ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಿಂದ ಕಾಣೆಯಾಗಿದ್ದ ಮಹಿಳೆಯ ಮೃತದೇಹವು ಉತ್ತರ ಕನ್ನಡ ಜಿಲ್ಲೆಯ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೇತುವೆಯ ಕೆಳಗೆ ಪತ್ತೆಯಾಗಿದ್ದು, ಕೊಲೆಯ ಶಂಕೆ ವ್ಯಕ್ತವಾಗಿದೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಮೃತ ಮಹಿಳೆಯನ್ನು ನಂದಗಡ ನಿವಾಸಿ ಅಶ್ವಿನಿ ಬಾಬುರಾವ್ ಪಾಟೀಲ ಎಂದು ಗುರುತಿಸಲಾಗಿದೆ. ಮೃತ ಮಹಿಳೆಯ ದೇಹದ ಮೇಲೆ ಕಲ್ಲು ಇರಿಸಿ ನೀರಿನಲ್ಲಿ ಮುಳುಗಿಸಲು ಪ್ರಯತ್ನಿಸಿರುವ ಕುರುಹುಗಳು ಪತ್ತೆಯಾಗಿವೆ. ಮೃತೆಯ ಪುತ್ರ ಆಶೀರ್ವಾದ ಪಾಟೀಲ ಈ ಕುರಿತು ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಶ್ವಿನಿ ಪಾಟೀಲ ಅವರು ಅಕ್ಟೋಬರ್ 2ರಂದು ಕಕ್ಕೇರಿ ಗ್ರಾಮದ ಬಿಷ್ಠಾದೇವಿ ಜಾತ್ರೆಗೆ ತೆರಳಿದ್ದರು. ಆದರೆ ಅವರು ಮನೆಗೆ ಮರಳದ ಕಾರಣ, ಅ. 4 ರಂದು ನಂದಗಡ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಯಲ್ಲಾಪುರ | ಪೋಲಿಸ್ ಠಾಣೆಯಲ್ಲಿ ಜಪ್ತಿ ಮಾಡಿದ ವಾಹನಗಳ ಹರಾಜು
“ಯಾರೋ ನನ್ನ ತಾಯಿಯನ್ನು ಯಾವುದೋ ಕಾರಣಕ್ಕೆ ಕೊಲೆ ಮಾಡಿ ಶವವನ್ನು ಇಲ್ಲಿ ಎಸೆದಿದ್ದಾರೆ” ಎಂದು ಮೃತಳ ಮಗ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ರಾಮನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.