ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಅನೇಕ ಪ್ರತಿಷ್ಠಿತ ಹಣಕಾಸು ಸಂಸ್ಥೆಗಳ ತವರೂರಾಗಿದ್ದು, ಇಲ್ಲಿನ ಸಹಕಾರ ಕ್ಷೇತ್ರವು ಜನರ ಆರ್ಥಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಸಹಕಾರ ಕ್ಷೇತ್ರದಲ್ಲಿ ದೊರೆಯುವ ಪ್ರಾಮಾಣಿಕ ಸೇವೆ, ಗ್ರಾಹಕರ ಮೇಲಿನ ಕಾಳಜಿ ಹಾಗೂ ಹಣಕ್ಕೆ ಸಿಗುವ ಭದ್ರತೆ ಮಹತ್ವದ್ದಾಗಿದ್ದು, ಈ ರೀತಿಯ ವಿಶ್ವಾಸಾರ್ಹ ಸೇವೆ ಸಹಕಾರ ರಂಗದಲ್ಲಿ ಸಾಧ್ಯವಾಗುತ್ತದೆ ಎಂದು ಕೃಷ್ಣಾಪುರ ಶ್ರೀಪಾದರು ಹೇಳಿದರು.
ಅವರು ಉಡುಪಿಯ ಜೋಡುಕಟ್ಟೆಯ ಆಶ್ರಯ ಟವರ್ಸ್‌ನ ಮೊದಲ ಮಹಡಿಯಲ್ಲಿ ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ ಕಚೇರಿಯನ್ನು ನೂತನ ಹವಾನಿಯಂತ್ರಿತ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸುವ ಕಾರ್ಯಕ್ರಮ ಹಾಗೂ ಸೊಸೈಟಿಯ ರಜತ ಸಂಭ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಹಕಾರ ಕ್ಷೇತ್ರವು ಕೇವಲ ಹಣಕಾಸಿನ ವ್ಯವಹಾರಗಳಿಗೆ ಸೀಮಿತವಾಗಿರದೆ, ಜನರಲ್ಲಿ ಉಳಿತಾಯದ ಮನೋಭಾವ ಬೆಳೆಸುವ, ಅಗತ್ಯದ ಸಂದರ್ಭದಲ್ಲಿ ಆರ್ಥಿಕ ನೆರವು ಒದಗಿಸುವ ಹಾಗೂ ಸಮಾಜದ ವಿವಿಧ ವರ್ಗಗಳ ಅಭಿವೃದ್ಧಿಗೆ ಪೂರಕವಾಗುವ ಕ್ಷೇತ್ರವಾಗಿದೆ. ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಂಡು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಹಣಕಾಸು ಸಂಸ್ಥೆಗಳು ಸಮಾಜದಲ್ಲಿ ಉತ್ತಮ ಸ್ಥಾನವನ್ನು ಗಳಿಸುತ್ತವೆ. ಈ ನಿಟ್ಟಿನಲ್ಲಿ ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಅವರು ಹಾರೈಸಿದರು.

ಗ್ರಾಹಕರ ತೃಪ್ತಿ, ಗುಣಮಟ್ಟದ ಸೇವೆಯೇ ಗುರಿ: ಕೆ. ರಘುಪತಿ ಭಟ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೊಸೈಟಿಯ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಗ್ರಾಹಕರ ತೃಪ್ತಿ ಮತ್ತು ಗುಣಮಟ್ಟದ ಸೇವೆಯೇ ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದರು.
“ಕಳೆದ 25 ವರ್ಷಗಳಿಂದ ಗ್ರಾಹಕರು, ಸದಸ್ಯರು ಹಾಗೂ ಹಿತೈಷಿಗಳ ಬೆಂಬಲದಿಂದ ನಮ್ಮ ಸೊಸೈಟಿ ಹಂತ ಹಂತವಾಗಿ ಬೆಳವಣಿಗೆ ಕಂಡಿದೆ. ಇದೀಗ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ಮೂಲಕ ಸಂಸ್ಥೆಯ ಅಭಿವೃದ್ಧಿಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ತಲುಪಿದ್ದೇವೆ. ನೂತನ ಕಚೇರಿಯ ಮೂಲಕ ಗ್ರಾಹಕರಿಗೆ ಇನ್ನಷ್ಟು ಆಧುನಿಕ, ಸುಗಮ ಹಾಗೂ ವೇಗದ ಸೇವೆಗಳನ್ನು ಒದಗಿಸಲು ಸಜ್ಜಾಗಿದ್ದೇವೆ,” ಎಂದು ಹೇಳಿದರು.
ಸಂಸ್ಥೆಯ ಬೆಳವಣಿಗೆಯಲ್ಲಿ ಗ್ರಾಹಕರ ವಿಶ್ವಾಸ ಮತ್ತು ಸಹಕಾರ ಪ್ರಮುಖ ಪಾತ್ರ ವಹಿಸಿದೆ. ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸುವುದು, ಉತ್ತಮ ಸೇವೆ ಒದಗಿಸುವುದು ಹಾಗೂ ಸಂಸ್ಥೆಯ ಮೇಲಿನ ನಂಬಿಕೆಯನ್ನು ಮತ್ತಷ್ಟು ಬಲಪಡಿಸುವುದು ಮುಂದಿನ ದಿನಗಳಲ್ಲಿಯೂ ಆದ್ಯತೆಯಾಗಿರಲಿದೆ ಎಂದು ಅವರು ತಿಳಿಸಿದರು.

ಹಿರಿಯ ಸಹಕಾರಿಗಳಿಗೆ ಸನ್ಮಾನ, ಸಮಾಜಮುಖಿ ನೆರವು
ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿ ಟಿ. ಶಂಭು ಶೆಟ್ಟಿ ಅವರು ದೀಪ ಪ್ರಜ್ವಲನೆ ನೆರವೇರಿಸಿದರು. ಸೊಸೈಟಿಯ ಸಲಹೆಗಾರ ಕೆ. ಕಮಲಾಕ್ಷ ಹಾಗೂ ಹಿರಿಯ ಸದಸ್ಯ ರಾಮಚಂದ್ರ ಸನಿಲ್ ಅವರನ್ನು ಕೆ. ರಘುಪತಿ ಭಟ್ ಸನ್ಮಾನಿಸಿದರು.
ಸಂಸ್ಥೆಯ ರಜತ ಸಂಭ್ರಮದ ಅಂಗವಾಗಿ ಸಮಾಜಮುಖಿ ಕಾರ್ಯಗಳಿಗೂ ಆದ್ಯತೆ ನೀಡಲಾಯಿತು. ಕೆಳಾರ್ಕಳಬೆಟ್ಟು ಹಿರಿಯ ಪ್ರಾಥಮಿಕ ಶಾಲೆಗೆ ಎರಡು ಕವಾಟುಗಳನ್ನು ನೀಡಲಾಯಿತು. ಪ್ರಜ್ಞಾ ಮತ್ತು ಪಾರ್ವತಿ ಅವರಿಗೆ ವೈದ್ಯಕೀಯ ನೆರವು ಒದಗಿಸಲಾಯಿತು. ಈ ಮೂಲಕ ಸಂಸ್ಥೆಯು ತನ್ನ ವಾರ್ಷಿಕ ಸಂಭ್ರಮವನ್ನು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳೊಂದಿಗೆ ಆಚರಿಸಿತು.

ಕಾರ್ಯಕ್ರಮದಲ್ಲಿ ದೇವಿಪ್ರಸಾದ್ ಶೆಟ್ಟಿ ಬೆಳಪು, ಪುರುಷೋತ್ತಮ ಶೆಟ್ಟಿ, ಕುಮಾರ್ ಜೆ., ಉದ್ಯಮಿಗಳಾದ ಸಾಧು ಸಾಲ್ಯಾನ್ ಹಾಗೂ ಹರಿಯಪ್ಪ ಕೋಟ್ಯಾನ್, ಸೊಸೈಟಿಯ ಉಪಾಧ್ಯಕ್ಷ ರಮೇಶ್ ಶೆಟ್ಟಿ ಉಪಸ್ಥಿತರಿದ್ದರು.
ಸೊಸೈಟಿಯ ನಿರ್ದೇಶಕರಾದ ಶ್ರೀಶ, ಹರೀಶ್ಚಂದ್ರ ಅಮೀನ್, ಸುಧೀರ್ ಕೊಡವೂರು, ರಮೇಶ್ ಶೆಟ್ಟಿ ಜಾರ್ಕಳ, ಸ್ನೇಹಪ್ರಭಾ, ಕಮಲಾಕ್ಷ, ರಾಧಿಕಾ ಕಾಮತ್, ಗಣೇಶ್ ಕುಮಾರ್, ಶಿವಪ್ರಸಾದ್ ಶೆಟ್ಟಿ ಹಾಗೂ ಅವಿನಾಶ್ ಬಿ.ಎಸ್. ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸೊಸೈಟಿಯ ನಿರ್ದೇಶಕ ಸುರೇಶ್ ಪ್ರಭು ಸ್ವಾಗತಿಸಿ, ಪ್ರಸ್ತಾವನೆಗೈದರು. ತೇಜಶ್ ಜೆ. ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಂಜಿತಾ ಪ್ರವೀಣ್ ವಂದಿಸಿದರು.
25 ವರ್ಷಗಳ ಸಹಕಾರ ಪಯಣವನ್ನು ಸ್ಮರಿಸುವ ರಜತ ಸಂಭ್ರಮದೊಂದಿಗೆ ನೂತನ ಸ್ವಂತ ಕಚೇರಿಗೆ ಸ್ಥಳಾಂತರಗೊಂಡಿರುವ ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಮುಂದಿನ ದಿನಗಳಲ್ಲಿ ಗ್ರಾಹಕಸ್ನೇಹಿ ಸೇವೆ ಹಾಗೂ ಸಾಮಾಜಿಕ ಹೊಣೆಗಾರಿಕೆಗೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆ ವ್ಯಕ್ತವಾಯಿತು.







