2025–26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಶಂಕರನಾರಾಯಣದ ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿ ಪ್ರೀತಮ್ ಜಿ. ಪೂಜಾರಿಯನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕುಂದಾಪುರ ತಾಲೂಕು ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಬಿದ್ಕಲ್ ಕಟ್ಟೆ ನಿವಾಸಿಗಳಾದ ಗಣಪತಿ ಪೂಜಾರಿ ಹಾಗೂ ನಾಗರತ್ನ ಪೂಜಾರಿ ದಂಪತಿಯ ಪುತ್ರನಾದ ಪ್ರೀತಮ್ ಅವರ ನಿವಾಸಕ್ಕೆ ಭೇಟಿ ನೀಡಿದ ತಾಲೂಕು ಅಧ್ಯಕ್ಷ ಎಸ್. ದಸ್ತಗೀರ್ ಕಂಡ್ಲೂರು ಅವರ ನೇತೃತ್ವದ ತಂಡವು ವಿದ್ಯಾರ್ಥಿಗೆ ಶುಭಾಶಯ ಕೋರಿ ಸನ್ಮಾನ ನೆರವೇರಿಸಿತು. ಹಳ್ಳಿಯೊಬ್ಬ ಪ್ರತಿಭೆ ರಾಜ್ಯ ಮಟ್ಟದಲ್ಲಿ ಮಿಂಚಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿ ಎಂದು ಈ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಪದಾಧಿಕಾರಿಗಳು, ಪ್ರೀತಮ್ ಅವರ ಪರಿಶ್ರಮ, ಶಿಸ್ತು ಹಾಗೂ ದೃಢ ಸಂಕಲ್ಪ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ ಎಂದು ಶ್ಲಾಘಿಸಿದರು. ಮುಂದಿನ ವಿದ್ಯಾಭ್ಯಾಸದಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಸಾಧಿಸಲಿ ಎಂದು ಹಾರೈಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯದರ್ಶಿ ರಿಯಾಝ್ ಕೋಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೌಲಾನಾ ಝಮೀರ್ ಅಹ್ಮದ್ ರಶಾದಿ, ಜಿಲ್ಲಾ ಸಮಿತಿ ಸದಸ್ಯರು ಮುಜಾವರ್ ಅಬು ಮೊಹಮ್ಮದ್, ಮುನಾಫ್ ಕಂಡ್ಲೂರು, ತಾಲೂಕು ಸಮಿತಿ ಸದಸ್ಯರು ಮುನೀರ್ ಕಂಡ್ಲೂರು, ಮುಹಮ್ಮದ್ ಅಲಿ ಕೋಡಿ, ಅಬ್ದುಲ್ ಹಮೀದ್ ಬಸ್ರೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮವು ಸೌಹಾರ್ದತೆಯ ಸಂದೇಶವನ್ನು ಸಾರುವಂತಾಗಿದ್ದು, ಸಮುದಾಯಗಳ ನಡುವಿನ ಸಹಬಾಳ್ವೆಯ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸಿದ ಕ್ಷಣವಾಗಿತ್ತು.







