ಉಡುಪಿ ಜಿಲ್ಲೆಯಾದ್ಯಂತ ಸುರಿದ ಮಳೆಯ ಪರಿಣಾಮ ಕಾಪು ಮತ್ತು ಕುಂದಾಪುರ ತಾಲೂಕುಗಳಲ್ಲಿ ತಲಾ ಒಂದು ಮನೆಗೆ ಭಾಗಶಃ ಹಾನಿಯಾಗಿದ್ದು, ಯಾವುದೇ ಮಾನವ ಜೀವಹಾನಿ, ಜಾನುವಾರು ಸಾವು ಅಥವಾ ಪ್ರವಾಹದಂತಹ ಗಂಭೀರ ಘಟನೆಗಳು ವರದಿಯಾಗಿಲ್ಲ.
ಜಿಲ್ಲಾಡಳಿತದ ಪ್ರಾಥಮಿಕ ವರದಿ ಪ್ರಕಾರ, ಕಾಪು ತಾಲೂಕಿನ ಹೇರೂರು ಗ್ರಾಮದ ಶಾಂತ ಪ್ರಭು ಅವರ ಮನೆಯ ಮೇಲೆ ಮರ ಬಿದ್ದು ಸುಮಾರು ₹60 ಸಾವಿರ ಮೌಲ್ಯದ ಹಾನಿಯಾಗಿದೆ. ಕುಂದಾಪುರ ತಾಲೂಕಿನ ಹಂಗಳೂರು ಗ್ರಾಮದ ಜಗದೀಶ ಪೂಜಾರಿ ಅವರ ಮನೆಗೆ ಮಳೆಯಿಂದ ಭಾಗಶಃ ಹಾನಿಯಾಗಿದ್ದು, ಸುಮಾರು ₹50 ಸಾವಿರ ನಷ್ಟ ಸಂಭವಿಸಿದೆ.
ಇದೇ ವೇಳೆ, ಜು.24ರಂದು ಹೆಬ್ರಿ ತಾಲೂಕಿನಲ್ಲಿ 96.0 ಮಿ.ಮೀ. ಮಳೆಯಾಗಿ ಜಿಲ್ಲೆಯಲ್ಲೇ ಗರಿಷ್ಠ ಮಳೆ ದಾಖಲಾಗಿದೆ. ಬ್ರಹ್ಮಾವರದಲ್ಲಿ 51.6 ಮಿ.ಮೀ., ಕುಂದಾಪುರದಲ್ಲಿ 47.3 ಮಿ.ಮೀ., ಕಾರ್ಕಳದಲ್ಲಿ 38.7 ಮಿ.ಮೀ., ಬೈಂದೂರಿನಲ್ಲಿ 37.6 ಮಿ.ಮೀ., ಉಡುಪಿಯಲ್ಲಿ 32.5 ಮಿ.ಮೀ. ಹಾಗೂ ಕಾಪುವಿನಲ್ಲಿ 26.5 ಮಿ.ಮೀ. ಮಳೆಯಾಗಿದೆ.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸರಾಸರಿ 48.0 ಮಿ.ಮೀ. ಮಳೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ







