ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ತೀವ್ರವಾಗುತ್ತಿರುವ ಮಾದಕ ವಸ್ತು ಬಳಕೆ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರ ಸಹಕಾರದೊಂದಿಗೆ ಇದನ್ನು ಸಂಪೂರ್ಣವಾಗಿ ನಿರ್ಮೂಲಗೊಳಿಸುವ ಸಂಕಲ್ಪ ವ್ಯಕ್ತಪಡಿಸಿದೆ. ಜಿಲ್ಲೆಯ ಶಾಲಾ–ಕಾಲೇಜುಗಳು, ರೈಲ್ವೆ ನಿಲ್ದಾಣಗಳು, ಪ್ರಮುಖ ಸಾರ್ವಜನಿಕ ಸ್ಥಳಗಳು ಮತ್ತು ಪ್ರವಾಸಿ ತಾಣಗಳಲ್ಲಿ ವಿಶೇಷ ಕ್ಯೂಆರ್ ಕೋಡ್ ಸ್ಟಿಕರ್‌ಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರು ಈ ಕ್ಯೂಆರ್ ಕೋಡ್‌ನ್ನು ಸ್ಕ್ಯಾನ್ ಮಾಡಿದ ಕೂಡಲೇ ಪೊಲೀಸ್ ಇಲಾಖೆಯ ವಾಟ್ಸಾಪ್ ಸಂಖ್ಯೆ ತೆರೆದು, ಮಾದಕ ವಸ್ತು ಸೇವನೆ, ಮಾರಾಟ ಅಥವಾ ಸಾಗಾಟ ಮಾಡುವವರ ಬಗ್ಗೆ ನೇರವಾಗಿ ಮಾಹಿತಿ ಹಂಚಿಕೊಳ್ಳಬಹುದು. ಬೇಕಾದರೆ ಆ ಸ್ಥಳದ ಫೋಟೋ, ವೀಡಿಯೊ ಸಹ ಕಳಿಸಲು ಅವಕಾಶವಿದೆ.
ಮಾಹಿತಿದಾರರ ವಿವರಗಳನ್ನು ಪೊಲೀಸ್ ಇಲಾಖೆ ಸಂಪೂರ್ಣ ಗೌಪ್ಯವಾಗಿಟ್ಟುಕೊಳ್ಳಲಿದೆ. ತ್ವರಿತ ಪೊಲೀಸ್ ಕ್ರಮಕ್ಯೂಆರ್ ಕೋಡ್ ಮೂಲಕ ಬಂದ ದೂರುಗಳ ಆಧಾರದ ಮೇಲೆ ಸಮೀಪದ ಪೊಲೀಸ್ ಠಾಣೆಯ ಸಿಬ್ಬಂದಿ ಅಥವಾ ತುರ್ತು ಸಹಾಯವಾಣಿ 112 ವಾಹನದ ಸಿಬ್ಬಂದಿ ತಕ್ಷಣ ಸ್ಥಳಕ್ಕಾಗಮಿಸಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.
ಇತ್ತೀಚಿನ ವರ್ಷದಲ್ಲಿ 718 ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 369 ಶಾಲಾ–ಕಾಲೇಜುಗಳಿಗೆ ಭೇಟಿ ನೀಡಿ 25 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗಿದೆ. 294 ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳು ಮತ್ತು 5 ಕಿಮೀ ಮ್ಯಾರಾಥಾನ್ ಓಟದ ಮೂಲಕ 5,500 ಕ್ಕೂ ಹೆಚ್ಚು ಮಂದಿಗೆ ಮಾದಕ ವಸ್ತುಗಳಿಂದಾಗುವ ಅಪಾಯದ ಕುರಿತು ಜಾಗೃತಿ ಮೂಡಿಸಲಾಗಿದೆ.
ಇದನ್ನೂ ಓದಿ: ಉತ್ತರ ಕನ್ನಡ | ಪೌರ ಕಾರ್ಮಿಕರ ಸೇವೆಯನ್ನೂ ಗೌರವಿಸಿ: ಚಂದ್ರಕಲಾ
ಕಳೆದ 3 ವರ್ಷಗಳಲ್ಲಿ ಸುಮಾರು 39.25 ಲಕ್ಷ ಮೌಲ್ಯದ 94 ಕೆ.ಜಿ ಗಾಂಜಾ ವಶಪಡಿಸಿಕೊಂಡು ನಾಶಪಡಿಸಲಾಗಿದೆ. 2022ರಿಂದ ಈವರೆಗೆ 26 ಪ್ರಕರಣಗಳಲ್ಲಿ 49.80 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, 43 ಆರೋಪಿತರನ್ನು ಬಂಧಿಸಲಾಗಿದೆ. ಸೇವನೆ ಸಂಬಂಧಿತ 126 ಪ್ರಕರಣಗಳಲ್ಲಿ 154 ಮಂದಿಯನ್ನು ಬಂಧಿಸಲಾಗಿದೆ. 2019ರಿಂದ ದಾಖಲಾಗಿರುವ ಪ್ರಕರಣಗಳಲ್ಲಿ ಒಟ್ಟು 783 ಮಂದಿಯನ್ನು ಬಂಧಿಸಿದ್ದು, ಅದರಲ್ಲಿ 575 ಮಂದಿ 18 ರಿಂದ 30 ವರ್ಷದೊಳಗಿನ ಯುವಜನತೆ. ಯುವಜನತೆ ಹೆಚ್ಚು ಬಲಿಯಾಗುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಜಿಲ್ಲೆಗೆ ಹೊರರಾಜ್ಯಗಳಿಂದ ಮಾದಕ ವಸ್ತುಗಳು ಪ್ರವೇಶಿಸುತ್ತಿದ್ದು, ಸ್ಥಳೀಯ ಪೆಡ್ಲರ್‌ಗಳ ಮೂಲಕ ಪ್ರವಾಸಿಗರು ಮತ್ತು ಸ್ಥಳೀಯರಿಗೆ ಹರಡುತ್ತಿದೆ.
ಉತ್ತರ ಕನ್ನಡ ಜಿಲ್ಲೆಯನ್ನು ಮಾದಕ ವಸ್ತುಗಳಿಂದ ಸಂಪೂರ್ಣ ಮುಕ್ತಗೊಳಿಸುವುದು ನಮ್ಮ ಗುರಿ. ಇದಕ್ಕೆ ಪೊಲೀಸ್ ಇಲಾಖೆಯ ಜೊತೆಗೆ ಪ್ರತಿಯೊಬ್ಬ ನಾಗರಿಕರ ಸಹಕಾರವೂ ಅಗತ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.