ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಶೇ.76.52ರಷ್ಟು ಮತದಾನವಾಗಿದೆ. ಬೆಳಗ್ಗೆ 8ರಿಂದ ಸಂಜೆ 4ರವರೆಗೆ ನಡೆದ ಮತದಾನ ಪ್ರಕ್ರಿಯೆ ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ಮುಕ್ತಾಯಗೊಂಡಿತು.
ಜಿಲ್ಲೆಯಾದ್ಯಂತ ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗಳಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಅಂಕೋಲ ಮತ್ತು ಕುಮಟಾ ಸೇರಿದಂತೆ ವಿವಿಧ ಮತಗಟ್ಟೆಗಳಲ್ಲಿ ಮಧ್ಯಾಹ್ನದ ವೇಳೆಗೆ ಮತದಾರರ ಸಂಖ್ಯೆ ಹೆಚ್ಚಾಗಿತ್ತು. ಅಂಕೋಲ ತಹಸೀಲ್ದಾರ್ ಕಚೇರಿಯ ಮತಗಟ್ಟೆಯಲ್ಲಿ ಮಧ್ಯಾಹ್ನ 12 ಗಂಟೆಯ ವೇಳೆಗೆ ಮತದಾರರು ಕಚೇರಿಯ ಆವರಣದ ಹೊರಗೂ ಸರತಿ ಸಾಲಿನಲ್ಲಿ ನಿಂತಿದ್ದರು.
ಜಿಲ್ಲೆಯಲ್ಲಿ ಬೆಳಗ್ಗೆ 10 ಗಂಟೆಯ ವೇಳೆಗೆ ಶೇ.10.82ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 12 ಗಂಟೆಗೆ ಶೇ.29.65ರಷ್ಟು ಮತದಾನ ದಾಖಲಾಗಿತ್ತು. ಈ ವೇಳೆಗೆ ಒಟ್ಟು 16,039 ಮತದಾರರಲ್ಲಿ 2,485 ಪುರುಷರು ಮತ್ತು 2,271 ಮಹಿಳೆಯರು ಸೇರಿದಂತೆ 4,756 ಮಂದಿ ಮತ ಚಲಾಯಿಸಿದ್ದರು.
ಈ ಸುದ್ದಿ ಓದಿದ್ದೀರಾ ? ಉತ್ತರ ಕನ್ನಡ | ಪರಿಶಿಷ್ಟ ಜಾತಿ, ಪಂಗಡದ ಅನುದಾನ ಸಮರ್ಪಕ ಬಳಕೆಗೆ ಜಿಲ್ಲಾಧಿಕಾರಿ ಸೂಚನೆ
ಮಧ್ಯಾಹ್ನ 2 ಗಂಟೆಯ ವೇಳೆಗೆ ಮತದಾನದ ಪ್ರಮಾಣ ಶೇ.52.09ಕ್ಕೆ ಏರಿಕೆಯಾಗಿತ್ತು. ಆಗ 4,310 ಪುರುಷರು ಮತ್ತು 4,045 ಮಹಿಳೆಯರು ಸೇರಿದಂತೆ ಒಟ್ಟು 8,355 ಮಂದಿ ಮತದಾನ ಮಾಡಿದ್ದರು. ಸಂಜೆ 4 ಗಂಟೆಗೆ ಮತದಾನ ಮುಕ್ತಾಯಗೊಂಡಾಗ ಜಿಲ್ಲೆಯಲ್ಲಿ ಶೇ.76.52ರಷ್ಟು ಮತದಾನ ದಾಖಲಾಗಿದೆ.
ಕಾರವಾರದ ಸೇಂಟ್ ಮೈಕಲ್ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀ ಪ್ರಿಯಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ತಹಸೀಲ್ದಾರ್ ನಿಶ್ಚಲ್ ನರೋನ್ಹ ಅವರು ಸಾರ್ವಜನಿಕರೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ಮತದಾನಕ್ಕೆ ಅಗತ್ಯ ಸಿದ್ಧತೆಗಳನ್ನು ಜಿಲ್ಲಾಡಳಿತ ಕೈಗೊಂಡಿತ್ತು. ವಿಶೇಷ ಚೇತನ ಮತದಾರರ ಅನುಕೂಲಕ್ಕಾಗಿ ಗಾಲಿಕುರ್ಚಿಗಳ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದರ ಜೊತೆಗೆ, ತುರ್ತು ವೈದ್ಯಕೀಯ ನೆರವು ನೀಡಲು ವೈದ್ಯಕೀಯ ಸಿಬ್ಬಂದಿಯನ್ನೂ ನಿಯೋಜಿಸಲಾಗಿತ್ತು.






