ಸಮುದಾಯ ಭವನಗಳು ಸಮಾಜದಲ್ಲಿ ಸೌಹಾರ್ದತೆ, ಒಗ್ಗಟ್ಟು ಮತ್ತು ಸಾಮರಸ್ಯವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಉಡುಪಿ ಧರ್ಮಪ್ರಾಂತ್ಯದ ಕುಲಪತಿ ವಂ|ಸ್ಟೀಫನ್ ಡಿಸೋಜಾ ಹೇಳಿದರು.
ಕೆಮ್ಮಣ್ಣು ಸಂತ ತೆರೆಸಾ ಚರ್ಚಿನ ಆಡಳಿತಕ್ಕೆ ಒಳಪಟ್ಟ ನವೀಕೃತ ಲಿಟಲ್ ಫ್ಲವರ್ ಸಭಾಭವನದ ಆಶೀರ್ವಚನ ನೆರವೇರಿಸಿ, ಭಾನುವಾರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭಾಭವನಗಳಲ್ಲಿ ನಡೆಯುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜನರು ಒಂದೇ ಸೂರಿನಡಿ ಸೇರಲು, ಪರಸ್ಪರ ಸಂವಹನ ನಡೆಸಲು ಹಾಗೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತವೆ. ಇದರಿಂದ ಸಮಾಜದಲ್ಲಿ ಪರಸ್ಪರ ಬಾಂಧವ್ಯ ಗಟ್ಟಿಗೊಳ್ಳುತ್ತದೆ. ನವೀಕೃತ ಸಭಾಭವನವು ಕೆಮ್ಮಣ್ಣು ಪರಿಸರದಲ್ಲಿ ಒಗ್ಗಟ್ಟು ಮತ್ತು ಸೌಹಾರ್ದತೆಯನ್ನು ಮತ್ತಷ್ಟು ಬೆಳೆಸುವ ಕೇಂದ್ರವಾಗಲಿ ಎಂದು ಅವರು ಹಾರೈಸಿದರು.
ಸಭಾಭವನದ ನವೀಕರಣಕ್ಕೆ ಆರ್ಥಿಕ ಸಹಕಾರ ನೀಡಿದವರು ಹಾಗೂ ನವೀಕರಣ ಕಾರ್ಯದಲ್ಲಿ ಸೇವೆ ಸಲ್ಲಿಸಿದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಆಲ್ ಇಂಡಿಯಾ ಕೆಥೊಲಿಕ್ ಯೂನಿಯನ್‌ನ ರಾಷ್ಟ್ರೀಯ ಗೌರವ ಪ್ರಶಸ್ತಿ ಪಡೆದ ಸಮಾಜ ಸೇವಕಿ ವೆರೋನಿಕಾ ಕರ್ನೆಲಿಯೋ ಅವರನ್ನು ಸನ್ಮಾನಿಸಲಾಯಿತು.
ಚರ್ಚಿನ ಎನ್‌ಆರ್‌ಐ ಪ್ರತಿನಿಧಿ ಆಲ್ಫ್ರೇಡ್ ಕ್ರಾಸ್ತಾ, ಸ್ಥಳೀಯ ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ಆಶಾ ಪ್ರೇಮಾ ಹಾಗೂ ಚರ್ಚಿನ ಪಾಲನಾ ಸಮಿತಿ ಉಪಾಧ್ಯಕ್ಷ ಥೋಮಸ್ ಡಿಸೋಜಾ ಉಪಸ್ಥಿತರಿದ್ದರು.
ಚರ್ಚಿನ ಪ್ರಧಾನ ಧರ್ಮಗುರು ವಂ|ಫಿಲಿಪ್ ನೆರಿ ಆರಾನ್ಹಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಲನಾ ಸಮಿತಿ ಕಾರ್ಯದರ್ಶಿ ನತಾಲಿಯಾ ಸುಜಿ ಫೆರ್ನಾಂಡಿಸ್ ಸ್ವಾಗತಿಸಿದರು. ಆಯೋಗಗಳ ಸಂಯೋಜಕಿ ರೀಟಾ ಡಿಸೋಜಾ ವಂದಿಸಿದರು. ಜೆನಿಶಾ ಜರ್ನಿಸ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಚರ್ಚಿನಲ್ಲಿ ವಂ|ಸ್ಟೀಫನ್ ಡಿಸೋಜಾ ಅವರ ನೇತೃತ್ವದಲ್ಲಿ ಕೃತಜ್ಞತಾ ಬಲಿಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಕಥೊಲಿಕ್ ಎಜುಕೇಶನ್ ಸೊಸೈಟಿ ಉಡುಪಿಯ ಕಾರ್ಯದರ್ಶಿ ವಂ|ವಿನ್ಸೆಂಟ್ ಕ್ರಾಸ್ತಾ ಹಾಗೂ ಅತಿಥಿ ಧರ್ಮಗುರುಗಳಾದ ವಂ|ಡೊಮಿನಿಕ್ ಲೋಬೊ, ವಂ|ಅಮರ್ ಲೋಬೊ ಮತ್ತು ವಂ|ಶೋನ್ ಅಂದ್ರಾದೆ ಉಪಸ್ಥಿತರಿದ್ದರು.








