ಪಶ್ಚಿಮ ವಲಯದ 8ನೇ ಪೊಲೀಸ್ ಕರ್ತವ್ಯ ಕೂಟದ ಸಮಾರೋಪ ಸಮಾರಂಭವು ಸೆ.1ರಂದು ಮಣಿಪಾಲ ಮಾಹೆಯ ಡಾ. ಟಿ.ಎಂ.ಎ. ಪೈ ಸಭಾಂಗಣದಲ್ಲಿ ನಡೆಯಿತು. ಪಶ್ಚಿಮ ವಲಯದ ಪೊಲೀಸ್ ಉಪಮಹಾನಿರೀಕ್ಷಕ ಚೇತನ್ ಆರ್., ಐಪಿಎಸ್. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ಹಾಗೂ ಪದಕಗಳನ್ನು ವಿತರಿಸಲಾಯಿತು.
ಪೊಲೀಸ್ ಕರ್ತವ್ಯ ಕೂಟವು ಆ.31ರಂದು ಆರಂಭಗೊಂಡಿದ್ದು, ವೈಜ್ಞಾನಿಕ ತನಿಖಾ ಸಹಾಯ, ಗಣಕಯಂತ್ರ ನೈಪುಣ್ಯತೆ, ಛಾಯಾಗ್ರಹಣ, ವೀಡಿಯೋಗ್ರಫಿ, ವಿದ್ವಂಸಕ ಕೃತ್ಯ ತಪಾಸಣೆ ಹಾಗೂ ಪೊಲೀಸ್ ಶ್ವಾನ ದಳ ಸೇರಿದಂತೆ ಒಟ್ಟು 20 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಮಂಗಳೂರು ನಗರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ನುರಿತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆ ಅತೀ ಹೆಚ್ಚು ಪದಕಗಳನ್ನು ಪಡೆದು ಸರ್ವಾಂಗೀಣ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಅಲ್ಲದೆ, ಉಡುಪಿ ಜಿಲ್ಲೆಯ ಪೊಲೀಸ್ ಶ್ವಾನ ದಳದ ‘ಸ್ನೈಪರ್’ ಅತ್ಯುತ್ತಮ ಶ್ವಾನ ಪ್ರಶಸ್ತಿಗೆ ಭಾಜನವಾಯಿತು. ಶ್ವಾನ ‘ಸ್ನೈಪರ್’ನ ಹ್ಯಾಂಡ್ಲರ್ ಹರೀಶ್ ಶೆಟ್ಟಿ ಅವರು ಪ್ರಶಸ್ತಿ ಸ್ವೀಕರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪೊಲೀಸ್ ಉಪಮಹಾನಿರೀಕ್ಷಕ ಚೇತನ್ ಆರ್. ಅವರು ವಿಜೇತರಿಗೆ ಅಭಿನಂದನೆ ಸಲ್ಲಿಸಿ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಮತ್ತಷ್ಟು ಪದಕಗಳನ್ನು ಗಳಿಸುವಂತೆ ಶುಭ ಹಾರೈಸಿದರು.
ಇಂದಿನ ಬದಲಾಗುತ್ತಿರುವ ಸಮಾಜದಲ್ಲಿ ಪೊಲೀಸರು ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಂಡು ತನಿಖೆ ನಡೆಸುವ ಮೂಲಕ ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಮಾಣವನ್ನು ಹೆಚ್ಚಿಸಬೇಕು. ತನಿಖೆಯ ಗುಣಮಟ್ಟವನ್ನು ಮತ್ತಷ್ಟು ಉತ್ತಮಪಡಿಸಿ ನೊಂದವರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಪೊಲೀಸರು ಶ್ರಮಿಸಬೇಕು ಎಂದು ಕರೆ ನೀಡಿದರು.
ವಿಶೇಷ ಆಹ್ವಾನಿತರಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಮಾಹೆಯ ಪ್ರೋ-ಚಾನ್ಸಲರ್ ಡಾ. ಎಚ್.ಎಸ್. ಬಲ್ಲಾಳ್, ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿ ಶಿವಪ್ರಸಾದ್ ಆಳ್ವ ಕೆ., ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದ ಉಪನಿರ್ದೇಶಕಿ ಸುಜಾತ ಕೆ.ಎಂ., ಮಾಹೆಯ ಡಾ. ಅನಿಲ್ ಭಟ್, ಡಾ. ವಿನೋದ್ ಸಿ. ನಾಯಕ್ ಸೇರಿದಂತೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಳೆದ ವರ್ಷ ರಾಷ್ಟ್ರಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಪದಕ ಗಳಿಸಿದ್ದ ಉಡುಪಿ ಡಿ.ಎ.ಆರ್.ನ ಪೊಲೀಸ್ ಸಿಬ್ಬಂದಿ ಲೋಕೇಶ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, ಪಶ್ಚಿಮ ವಲಯದ ಪೊಲೀಸ್ ಕರ್ತವ್ಯ ಕೂಟದ ನೋಡಲ್ ಅಧಿಕಾರಿಯಾಗಿ ಕಾರ್ಯಕ್ರಮದ ಅಚ್ಚುಕಟ್ಟು ನಿರ್ವಹಣೆಗೆ ಶ್ರಮಿಸಿದ ಗೌರೀಶ್ ಎ.ಸಿ. ಅವರನ್ನು ಜಿಲ್ಲಾ ಪೊಲೀಸ್ ವತಿಯಿಂದ ಸನ್ಮಾನಿಸಲಾಯಿತು.
ಪೊಲೀಸ್ ನಿರೀಕ್ಷಕ ಸೋಮಶಂಕರ್ ಎನ್. ಸ್ವಾಗತಿಸಿದರು. ಪೊಲೀಸ್ ಸಿಬ್ಬಂದಿ ಶಿವಾನಂದ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂದನಾರ್ಪಣೆ ಸಲ್ಲಿಸಿದರು.






