ಬೇಲಿಯೇ ಎದ್ದು ಹೊಲ ಮೇಯ್ದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರಸಭೆಯಲ್ಲಿ ಜರುಗಿದೆ. ಕಬ್ಬಿಣದ ಪೈಪ್ ಗಳನ್ನು ನಗರಸಭೆ ಅಧಿಕಾರಿಗಳು ಹಾಗೂ ನಗರಸಭೆ ಚುನಾಯಿತ ಸದಸ್ಯರು ಸೇರಿ ಮಾರಾಟ ಮಾಡಿರುವ ಪ್ರಕರಣ ತನಿಖೆಯಿಂದ ಹೊರಬಿದ್ದಿದೆ.
ಫೆಬ್ರವರಿ 20 ರಿಂದ 27ರವರೆಗೆ ಶಿರಸಿ ನಗರಸಭೆಗೆ ಸೇರಿದ ಕೆಂಗ್ರಿ ನೀರು ಸರಬರಾಜು ಕೇಂದ್ರದಿಂದ ಹುತ್ಗಾರ ಪಂಪಿನ ಘಟಕಕ್ಕೆ 1969 ನೇ ಸಾಲಿನಲ್ಲಿ ಸುಮಾರು 8 ಕಿಮೀ ಭೂಮಿ ಒಳಗಡೆ 900 ಮೀ. ಉದ್ದದ 116 ಕಬ್ಬಿಣದ ಪೈಪ್ ಗಳನ್ನು ಅಳವಡಿಸಲಾಗಿತ್ತು. ಇದನ್ನು ಗುಜರಿ ಗುತ್ತಿಗೆದಾರ ಸೈಯದ್ ಜಕ್ರಿಯಾ ಕಳ್ಳತನ ಮಾಡಿಕೊಂಡು ಹೋಗಿದ್ದಾನೆ ಎಂದು ನಗರಸಭೆ ಜೆಇ ಸುಫಿಯಾನ ಅಹ್ಮದ್ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಮಾಡಿದ ಸಂದರ್ಭದಲ್ಲಿ ದೂರುದಾರ ಸಹ ಪ್ರಕರಣದಲ್ಲಿ ಭಾಗಿಯಾಗಿದ್ದು ಗೊತ್ತಾಗಿದೆ ಎಂದು ಎಸ್‌ಪಿ ಎಂ ನಾರಾಯಣ ಹೇಳಿದ್ದಾರೆ.
ಶಿರಸಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಶಿಕಾರಿಪುರದ ಗುಜರಿ ಗುತ್ತಿಗೆದಾರ ಸೈಯದ್ ಜಕ್ರಿಯಾ ನನ್ನು ಬಂಧಿಸಿ ತನಿಖೆ ಮಾಡಿದ ಸಂದರ್ಭದಲ್ಲಿ ಈ ಪ್ರಕರಣ ಹೊರಗೆ ಬಿದ್ದಿದೆ. ಬಂಧನದ ಸಂದರ್ಭದಲ್ಲಿ ಆರೋಪಿಯಿಂದ 7.02 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ಸಂದರ್ಭದಲ್ಲಿ ಆತನು ಪೌರಾಯುಕ್ತ ಎಚ್ ಕಾಂತರಾಜ್ ಎಇಇ, ಪ್ರಶಾಂತ್ ವೇರ್ಣೆಕರ, ಜೆಇ ಸುಫಿಯಾನ್, ಬ್ಯಾರಿ ನಗರಸಭೆ ಸದಸ್ಯರಾದ ಗಣಪತಿ ನಾಯ್ಕ, ಕುಮಾರ್ ಬೊರ್ಕೆರ್, ಯಶವಂತ ಮರಾಠಿ ಇವರುಗಳ ಸಹಕಾರ ಮತ್ತು ಅನುಮತಿಯಿಂದ 116 ಕಬ್ಬಿಣದ ಪೈಪ್ ಗಳನ್ನು ತೆಗೆದುಕೊಂಡು ಹೋಗಿರುವುದಾಗಿ ಗುಜರಿ ಗುತ್ತಿಗೆದಾರ ನೀಡಿದ ಹೇಳಿಕೆಯನ್ನು ದಾಖಲಿಸಿಕೊಂಡು ಎಲ್ಲರನ್ನೂ ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ” ಎಂದರು.
ಇದನ್ನೂ ಓದಿ: ಉತ್ತರ ಕನ್ನಡ | 330 ಗ್ರಂಥಾಲಯ ಸ್ಥಾಪನೆಗೆ ಕೇಂದ್ರ ಅನುಮತಿಸಿದೆ: ಸಂಸದ ಕಾಗೇರಿ
ಪ್ರಕರಣದಲ್ಲಿ ಸರ್ಕಾರಿ ನೌಕರರ ಮತ್ತು ಮೂವರು ಸದಸ್ಯರು ಶಾಮೀಲಾಗಿರುವುದರಿಂದ ಅವರನ್ನು ಸೇವೆಯಿಂದ ವಜಾ ಮಾಡುವ ಅಧಿಕಾರ ಯಾರಿಗೆ ಇದೆ ಎಂದು ಪೌರಾಡಳಿತ ನಿರ್ದೇಶನಾಲದ ನಿರ್ದೇಶಕರಿಗೆ ಕೋರಲಾಗಿದೆ. ಅವರಿಂದ ಮಾಹಿತಿ ಬಂದ ನಂತರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು.
ಆರೋಪಿ ಸೈಯದ್ ಜಕ್ರಿಯಾ ಖಾತೆಯಿಂದ ನಗರಸಭೆ ಸದಸ್ಯ ಯಶವಂತ ಮರಾಠೆ ಖಾತೆಗೆ 1 ಲಕ್ಷ ರೂಪಾಯಿ ಜಮಾ ಆಗಿರುವ ದಾಖಲೆ ಸಂಗ್ರಹಿಸಲಾಗಿದೆ. ಒಟ್ಟು 3 ಜೆಸಿಬಿ, 1 ಕ್ರೇನ್, 2 ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ 116 ಕಬ್ಬಿಣದ ಪೈಪ್ ಗಳ ಪ್ರಸ್ತುತ ಮಾರುಕಟ್ಟೆ ಬೆಲೆ ಅಂದಾಜು 21.18 ಲಕ್ಷ ರೂಪಾಯಿ ಎಂದು ವರದಿ ಮಾಡಲಾಗಿದೆ.
ಡಿಎಸ್ಪಿ ಗೀತಾ ಪಾಟೀಲ್ ಪಿಐಗಳಾದ ಶಶಿಕಾಂತ ವರ್ಮಾ, ಜೆ ಬಿ ಸಿತಾರಾಮ, ಮಂಜುನಾಥ ಗೌಡ, ರಂಗನಾಥ್ ನೀಲಮ್ಮನವರ, ರಮೇಶ್ ಹಾನಾಪುರ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.