧಾಕರ್ ಯಡ್ತರೆ, ದ.ಸಂ.ಸ ಉಡುಪಿ ಜಿಲ್ಲಾ ಸಮಿತಿಯ ಸಂಘಟನಾ ಸಂಚಾಲಕ ಮಂಜುನಾಥ್ ನಾಗೂರು, ಬೈಂದೂರು ತಾಲೂಕು ಸಂಚಾಲಕ ಶಿವರಾಜ್ ಬೈಂದೂರು, ಜಿಲ್ಲಾ ಮಹಿಳಾ ಸಮಿತಿಯ ಸಂಘಟನಾ ಸಂಚಾಲಕಿ ಗೀತಾ ಸುರೇಶ್ ಕುಮಾರ್, ಅಂಬೇಡ್ಕರ್ ಸಂಘದ ಸದಸ್ಯ ದಯಾನಂದ ಪಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚೈತ್ರ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಬಾರ್ಕೂರ್ ವಂದನಾರ್ಪಣೆ ನೆರವೇರಿಸಿದರು.






