ಮುಂದಿನ 2028ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಆದರೆ ಯಾವ ಪಕ್ಷದಿಂದ ಸ್ಪರ್ಧಿಸಬೇಕು ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕೇ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ಮೂರು ಬಾರಿ ಶಾಸಕರಾಗಿದ್ದ ಕೆ. ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷ ಮತ್ತೆ ತಮ್ಮನ್ನು ಆಹ್ವಾನಿಸಿದರೆ ಖುಷಿಯಿಂದ ಮರಳುತ್ತೇನೆ. ಕಾಂಗ್ರೆಸ್ ಪಕ್ಷದಿಂದಲೂ ಆಹ್ವಾನವಿದೆ. ಆದರೆ ಕಾಂಗ್ರೆಸ್ ಸೇರ್ಪಡೆ ಬಗ್ಗೆಯೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ತಮ್ಮ ಹಿತಚಿಂತಕರು, ಅಭಿಮಾನಿಗಳು ಹಾಗೂ ಬೆಂಬಲಿಗರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.
ಸದ್ಯ ಜನರೊಂದಿಗಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ. ಈ ಹಿಂದೆ ಬಿಜೆಪಿಯಲ್ಲಿದ್ದಾಗ ಪಕ್ಷದೊಂದಿಗೆ ಸೇರಿ ಚುನಾವಣಾ ತಯಾರಿ ನಡೆಸುತ್ತಿದ್ದೆ. ಆದರೆ ಈಗ ಪಕ್ಷದಿಂದ ದೂರವಿರುವುದರಿಂದ ಮುಂದಿನ ಚುನಾವಣೆಯ ಬಗ್ಗೆ ನಿರ್ದಿಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಆದರೂ 2028ರ ಚುನಾವಣೆಯಲ್ಲಿ ಸ್ಪರ್ಧಿಸುವುದು ಮಾತ್ರ ಖಚಿತ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಜಿಲ್ಲಾಮಟ್ಟದ ನಾಯಕರ ನಿರ್ಲಕ್ಷ್ಯದ ಬಗ್ಗೆ ಬೇಸರ
ಬಿಜೆಪಿ ಮತ್ತೆ ತಮ್ಮನ್ನು ಪಕ್ಷಕ್ಕೆ ಆಹ್ವಾನಿಸಿದರೆ ಯಾರ ಅಭಿಪ್ರಾಯವನ್ನೂ ಕೇಳುವ ಅಗತ್ಯವಿಲ್ಲ. ಬಿಜೆಪಿಯಲ್ಲಿರುವವರೆಲ್ಲರೂ ನಮ್ಮವರೇ ಎಂದು ಹೇಳಿದ ರಘುಪತಿ ಭಟ್, ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ಚುನಾವಣೆಗೆ ನಿಲ್ಲಿಸಿದರೂ ಗೆಲ್ಲುವ ರೀತಿಯಲ್ಲಿ ಸಂಘಟನೆಯನ್ನು ರೂಪಿಸಿದ್ದೇನೆ ಎಂದು ತಿಳಿಸಿದರು.
ಆದರೆ ಈವರೆಗೆ ಜಿಲ್ಲಾಮಟ್ಟದ ಬಿಜೆಪಿ ನಾಯಕರು ಯಾರೂ ತಮ್ಮನ್ನು ಕರೆದು ಮಾತನಾಡಿಸಿಲ್ಲ ಎಂಬುದು ತೀವ್ರ ನೋವುಂಟುಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ತೊರೆದು ಹೋದ ನಾಯಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರದಲ್ಲಿ ರಾಜ್ಯಮಟ್ಟದ ನಾಯಕರು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪಕ್ಷದಿಂದ ಯಾವಾಗ ಆಹ್ವಾನ ಬಂದರೂ ಮರಳಿ ಸೇರ್ಪಡೆಯಾಗಲು ಸಿದ್ಧನಿದ್ದೇನೆ ಎಂದು ಅವರು ಹೇಳಿದರು.

ಅಭಿಮಾನಿಗಳ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ
ಚುನಾವಣೆಯಲ್ಲಿ ಸ್ಪರ್ಧಿಸುವ ಸಂಬಂಧ ಅಂತಿಮ ನಿರ್ಧಾರ ಕೈಗೊಂಡ ಬಳಿಕ ಮೊದಲು ಮಾಧ್ಯಮಗಳಿಗೆ ತಿಳಿಸುತ್ತೇನೆ. ಅದಕ್ಕೂ ಮೊದಲು ತಮ್ಮ ಅಭಿಮಾನಿಗಳು ಹಾಗೂ ತಮ್ಮೊಂದಿಗೆ ಕೆಲಸ ಮಾಡಿದವರ ಅಭಿಪ್ರಾಯಗಳನ್ನು ಸಂಗ್ರಹಿಸುವುದಾಗಿ ತಿಳಿಸಿದರು.
ಸದ್ಯ ಅಭಿಮಾನಿಗಳ ಅಭಿಪ್ರಾಯ ಸಂಗ್ರಹಿಸುವ ಪ್ರಕ್ರಿಯೆ ಆರಂಭಿಸಿಲ್ಲ. ಒಂದು ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದರೆ ಅಭಿಮಾನಿಗಳು ಮತ್ತು ಬೆಂಬಲಿಗರ ಅಭಿಪ್ರಾಯ, ಚರ್ಚೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದರು.
ಪ್ರಸ್ತುತ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ. ಮುಂದಿನ ಚುನಾವಣೆಯ ರಾಜಕೀಯ ನಡೆ ಕುರಿತು ಸೂಕ್ತ ಸಮಯದಲ್ಲಿ ನಿರ್ಧಾರ ಪ್ರಕಟಿಸುವುದಾಗಿ ಮಾಜಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದರು.







