ಉಳ್ಳಾಲ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಹಾಗೂ ಜನಸಾಮಾನ್ಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಏಪ್ರಿಲ್ 29ರಂದು ದೇರಳಕಟ್ಟೆ ಜಂಕ್ಷನ್‌ನಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ವತಿಯಿಂದ ಬೃಹತ್ ಮೆರವಣಿಗೆ ಹಾಗೂ ಹಕ್ಕೊತ್ತಾಯ ಸಮಾವೇಶ ಆಯೋಜಿಸಲಾಗಿದೆ.
ಸಮಾವೇಶದ ಪೂರ್ವಭಾವಿಯಾಗಿ ನಡೆದ ಪಕ್ಷದ ಕಾರ್ಯಕರ್ತರ ಹಾಗೂ ಹಿತೈಷಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ ಯಾದವ ಶೆಟ್ಟಿ, “ಉಳ್ಳಾಲ ತಾಲೂಕು ರಚನೆಯಾಗಿ 5 ವರ್ಷಗಳು ಕಳೆದರೂ ಇನ್ನೂ ಕೂಡ ಇಲ್ಲಿನ ಜನತೆ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಖಾಸಗಿ ಮೆಡಿಕಲ್ ಕಾಲೇಜ್, ಕಾರ್ಪೊರೇಟ್ ಆಸ್ಪತ್ರೆ, ವ್ರತ್ತಿಪರ ಕಾಲೇಜ್ ಗಳಿಂದ ತುಂಬಿ ತುಳುಕುತ್ತಿರುವ ಉಳ್ಳಾಲ ತಾಲೂಕು ಭಾರೀ ಅಭಿವೃದ್ಧಿಯ ನಾಗಾಲೋಟದಲ್ಲಿ ಇದ್ದಂತೆ ಭಾಸವಾದರೂ, ಇದರ ಹಿಂದೆ ಅಗಾಧವಾದ ಸಮಸ್ಯೆಗಳಿವೆ. ಜನಸಾಮಾನ್ಯರ ಬವಣೆಗಳನ್ನು ಕೇಳುವ ಗತಿ ಇಲ್ಲದಂತಾಗಿದೆ. ಇದರ ವಿರುದ್ಧ ಪ್ರಬಲ ಜನಚಳುವಳಿ ಹೋರಾಟ ಬೆಳೆದು ಬಂದರೆ ಮಾತ್ರವೇ ಉಳ್ಳಾಲ ತಾಲೂಕು ಅಭಿವೃದ್ಧಿ ಹೊಂದಲು ಸಾಧ್ಯ” ಎಂದು ಹೇಳಿದರು.

ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, “ಎಲ್ಲಾ ಇಲಾಖೆಗಳು ಒಂದೇ ಸೂರಿನಡಿ ಇರುವ ಸುಸಜ್ಜಿತವಾದ ತಾಲೂಕು ಕಚೇರಿ ಹೊಂದುವ ಭಾಗ್ಯ ಇನ್ನೂ ಉಳ್ಳಾಲಕ್ಕೆ ಒದಗಿ ಬಂದಿಲ್ಲ. ಶಿಕ್ಷಣ, ಉದ್ಯೋಗ, ಆರೋಗ್ಯ ಕ್ಷೇತ್ರಗಳು ಸಂಪೂರ್ಣ ವಾಣಿಜ್ಯೀಕರಣಗೊಂಡು ಬಡವರ ಸಂಕಷ್ಟವನ್ನು ಹೇಳತೀರದಾಗಿದೆ. ನಿವೇಶನ ರಹಿತರ ಪಟ್ಟಿ ಹಾಗೂ ನಿವೇಶನವನ್ನು ಇನ್ನೂ ಕಾದಿರಿಸಿಲ್ಲ. ಕೃಷಿಯೋಗ್ಯವಾದ ಭೂಮಿ ನವ ಭೂಮಾಲಿಕರ ಕೈಸೇರುವ ಮೂಲಕ ಭೂಮಾಫಿಯಾ ಬೆಳೆಯುತ್ತಿದೆ. ಇಂತಹ ಹಲವು ರೀತಿಯ ಸಮಸ್ಯೆಗಳನ್ನು ಮುಂದಿಟ್ಟು ಎಲ್ಲಾ ವಿಭಾಗದವರನ್ನು ಸೇರಿಸಿ ಏ.29ರಂದು ನಡೆಯಲಿರುವ ಸಮಾವೇಶದಲ್ಲಿ ಉಳ್ಳಾಲ ತಾಲೂಕಿನ ಜನತೆ ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕು” ಎಂದು ಕರೆ ನೀಡಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುಕುಮಾರ್, ಪಕ್ಷದ ಹಿರಿಯ ಮುಖಂಡ ಕೃಷ್ಣಪ್ಪ ಸಾಲ್ಯಾನ್ ಹಾಗೂ ಇತರರ ನೇತೃತ್ವದಲ್ಲಿ ಹಕ್ಕೊತ್ತಾಯ ಸಮಾವೇಶದ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ: ಮಂಗಳೂರು | ಬಂಜಾರ ಸಮುದಾಯ ಸಂಘಟನೆಯಲ್ಲಿ ಸಂತ ಸೇವಾಲಾಲ್ ಪಾತ್ರ ಅಪಾರ: ಉಳ್ಳಾಲ್
ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ರಫೀಕ್ ಹರೇಕಳ, ಶೇಖರ್ ಕುಂದರ್, ಸುಂದರ ಕುಂಪಲ, ರೋಹಿದಾಸ್, ಕಟ್ಟಡ ಕಾರ್ಮಿಕರ ಸಂಘಟನೆಯ ಅಧ್ಯಕ್ಷ ಜನಾರ್ದನ ಕುತ್ತಾರ್, ಡಿವೈಎಫ್‌ಐ ಉಳ್ಳಾಲ ತಾಲೂಕು ಅಧ್ಯಕ್ಷ ನಿತಿನ್ ಕುತ್ತಾರ್, ದಲಿತ ಹಕ್ಕುಗಳ ಸಮಿತಿಯ ವಿಶ್ವನಾಥ ಮಂಜನಾಡಿ, ದ್ವೀಪವಾಸಿಗಳ ಹೋರಾಟ ಸಮಿತಿಯ ಮುಖಂಡರಾದ ಸುನೀತಾ ಡಿಸೋಜ, ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡ ವಿನಾಯಕ ಶೆಣೈ, ಕೋಟೆಕಾರ್ ಬ್ಯಾಂಕ್ ನಿರ್ದೇಶಕ ಕೃಷ್ಣಪ್ಪ ದೇರಳಕಟ್ಟೆ, ಪ್ರಗತಿಪರ ಚಿಂತಕ ರಮೇಶ್ ಉಳ್ಳಾಲ, ಮುನ್ನೂರು ಗ್ರಾಮ ಪಂಚಾಯತ್ ಸದಸ್ಯ ಗಣೇಶ್ ಅಡ್ಯಂತಾಯ, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ರೈತರು ಮತ್ತಿತರರು ಉಪಸ್ಥಿತರಿದ್ದರು.