ಆಂಗ್ಲಭಾಷೆಯಿಂದ ಕನ್ನಡಕ್ಕೆ ಕರಾರುವಕ್ಕಾಗಿ ತರ್ಜುಮೆ ಮಾಡುವ “ಕನ್ನಡ ಕಸ್ತೂರಿ” ತಂತ್ರಾಂಶವನ್ನು ಶೀಘ್ರದಲ್ಲಿಯೇ ಸಾರ್ವಜನಿಕ ಉಪಯೋಗಕ್ಕೆ ಬಿಡುಗಡೆಗೊಳಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಗೂಗಲ್ ಮೂಲಕ ಆಂಗ್ಲ ಭಾಷೆಯಿಂದ ಕನ್ನಡಕ್ಕೆ ತರ್ಜುಮೆ ಮಾಡುವ ಸಂದರ್ಭದಲ್ಲಿ ಅನೇಕ ತಪ್ಪುಗಳಾಗುತ್ತಿದ್ದು, ಇದನ್ನು ಸರಿಪಡಿಸಲು ಈಗಾಗಲೇ ಕನ್ನಡ ಕಸ್ತೂರಿ ತಂತ್ರಾಂಶವನ್ನು ಸಿದ್ದಪಡಿಸಿದ್ದು ಇದು ಅತ್ಯಂತ ಕರಾರುವಕ್ಕಾಗಿ ತರ್ಜುಮೆ ಮಾಡಲಿದೆ. ಮೊದಲ ಹಂತದಲ್ಲಿ ಇದನ್ನು ವಿಧಾನಸೌಧ ಅಧಿಕಾರಿಗಳ ಬಳಕೆಗೆ ನೀಡಿ ನಂತರ ಸಾರ್ವಜನಿಕರ ಬಳಕೆಗೆ ಬಿಡುಗಡೆ ಮಾಡಲಾಗುವುದು. ಕನ್ನಡದಲ್ಲಿ ಪ್ರಸ್ತುತ 20 ಅಕ್ಷರ ವಿನ್ಯಾಸಗಳು ಮಾತ್ರ ಇದ್ದು, ಹೊಸದಾಗಿ 200 ವಿನ್ಯಾಸಗಳನ್ನು ಸಿದ್ದಪಡಿಸಲಾಗುತ್ತಿದ್ದು ನವೆಂಬರ್ ಒಳಗೆ ಈ ಕಾರ್ಯ ಪೂರ್ಣಗೊಳ್ಳಲಿದೆ” ಎಂದರು.
“ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡದ ಕುರಿತು ಪ್ರಸಿದ್ದ 500 ಘೋಷವಾಕ್ಯಗಳನ್ನು ಸಿದ್ದಪಡಿಸಿದ್ದು, ನವೆಂಬರ್ 1 ರೊಳಗೆ ಇವುಗಳಲ್ಲಿ 92ನ್ನು ವಿಧಾನಸೌಧದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗುವುದು ಮತ್ತು ಎಲ್ಲಾ 500 ಘೋಷವಾಕ್ಯಗಳನ್ನು ಎಲ್ಲಾ ಜಿಲ್ಲೆಗಳಿಗೆ ಕಳುಹಿಸಿ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಅಳವಡಿಸಲು ಸೂಚನೆ ನೀಡಲಾಗುವುದು. ರಾಜ್ಯದಲ್ಲಿ ಸುಮಾರು 230 ಸಣ್ಣ ಭಾಷೆಗಳು ಇದ್ದು ಇವುಗಗಳನ್ನು ಸಬಲೀಕರಣಗೊಳಿಸಲು ಸಮಿತಿ ರಚಿಸಲಾಗುವುದು. ರಾಜ್ಯದಲ್ಲಿರುವ 5000ಕ್ಕೂ ಅಧಿಕ ಐತಿಹಾಸಿಕ ಸ್ಥಳಗಳಲ್ಲಿ ಆ ಸ್ಥಳಗಳ ಪ್ರಾಮುಖ್ಯತೆ ಕುರಿತು ಕನ್ನಡದಲ್ಲಿ ಫಲಕ ಅಳವಡಿಸುವ ಕುರಿತಂತೆ ಕೇಂದ್ರ ಸಂಸ್ಕೃತಿ ಸಚಿವರು ಮತ್ತು ಪ್ರಾಚ್ಯ ವಸ್ತು ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ” ಎಂದರು.
ಇದನ್ನೂ ಓದಿ: ಉತ್ತರ ಕನ್ನಡ | ಅಪಾಯಕಾರಿ ಮರಗಳ ತೆರವಿಗೆ ಶಾಸಕ ಸತೀಶ್ ಸೈಲ್ ಸೂಚನೆ
“ರಾಜ್ಯದಲ್ಲಿ ಶತಮಾನ ಪೂರೈಸಿದ 3000 ಶಾಲೆಗಳಿದ್ದು, ಈ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳ ಮತ್ತು ಶಾಲೆಯ ಪ್ರಗತಿ ಬಗ್ಗೆ ವರದಿ ಸಿದ್ದಪಡಿಸಲಾಗುತ್ತಿದೆ ಹಾಗೂ ರಾಜ್ಯದಲ್ಲಿ 17 ಸಾವಿರ ಶಾಲೆಗಳಿಗೆ ಖಾತೆ ಇಲ್ಲವಾಗಿದ್ದು, ಈ ಶಾಲೆಗಳ ಹೆಸರಿಗೆ ಶಿಕ್ಷಣ ಇಲಾಖೆ ಖಾತೆ ಮಾಡಿಸಿಕೊಳ್ಳಬೇಕು. ರಾಜ್ಯದಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 2 ಲಕ್ಷಕ್ಕೂ ಅಧಿಕ ಮಕ್ಕಳು ಕನ್ನಡ ಭಾಷೆಯಲ್ಲಿ ಅನುತ್ತೀರ್ಣರಾಗಿದ್ದು, ಮಕ್ಕಳ ಅನುತ್ತೀರ್ಣದ ಕಾರಣದ ಬಗ್ಗೆ ತಿಳಿಯಲು ಪ್ರತ್ಯೇಕ ಸಮಿತಿ ರಚಿಸಿ, 3 ತಿಂಗಳಲ್ಲಿ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಕಾರವಾರ ಜಿಲ್ಲೆಯು ಗೋವಾ ಗಡಿಗೆ ಹೊಂದಿಕೊಂಡಿರುವುದರಿಂದ ಈ ವರ್ಷದ ಕೊನೆಯಲ್ಲಿ ಜಿಲ್ಲೆಯಲ್ಲಿ ಗಡಿ ಉತ್ಸವ ಆಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ 60 ವರ್ಷಗಳ ಹಿಂದೆ ಈ ಭಾಗದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು, ಮುಂದಿನ ಬಾರಿಯ ಸಮ್ಮೇಳನವನ್ನು ಇಲ್ಲಿ ಆಯೋಜಿಸುವಂತೆ ಮುಖ್ಯಮಂತ್ರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಗೆ ಒತ್ತಾಯ ಮಾಡಲಾಗುವುದು” ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ಲ, ಸದಸ್ಯ ಯಾಕೂಬ್ ಖಾದರ್ ಗುಲ್ವಾಡಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎನ್ ವಾಸರೆ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಫಣಿ ಕುಮಾರ್ ಇದ್ದರು.