ಭಟ್ಕಳ ತಾಲೂಕಿನ ಹೆಬಳೆ ತೆಂಗಿನಗುಂಡಿಯಲ್ಲಿರುವ ಶ್ರೀ ಬ್ರಹ್ಮಲಿಂಗೇಶ್ವರ ನಾಗದೇವತಾ ಪ್ರಸನ್ನ ದೇವಸ್ಥಾನದಲ್ಲಿ ರವಿವಾರ ಹಾಡುಹಗಲೇ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಭಟ್ಕಳ ಗ್ರಾಮೀಣ ಪೊಲೀಸರು 24 ಗಂಟೆ ಕಳೆಯುವುದರೊಳಗಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯಿಂದ ಕಳ್ಳತನಕ್ಕೆ ಬಳಸಿದ ಬೈಕ್ ಮತ್ತು ಕಳವು ಮಾಡಿದ್ದ ₹1.10 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ಹನೀಫಾಬಾದ್ನ ನೆರ್ಲೆಸರ ನಿವಾಸಿ ಸೈಯದ್ ಯೂನುಸ್ ಸೈಯದ್ ಅಹ್ಮದ್ ಎಂದು ಗುರುತಿಸಲಾಗಿದೆ.
ರವಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ದೇವಸ್ಥಾನದ ಬಾಗಿಲನ್ನು ಮುರಿದು ಒಳನುಗ್ಗಿದ ಆರೋಪಿ, ದೇವಸ್ಥಾನದಲ್ಲಿದ್ದ ತಾಮ್ರದ ಕೊಡ, ಹರಿವಾಣ ಸೇರಿದಂತೆ ಪೂಜಾ ಪರಿಕರಗಳನ್ನು ಕದ್ದು ಪರಾರಿಯಾಗಿದ್ದ. ಈ ದೇವಸ್ಥಾನವು ತೆಂಗಿನಗುಂಡಿ ನಿವಾಸಿ ಮಾದೇವ ಅಚ್ಯುತ್ ಪ್ರಭು ಅವರ ಕುಟುಂಬಕ್ಕೆ ಸೇರಿದ್ದಾಗಿದ್ದು, ರವಿವಾರ ಕುಟುಂಬದ ಮಹಿಳೆಯೊಬ್ಬರು ಪೂಜೆಗೆ ಬಂದಾಗ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರು ಕುಟುಂಬದವರಿಗೆ ಮತ್ತು ಊರ ಜನರಿಗೆ ಮಾಹಿತಿ ನೀಡಿದ್ದಾರೆ. ಜನ ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿ ಅಲ್ಲಿಂದ ಪರಾರಿಯಾಗಿದ್ದನು.
ಕಳ್ಳತನದ ಮಾಹಿತಿ ತಿಳಿದ ಕೂಡಲೇ ಭಟ್ಕಳ ಗ್ರಾಮೀಣ ಪೊಲೀಸರು ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಅವರ ಮಾರ್ಗದರ್ಶನ ಮತ್ತು ಪಿಎಸ್ಐ ಭರಮಪ್ಪ ಬೆಳಗಲಿ ಅವರ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ದಿನ ಕಳೆಯುವುದರೊಳಗೆ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ | ಕನ್ನಡ ತರ್ಜುಮೆ ತಂತ್ರಾಂಶ ʼಕನ್ನಡ ಕಸ್ತೂರಿʼ ಶೀಘ್ರದಲ್ಲೇ ಬಿಡುಗಡೆ
ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.