ಹೊಸದಿಲ್ಲಿಯಲ್ಲಿ ನೀಟ್ ಹಗರಣದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಹಾಗೂ ಯುವಜನರ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಸಹಬಾಳ್ವೆ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಎಸ್‌ಐಓ ಹಾಗೂ ಉಡುಪಿ ಜಿಲ್ಲಾ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಸಂಜೆ ನಗರದ ಹಳೆ ಬಸ್ ನಿಲ್ದಾಣದ ಬಳಿ ಪ್ರತಿಭಟನಾ ಸಭೆ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಹಬಾಳ್ವೆ ಸಂಘಟನೆಯ ಚಿಂತಕ ಪ್ರೊ. ಫಣಿರಾಜ್, ಕೇಂದ್ರ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲದೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲಿನ ನಂಬಿಕೆಯೂ ಕಾಣುತ್ತಿಲ್ಲ ಎಂದು ಆರೋಪಿಸಿದರು. ದೇಶದ ಯುವಜನರ ಧ್ವನಿ ಸರ್ಕಾರಕ್ಕೆ ಕೇಳಿಸದ ಕಾರಣವೇ ವಿದ್ಯಾರ್ಥಿಗಳ ಮೇಲೆ ಕ್ರೂರ ಹಿಂಸೆಯನ್ನು ಮುಂದುವರಿಸಲಾಗುತ್ತಿದೆ ಎಂದು ಅವರು ಟೀಕಿಸಿದರು.
ಜಂತರ್‌ಮಂತರ್‌ನಲ್ಲಿ ಸೇರಿದ್ದ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ನಡೆಸಿದರೂ, ಜುಲೈ 21ರ ರಾತ್ರಿ ಮತ್ತೆ ಸುಮಾರು 40 ಸಾವಿರ ವಿದ್ಯಾರ್ಥಿಗಳು ಸೇರಿ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ ಎಂದು ಅವರು ಹೇಳಿದರು.

ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಯ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕರ ಮೇಲಿದೆ. ಆದ್ದರಿಂದ ದೇಶದ ಪ್ರತಿಯೊಂದು ಊರಲ್ಲೂ ಪ್ರತಿಭಟನೆ ನಡೆಸಿ ಪ್ರಜಾಪ್ರಭುತ್ವದ ಪರ ಧ್ವನಿಯೆತ್ತಬೇಕು ಎಂದು ಕರೆ ನೀಡಿದ ಅವರು, ಇದು ಯಾವುದೇ ರಾಜಕೀಯ ಸಂಘಟನೆಯ ಕರೆ ಅಲ್ಲ; ಸಂವಿಧಾನದ ಅಂತಃಸಾಕ್ಷಿಯನ್ನು ಗೌರವಿಸುವ ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು.

ಪ್ರತಿಭಟನೆಯಲ್ಲಿ ಭಾಗವಹಿಸಲು ಹೊಸದಿಲ್ಲಿಗೆ ತೆರಳಿದ್ದ ಮಣಿಪಾಲದ ವಿದ್ಯಾರ್ಥಿ ಹರ್ ಪ್ರೀತ್ ಸಿಂಗ್ ಮಾತನಾಡಿ, ಜುಲೈ 20ರಂದು ಜಂತರ್‌ಮಂತರ್‌ನಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ವಿದ್ಯಾರ್ಥಿಗಳ ಪ್ರತಿಭಟನೆಯ ಮೇಲೆ ಪೊಲೀಸರು ಅಪ್ರಚೋದಿತವಾಗಿ ನಡೆಸಿದ ದೌರ್ಜನ್ಯದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಂಜುನಾಥ್ ಗಿಳಿಯಾರು, ಹೋರಾಟಗಾರ ಸಂವರ್ತ್ ಸಾಹಿಲ್, ಸಾಲಿಡಾರಿಟಿ ಯೂಟ್ ಮೂವ್ ಮೆಂಟ್ ನಾಯಕ ನಿಹಾಲ್ ಕಿದಿಯೂರು ಮಾತನಾಡಿದರು.
ಪ್ರತಿಭಟನೆಯಲ್ಲಿ ಸಂವರ್ತ್ ಸಾಹೀಲ್, ಹುಸೇನ್ ಕೋಡಿಬೆಂಗ್ರೆ, ಸುಂದರ್ ಮಾಸ್ತರ್, ಅಯಾನ್ ಮಲ್ಪೆ, ಮುಹಮ್ಮದ್ ಮೌಲ, ಇಸ್ಮಾಯಿಲ್ ಕಟಪಾಡಿ, ಶ್ಯಾಮ್‌ರಾಜ್ ಬಿರ್ತಿ, ಮಂಜುನಾಥ ಗಿಳಿಯಾರು, ಹೈಫಾ, ಅಝೀಜ್ ಉದ್ಯಾವರ, ನಿಸಾರ್ ಉಡುಪಿ, ಮಂಜುನಾಥ್ ಬಾಳ್ಕುದ್ರು, ಹುಮೇರಾ ಕಾರ್ಕಳ, ಸುನೀಲ್ ಡಿ. ಬಂಗೇರ ಸೇರಿದಂತೆ ಹಲವರು ಭಾಗವಹಿಸಿದ್ದರು.







