ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮೂರನೇ ದಿನವೂ ನಿರೀಕ್ಷಿತ ಪ್ರಗತಿ ಕಂಡಿಲ್ಲ. ತಾಂತ್ರಿಕ ಸಮಸ್ಯೆ, ಗೊಂದಲದ ಕಾರಣ ನೀಡಿ ಅರ್ಧದಷ್ಟು ಸಮೀಕ್ಷೆದಾರರು ಕೆಲಸಕ್ಕೆ ಗೈರಾಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಮೀಕ್ಷೆ ಆರಂಭಗೊಂಡು ಮೂರು ದಿನ ಕಳೆದಿದ್ದು, ಉತ್ತರ ಕನ್ನಡ ಜಿಲ್ಲೆಯ 4.31 ಲಕ್ಷ ಮನೆಗಳ ಪೈಕಿ ಎರಡು ದಿನದಲ್ಲಿ ಕೇವಲ 990 ಮನೆಗಳ ಸಮೀಕ್ಷೆಯಷ್ಟೇ ಪೂರ್ಣಗೊಂಡಿವೆ. ಮೊದಲ ದಿನ 156 ಮನೆಗಳ ಸಮೀಕ್ಷೆ ನಡೆದಿತ್ತು. ಎರಡನೇ ದಿನ 834 ಮನೆಗಳ ಸಮೀಕ್ಷೆ ನಡೆಯಿತು. ಸಮೀಕ್ಷೆಗೆ ನಿಯೋಜನೆಯಾದ 3,923 ಸಮೀಕ್ಷೆದಾರರ ಪೈಕಿ ಮಂಗಳವಾರದತನಕ ಸಮೀಕ್ಷೆಯಲ್ಲಿ 1,522 ಮಂದಿ ಪಾಲ್ಗೊಂಡಿಲ್ಲಾ ಎಂಬುದು ತಂತ್ರಾಂಶದ ಮೂಲಕ ತಿಳಿದುಬಂದಿದೆ ಎಂದೂ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸಮೀಕ್ಷೆದಾರರ ಮೊಬೈಲ್ ಸಂಖ್ಯೆ ಜೋಡಣೆಯಾದ ಆ್ಯಪ್‌ನಲ್ಲಿ ನಮೂದಾದ ಯುಎಚ್‌ಐಡಿ ಸಂಖ್ಯೆಗಳಿಗೂ, ಅವರಿಗೆ ಗುರುತಿಸಿದ ಪ್ರದೇಶದಲ್ಲಿನ ಮನೆಗಳ ಸಂಖ್ಯೆಗಳಿಗೂ ವ್ಯತ್ಯಾಸಗಳಿವೆ. ಅಲ್ಲದೇ, ನೆಟ್‌ವರ್ಕ್ ಸಮಸ್ಯೆಯಿಂದ ಆಪ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. 60 ಪ್ರಶ್ನೆಗಳಿಗೆ ಉತ್ತರ ಪಡೆದು ಭರ್ತಿ ಮಾಡಲು ವಿಳಂಬ ಆಗುತ್ತಿದೆ. ದಿನವೊಂದಕ್ಕೆ ಕನಿಷ್ಠ 5 ಮನೆಯ ಸಮೀಕ್ಷೆ ಪೂರ್ಣಗೊಳಿಸಲೂ ಆಗುತ್ತಿಲ್ಲ ಎಂದು ನಿಯೋಜನೆಗೊಂಡ ಶಿಕ್ಷಕರು ದೂರುತ್ತಿದ್ದಾರೆ.
ಜನರು ಕೇಳುವ ಪ್ರಶ್ನೆಗಳಿಗೆ ಸಮೀಕ್ಷೆದಾರರೆ ಹೈರಾಣ: ಮಾಡಿದ ಸಾಲ ನೀವು ತೀರಿಸ್ತೀರಾ, ಅಥವಾ ಸರ್ಕಾರ ಸಾಲ ಮನ್ನಾ ಮಾಡುತ್ತಾ. ನಮ್ಮ ಆಸ್ತಿ ಮಾಹಿತಿ ನಿಮಗೇಕೆ ನೀಡಬೇಕು ಎಂಬ ಜನರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತತ್ತರಿಸುತ್ತಿದ್ದೇವೆ. ನಾವು ಕೇಳುವ 60 ಪ್ರಶ್ನೆಗಳಿಗೆ ಉತ್ತರ ಪಡೆದಿದ್ದಕ್ಕಿಂತ ಜನರ ಪ್ರಶ್ನೆಗೆ ಉತ್ತರಿಸುವಷ್ಟರಲ್ಲಿ ಇಡೀ ದಿನ ಕಳೆದು ಹೋಗುತ್ತಿದೆ. ಸಮೀಕ್ಷೆ ಪ್ರಕ್ರಿಯೆಯಲ್ಲಿ ತೊಡಗಿದ ಶಿಕ್ಷಕರು ಹೀಗೆ ಆಯಾ ತಾಲ್ಲೂಕಿನ ತಹಶೀಲ್ದಾರ್‌ಗಳ ಎದುರು, ಹಾಗೂ ಹಿರಿಯ ಅಧಿಕಾರಿಗಳ ಹತ್ತಿರ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಸಮೀಕ್ಷೆ ಆರಂಭಗೊಂಡು ಮೂರು ದಿನ ಕಳೆದರೂ ಜಿಲ್ಲೆಯಲ್ಲಿ ಗೊಂದಲ ಮುಂದುವರಿದಿದೆ. ಅದರ ನಡುವೆಯೇ 3 ಸಾವಿರಕ್ಕೂ ಹೆಚ್ಚು ಸಮೀಕ್ಷೆದಾರರು ಮನೆ ಬಾಗಿಲಿಗೆ ಸಮೀಕ್ಷೆಗಾಗಿ ತೆರಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಮೀಕ್ಷೆ ನಡೆಸಲು ರೂಪಿಸಿದ ಮೊಬೈಲ್ ಆ್ಯಪ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಪ್ರಶ್ನೆಗಳಿಗೆ ಉತ್ತರ ಪಡೆದು, ಭರ್ತಿ ಮಾಡುವಷ್ಟರಲ್ಲಿಯೇ ತಾಂತ್ರಿಕ ಸಮಸ್ಯೆಯಿಂದ ಆಪ್ ಬಂದಾಗುತ್ತಿದೆ ಎಂದು ಗಣತಿದಾರರು ಆರೋಪಿಸಿದ್ದಾರೆ.
ಕನಿಷ್ಠ ಎರಡರಿಂದ ಮೂರು ಬಾರಿ ಕುಟುಂಬದ ಯಜಮಾನರ ಫೋಟೊ ಕ್ಲಿಕ್ಕಿಸಿ, ಉತ್ತರ ಪಡೆಯಬೇಕಾಗುತ್ತಿದೆ. ಕೆಲವರು ಸಹಕಾರ ನೀಡಿದರೆ ಕೆಲವರು ಅಸಮಾಧಾನದಿಂದ ಸಾಗ ಹಾಕುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕಿಯೊಬ್ಬರು ಸಮಸ್ಯೆ ಹೇಳಿಕೊಂಡರು. ಸಮೀಕ್ಷೆಗೆ ರೂಪಿಸಿದ ಪಟ್ಟಿಯಲ್ಲಿ ಸಾಲದ ಮಾಹಿತಿ, ಆಸ್ತಿಗಳ ವಿವರಗಳ ಬಗ್ಗೆ ಪ್ರಶ್ನಾವಳಿಗಳಿವೆ. ಅಂತಹ ಪ್ರಶ್ನೆಗಳಿಗೆ ಉತ್ತರ ನೀಡಲು ಬಹುತೇಕ ಕುಟುಂಬಗಳು ಹಿಂದೇಟು ಹಾಕುತ್ತಿವೆ. ನಾವು ಶಿಕ್ಷಕರಾಗಿ ಕೆಲಸ ನಿರ್ವಹಿಸುವಂತಹ ಶಾಲೆಯ ವ್ಯಾಪ್ತಿಯನ್ನು ಬಿಟ್ಟು ಬೇರೆ ಪ್ರದೇಶಕ್ಕೆ ಸಮೀಕ್ಷೆ ಮಾಡುವಂತೆ ನಿಯೋಜನೆ ಮಾಡಿದ್ದು, ಅಲ್ಲಿನ ಜನರಿಗೆ ನಮ್ಮ ಗುರುತು ಪರಿಚಯ ಇಲ್ಲ. ಹೀಗಾಗಿ ನಾವು ಸಮೀಕ್ಷೆ ಮಾಡಲು ಮನೆ ಬಾಗಿಲಿಗೆ ಹೋದರೆ ಅಲ್ಲಿನ ಜನರು ನಮ್ಮನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂದೂ ಶಿಕ್ಷಕಿ ಒಬ್ಬರು ವಿವರಿಸಿದರು.
ಇದನ್ನೂ ಓದಿ: ಉತ್ತರ ಕನ್ನಡ | ಪೌರ ಕಾರ್ಮಿಕರ ಸೇವೆಯನ್ನೂ ಗೌರವಿಸಿ: ಚಂದ್ರಕಲಾ
ಹಾಗೂ ನಿವೃತ್ತಿಗೆ ಕೆಲವೇ ತಿಂಗಳು ಬಾಕಿ ಇರುವ ಶಿಕ್ಷಕರಿಗೆ ಆ್ಯಂಡ್ರಾಯ್ಡ್ ಮೊಬೈಲ್ ನಲ್ಲಿ ಸಮೀಕ್ಷೆ ಮಾಡುವುದು ತುಂಬಾ ಕಷ್ಟವಾಗಿದೆ. ತಂತ್ರಜ್ಞಾನದ ಬಳಕೆ ಬಗ್ಗೆ ಹೆಚ್ಚು ಜ್ಞಾನವಿಲ್ಲದೆ ಇದ್ದರೂ, ಸರ್ಕಾರದ ಆದೇಶ ಪಾಲನೆ ಮಾಡಬೇಕಾದ ಪರಿಸ್ಥಿತಿ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರದ್ದಾಗಿದೆ. ಸಮೀಕ್ಷೆಗೆ ವಿನಾಯಿತಿ ಕೋರಿ ಕೆಲವು ಶಿಕ್ಷಕರು ತಮ್ಮ ಮೇಲಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಿದರು. ಆದರೆ ಕೊನೆ ಕ್ಷಣದಲ್ಲಿ ಅವರ ಮನವಿಯನ್ನು ಪರಿಗಣಿಸದೆ ಸಮೀಕ್ಷೆಗೆ ಹಾಜರಾಗಲು ಸೂಚಿಸಿದ್ದಾರೆ ಎಂದು ಜಿಲ್ಲೆಯ ಶಿಕ್ಷಕರೊಬ್ಬರು ದೂರಿದರು.
ಸಮೀಕ್ಷೆಯಲ್ಲಿ ಮೇಲ್ವಿಚಾರಕರ ಮಾಹಿತಿಯನ್ನೇ ನೀಡಿಲ್ಲ: ಪ್ರತಿ 20 ಸಮೀಕ್ಷೆದಾರರಿಗೆ ಒಬ್ಬರು ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಸಮಸ್ಯೆಗಳಿದ್ದಲ್ಲಿ ಅವರಿಗೆ ತಿಳಿಸಬೇಕು ಎಂದು ತರಬೇತಿ ವೇಳೆ ಹೇಳಿದ್ದರು. ಆದರೆ, ಸಮೀಕ್ಷೆ ಆರಂಭಗೊಂಡು 3 ದಿನ ಕಳೆದರೂ ಮೇಲ್ವಿಚಾರಕರು ಯಾರೆಂಬ ಪಟ್ಟಿಯನ್ನೇ ಸಮೀಕ್ಷೆದಾರರಿಗೆ ನೀಡಿಲ್ಲ. ಸಮೀಕ್ಷೆ ನಡೆಸುವ ಮನೆಗಳ ಯುಎಚ್‌ಐಡಿ ಪಟ್ಟಿ ನೀಡಿ ಎಂದರೂ ನೀಡುತ್ತಿಲ್ಲ. ಆ್ಯಪ್‌ನಲ್ಲಿ ದಾಖಲಾದ ಯುಎಚ್‌ಐಡಿ ಸಂಖ್ಯೆ ನಮಗೆ ಸಮೀಕ್ಷೆಗೆ ನಿಯೋಜಿಸಿದ ಪ್ರದೇಶದಲ್ಲಿ ಪತ್ತೆಯಾಗದೆ ಶಿಕ್ಷಕರು ಹೈರಾಣಾಗಿದ್ದಾರೆ ಎಂದು ಶಿಕ್ಷಕರ ಸಂಘದ ಪದಾಧಿಕಾರಿಯೊಬ್ಬರು ಹೇಳಿದರು.
ಸಮೀಕ್ಷೆ ಕಾರ್ಯಕ್ಕೆ ಜನರು ಸ್ಪಂದಿಸುತ್ತಿದ್ದಾರೆ. ಸಮೀಕ್ಷೆದಾರರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಣ್ಣಪುಟ್ಟ ಗೊಂದಲಗಳಿದ್ದರೆ ನಿವಾರಿಸಲಾಗುತ್ತಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶಿವಕ್ಕ ಮಾದರ ಅವರು ತಿಳಿಸಿದರು.