ಈ ವರ್ಷ ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆ ಸುರಿದರೂ, ಸಾರ್ವಜನಿಕ ಆಸ್ತಿಪಾಸ್ತಿಯ ಹಾನಿ ಹಿಂದಿನ ವರ್ಷಗಳಿಗಿಂತ ತೀರಾ ಕಡಿಮೆಯಾಗಿದೆ ಎಂದು ಅಂಕಿ ಅಂಶಗಳು ಹೇಳುತ್ತಿವೆ. ಭೂಕುಸಿತ ಹಾಗೂ ಭೀಕರ ಪ್ರವಾಹದ ಅಪಾಯದಿಂದ ಜಿಲ್ಲೆ ಬಹುತೇಕ ಪಾರಾದರೆ, ಹೊನ್ನಾವರ ತಾಲೂಕಿನ ಕೆಲವೆಡೆ ಮಾತ್ರ ಪ್ರವಾಹದಿಂದ ಸಣ್ಣ ಪ್ರಮಾಣದ ತೊಂದರೆ ಉಂಟಾಗಿದೆ.
ಶಾಲಾ ಕಟ್ಟಡಗಳಿಗೆ ಹಾನಿ: ಜಿಲ್ಲೆಯಲ್ಲಿ 226 ಶಾಲಾ ಕಟ್ಟಡಗಳು ಹಾನಿಗೊಳಗಾಗಿದ್ದು, ಅವುಗಳ ಮರುನಿರ್ಮಾಣಕ್ಕಾಗಿ 38 ಕೋಟಿ ರೂಪಾಯಿಗಳ ಅನುದಾನ ಅಗತ್ಯವಿದೆ ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಜೊತೆಗೆ 65 ಅಂಗನವಾಡಿ ಕಟ್ಟಡಗಳು ಸಹ ಹಾನಿಗೊಳಗಿವೆ.
ಜೂನ್‌ನಿಂದ ಆಗಸ್ಟ್ ವರೆಗೆ 850 ಕಿ.ಮೀ ಉದ್ದದ ವಿವಿಧ ರಸ್ತೆಗಳು ಹಾನಿಗೊಳಗಾಗಿವೆ. ರಾಜ್ಯ ಹೆದ್ದಾರಿ – 175.43 ಕಿ.ಮೀ, ಜಿಲ್ಲೆಯ ಒಳರಸ್ತೆಗಳು – 412.43 ಕಿ.ಮೀ, ಗ್ರಾಮೀಣ ರಸ್ತೆ – 320.88 ಕಿ.ಮೀ… ಇವುಗಳಲ್ಲಿ ಬಹುತೇಕ ಹಾನಿಗೊಂಡಿದ್ದು, ಮರುನಿರ್ಮಾಣಕ್ಕೆ ಕೋಟ್ಯಂತರ ಹಣ ಅಗತ್ಯವಾಗಿದೆ. ಜೊತೆಗೆ 44 ಸೇತುವೆ ಮತ್ತು ಕಲ್ಲರ್ಟ್‌ಗಳು ಸಹ ಹಾನಿಗೊಳಗಿವೆ.
ಕೃಷಿಗೆ ಕ್ಷೇತ್ರಕ್ಕೆ ತೀವ್ರ ಹಾನಿ: ಅತಿಯಾದ ಮಳೆಯಿಂದಾಗಿ ಗೋವಿನ ಜೋಳ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಂಡಿದೆ. ಭತ್ತದ ಬೆಳೆಗೆ ವ್ಯಾಪಕ ಹಾನಿ ಆಗದಿದ್ದರೂ, ಅನೇಕ ಗದ್ದೆಗಳಲ್ಲಿ ನೀರು ನಿಂತು ನಷ್ಟ ಉಂಟಾಗಿದೆ. ಕೃಷಿ ಇಲಾಖೆಯ ಪ್ರಾಥಮಿಕ ವರದಿ ಪ್ರಕಾರ 251.6 ಹೆಕ್ಟೇರ್ ಬೆಳೆ ಹಾನಿಗೊಳಗಾಗಿದೆ.
ಹಿಂದಿನ ವರ್ಷಗಳ ಹೋಲಿಸಿದರೆ, 2021ರಲ್ಲಿ – 600 ಕೋಟಿ, 2024ರಲ್ಲಿ – 200 ಕೋಟಿ, 2025ರಲ್ಲಿ (ಇಲ್ಲಿಯವರೆಗೆ) – 27.66 ಕೋಟಿ ರೂ ಮೌಲ್ಯದ ಬೆಳೆಗಳು ಹಾನಿಗೊಳಗಾಗಿ ರೈತರು ನಷ್ಟ ಅನುಭವಿಸುವಂತಾಗಿದೆ.
ತೀವ್ರ ಹಾನಿಗೊಳಗಾದ ನೂರಾರು ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿ-ಪಾಸ್ತಿ: ಜಿಲ್ಲೆಯಾದ್ಯಂತ ಒಟ್ಟು 226 ಶಾಲಾ ಕಟ್ಟಡಗಳು ಭಾರೀ ಮಳೆಯಿಂದ ಹಾನಿಯಾಗೊಳಗಾಗಿದ್ದು, ಅವುಗಳ ದುರಸ್ತಿ ಹಾಗೂ ಮರು ನಿರ್ಮಾಣಕ್ಕೆ ಒಟ್ಟು 5.22 ಕೋಟಿ ಅನುದಾನ ಅಗತ್ಯವಿದೆ. 65 ಅಂಗನವಾಡಿ ಕಟ್ಟಡಗಳಿಗೆ ಭಾಗಶಃ, ಅಲ್ಪ ಪ್ರಮಾಣದ ಹಾನಿಯಾಗಿದ್ದು, ಅದಕ್ಕಾಗಿ ಸುಮಾರು 1.32 ಕೋಟಿ ಅನುದಾನ ಬೇಕಾಗಿದೆ. ಇನ್ನು 175.43 ಕಿ.ಮೀ ರಾಜ್ಯ ಹೆದ್ದಾರಿ, 412.43 ಕಿ.ಮೀ ಜಿಲ್ಲಾ ರಸ್ತೆ, 320.88 ಕಿ.ಮೀ ಗ್ರಾಮೀಣ ರಸ್ತೆ ತೀವ್ರ ಹಾನಿಗೊಳಗಾಗಿವೆ. ರಸ್ತೆ ದುರಸ್ತಿ ಹಾಗೂ ಮರುನಿರ್ಮಾಣಕ್ಕೆ ಒಟ್ಟು 13.42 ಕೋಟಿ ಅನುದಾನ ಬೇಕಾಗಿದೆ. 44 ಸೇತುವೆ/ಕಲ್ಲರ್ಟ್ಗೆ ಹಾನಿಯಾಗಿದ್ದು, 2.52 ಕೋಟಿ, 3,965 ಹೆಸ್ಕಾಂ ಕಂಬಗಳು ಮುರಿದುಬಿದ್ದಿದ್ದು ಅದಕ್ಕಾಗಿ 2.15 ಕೋಟಿ ಹಾಗೂ 141 ಪರಿವರ್ತಕಗಳ ದುರಸ್ತಿಗೆ ಅನುದಾನದ ಅಗತ್ಯವಿದೆ ಎಂದು ವರದಿ ಹೇಳುತ್ತಿದೆ.
ಇದನ್ನೂ ಓದಿ: ಉತ್ತರ ಕನ್ನಡ | ಭಾರತ-ಪಾಕ್ ಪಂದ್ಯದ ವೇಳೆ ‘ಶರಾವತಿ ಉಳಿಸಿ’ ಪೋಸ್ಟರ್: ಹೋರಾಟಕ್ಕೆ ಮತ್ತಷ್ಟು ಬಲ
ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, “ಈಗಾಗಲೇ ಜಿಲ್ಲಾಡಳಿತವು ಮಳೆಯಿಂದ ಹಾನಿಗೊಂಡ ಮನೆಗಳಿಗೆ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ವಿತರಿಸಿದೆ. ಸರ್ಕಾರಿ ಕಟ್ಟಡಗಳು ಹಾಗೂ ಮೂಲಸೌಕರ್ಯಗಳ ಹಾನಿಯ ಸಂಪೂರ್ಣ ವರದಿ ಸರ್ಕಾರಕ್ಕೆ ಕಳುಹಿಸಲಾಗುವುದು. ಜಿಲ್ಲೆಯಲ್ಲಿ ಹಾನಿಗೊಳಗಾಗಿರುವ ಎಲ್ಲಾ ಮೂಲಸೌಕರ್ಯಗಳ ದುರಸ್ತಿ ಹಾಗೂ ಮರುನಿರ್ಮಾಣಕ್ಕೆ ಅನುದಾನ ಪಡೆದು ಕೂಡಲೇ ಕ್ರಮಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

ಹಿಂದಿನ ವರ್ಷಗಳಿಗಿಂತ ಈ ಬಾರಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕೊಂಚ ಮಟ್ಟಿಗೆ ಹಾನಿ ಪ್ರಮಾಣ ಕಡಿಮೆಯಾಗಿದೆ ಎನ್ನುತ್ತಿವೆ ವರದಿಗಳು. ಆದರೂ ನೂರಾರು ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿ, ಕೃಷಿ ಕ್ಷೇತ್ರ ತೀವ್ರ ನಷ್ಟಕ್ಕೆ ಒಳಗಾಗಿದೆ. ಅವುಗಳ ಮರುನಿರ್ಮಾಣಕ್ಕೆ ತುರ್ತು ಅನುದಾನ ಅಗತ್ಯವಿದ್ದು, ರೈತರ ಬೆಳೆ ನಷ್ಟಕ್ಕೆ ಪರಿಹಾರ ಒದಗಿಸುವುದು ಸರ್ಕಾರದ ಮುಂದಿರುವ ಮುಖ್ಯ ಸವಾಲಾಗಿದೆ.
ಒಟ್ಟಾರೆಯಾಗಿ, ಜಿಲ್ಲೆ ಭೂಕುಸಿತ ಮತ್ತು ಭೀಕರ ಪ್ರವಾಹದ ಆತಂಕದಿಂದ ಪಾರಾದರೂ, ಮುಂಗಾರು ಮಳೆ ತನ್ನ ಪ್ರಭಾವವನ್ನು ತುಸು ಹೆಚ್ಚಾಗೇ ತೋರಿಸಿದೆ. ಈ ಬಾರಿ ಹಾನಿ ಕಡಿಮೆಯಾಗಿದೆಯೆಂದು ಸುಮ್ಮನೆ ಕೂರದೇ ಮುಂದಿನ ವರ್ಷಗಳಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅಗತ್ಯ.