ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮೀಟರ್ ಬಡ್ಡಿ ದಂಧೆ ಯಿಂದ ಬಡವರು, ಬೀದಿ ವ್ಯಾಪಾರಿಗಳು ಹಾಗೂ ಸಾಮಾನ್ಯರಿಂದ ಖಾಲಿ ಚೆಕ್ಗಳನ್ನು ಪಡೆದು ಮೋಸ ಮಾಡುವ ಘಟನೆಗಳು ಬೆಳಕಿಗೆ ಬಂದಿವೆ. ಇದರಿಂದ ಜನರು ಸಂಕಷ್ಟಕ್ಕೊಳಗಾಗುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರಲ್ಲಿ ಬ್ಯಾಂಕ್ಗಳಿಂದ ಸಿಗುವ ಸಾಲ ಸೌಲಭ್ಯಗಳ ಬಗ್ಗೆ ಸಾಕ್ಷರತಾ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಹಾಗೂ ಖಾಲಿ ಚೆಕ್ ನೀಡಿದರೆ ಆಗುವ ಭಾರಿ ಪರಿಣಾಮಗಳ ಕುರಿತು ಜನಜಾಗೃತಿ ಮೂಡಿಸುವಂತೆ ಜಿಲ್ಲೆಯ ಎಲ್ಲಾ ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಬಡವರಿಗೆ ಬ್ಯಾಂಕ್ಗಳ ವಿವಿಧ ಸಾಲ ಯೋಜನೆಗಳು ಸುಲಭವಾಗಿ ಲಭ್ಯವಾಗುವಂತೆ ಕ್ರಮಕೈಗೊಳ್ಳುವ ಅಗತ್ಯವಿದೆ ಎಂದು ಸೂಚಿಸಿದರು. ಇತ್ತೀಚೆಗೆ ಬ್ಯಾಂಕ್ ದರೋಡೆ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿಯೇ ಇಂತಹ ಅಪರಾಧಗಳು ನಡೆಯದಂತೆ ತಡೆಗಟ್ಟುವ ಉದ್ದೇಶದಿಂದ ಎಲ್ಲಾ ಬ್ಯಾಂಕ್ಗಳಲ್ಲಿ ಗರಿಷ್ಠ ಭದ್ರತಾ ಕ್ರಮಗಳನ್ನು ಜಾರಿಗೊಳಿಸುವಂತೆ ಎಸ್ಪಿ ದೀಪನ್ ಎಂ.ಎನ್. ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಅಳವಡಿಸಿರುವ ಭದ್ರತಾ ಸಾಧನಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದರ ಬಗ್ಗೆ ಬ್ಯಾಂಕ್ಗಳು ಆಂತರಿಕ ಪರಿಶೀಲನೆ ನಡೆಸಬೇಕು ಮತ್ತು ಕಂಡುಬರುವ ಲೋಪಗಳನ್ನು ತಕ್ಷಣ ಸರಿಪಡಿಸಬೇಕು ಎಂದು ಹೇಳಿದರು.ಬ್ಯಾಂಕ್ಗಳಲ್ಲಿ ಅತ್ಯಾಧುನಿಕ ಎಫ್ಆರ್ಎಸ್ (Face Recognition System) ಕ್ಯಾಮೆರಾಗಳನ್ನು ಹಾಗೂ ಹೊರಭಾಗದಲ್ಲಿ ಎಎನ್ಪಿಆರ್ (Automatic Number Plate Recognition) ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು. ಜೊತೆಗೆ ಎಲ್ಲಾ ಕ್ಯಾಮೆರಾಗಳ ಕಾರ್ಯವೈಖರಿ ನಿಯಮಿತವಾಗಿ ಪರಿಶೀಲನೆಗೊಳಗಾಗಬೇಕು ಎಂದು ಸೂಚಿಸಿದರು.
ತುರ್ತು ಅಲಾರಂ, ಶಸ್ತ್ರದಾರಿ ಕಾವಲುಗಾರರು ಕಡ್ಡಾಯವಾಗಿ ನೇಮಕ ಮಾಡಿಕೊಳ್ಳಬೇಕು ಬ್ಯಾಂಕ್ಗಳಲ್ಲಿ ಅಲಾರಂ ವ್ಯವಸ್ಥೆ ಮಾಡಬೇಕು ತುರ್ತು ಸಂದರ್ಭಗಳಲ್ಲಿ ಸಮೀಪದ ಪೊಲೀಸ್ ಠಾಣೆ ಅಥವಾ ಕಂಟ್ರೋಲ್ ರೂಂಗೆ ನೇರ ಎಚ್ಚರಿಕೆ ರವಾನಿಸುವ ರೀತಿಯಲ್ಲಿ ಪರಿಷ್ಕರಿಸಬೇಕು. ಪ್ರತಿಯೊಂದು ಬ್ಯಾಂಕ್ನಲ್ಲಿಯೂ ಶಸ್ತ್ರದಾರಿ ಕಾವಲುಗಾರರನ್ನು ನೇಮಕ ಮಾಡುವಂತೆ ಸೂಚಿಸಿದ ಅವರು, ಅಗತ್ಯವಿರುವ ಶಸ್ತ್ರಾಸ್ತ್ರಗಳಿಗೆ ಪೊಲೀಸ್ ಇಲಾಖೆಯಿಂದಲೇ ಅಧಿಕೃತ ಅನುಮತಿ ದೊರೆಯುತ್ತದೆ ಎಂದರು. ಗ್ರಾಮಾಂತರ ಹಾಗೂ ಕಾವಲುಗಾರರಿಲ್ಲದ ಎಟಿಎಂ ಗಳನ್ನು ರಾತ್ರಿ ವೇಳೆ ಮುಚ್ಚುವುದು ಸೂಕ್ತ. ಜೊತೆಗೆ, ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳ ಎಟಿಎಂಗಳ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದಲ್ಲಿ ಇ-ಬೀಟ್ ವ್ಯವಸ್ಥೆಯ ಮೂಲಕ ನಿರಂತರ ಪರಿಶೀಲನೆ ಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಪೌರಕಾರ್ಮಿಕ ದಿನಾಚರಣೆ ಮುನ್ನಾ ದಿನವೇ ವಿವಾದ – ರಾತ್ರಿ ಹೊತ್ತು ಸ್ವಚ್ಛತೆಗೆ ಪೌರಕಾರ್ಮಿಕರ ಬಳಕೆ
ಬ್ಯಾಂಕ್ಗಳ ಹಿಂಭಾಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾತ್ರಿ ಸಮಯದಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಇರಬೇಕು. ಜೊತೆಗೆ, ಆಗಾಗ್ಗೆ ಅಣುಕು ಪರೀಕ್ಷೆಗಳನ್ನು ನಡೆಸಿ ಬ್ಯಾಂಕ್ಗಳಲ್ಲಿ ಭದ್ರತೆ ಸಮರ್ಪಕವಾಗಿ ಜಾರಿಯಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ಬ್ಯಾಂಕ್ಗಳ ಪ್ರತಿನಿಧಿಗಳು ಭಾಗವಹಿಸಿದ್ದರು.