ಕಬ್ಬಿಣದ ಅದಿರು ಕಳ್ಳತನ ಮತ್ತು ಅಕ್ರಮ ಸಾಗಣೆ ಪ್ರಕರಣದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ–ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ.
ಪ್ರಕರಣ ಸಂಬಂಧ ವಿಚಾರಣೆ ಸಲುವಾಗಿ ಶಾಂತಿನಗರದ ಕಚೇರಿಗೆ ಕಾರವಾರ ಶಾಸಕ ಸತೀಶ್ ಸೈಲ್ ಆಗಮಿಸಿದ್ದರು. ತನಿಖೆಗೆ ಸಹಕರಿಸದ ಕಾರಣ ಶಾಸಕ ಸೈಲ್ರನ್ನು ಇ.ಡಿ ಅಧಿಕಾರಿಗಳು ಬಂಧಿಸಿದ್ದು, ವೈದ್ಯಕೀಯ ಪರೀಕ್ಷೆ ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಬೇಲೇಕೇರಿ ಬಂದರಿನಲ್ಲಿ ವಶಕ್ಕೆ ಪಡೆದು ಸಂಗ್ರಹಿಸಲಾಗಿದ್ದ ಸಾವಿರಾರು ಟನ್ಗಳಷ್ಟು ಕಬ್ಬಿಣದ ಅದಿರನ್ನು ಕದ್ದು, ಅಕ್ರಮವಾಗಿ ಸಾಗಣೆ ಮಾಡಿದ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಏಳು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸತೀಶ್ ಸೈಲ್ ಸಲ್ಲಿಸಿರುವ ಮೇಲ್ಮನವಿ ಬಗ್ಗೆ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್, ಕೆಳ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಈ ಕಾರಣಕ್ಕೆ ಸತೀಶ್ ಜೈಲಿನಿಂದ ಬಿಡುಗಡೆಯಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸಿಐಅರ್ ದಾಖಲಿಸಿಕೊಂಡಿದ್ದ ಇ.ಡಿ ಶಾಸಕ ಸತೀಶ್ ಕೃಷ್ಣ ಸೈಲ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಆಗಸ್ಟ್ 13 ಮತ್ತು 14ರಂದು ದಾಳಿ ನಡೆಸಿತ್ತು. ಈ ವೇಳೆ 1.41 ಕೋಟಿ ರೂಪಾಯಿ ನಗದು, 6.75 ಕೆ.ಜಿ. ಚಿನ್ನಾಭರಣ, ಬಂಗಾರದ ಬಿಸ್ಕೆಟ್ಗಳು ಹಾಗೂ ಬ್ಯಾಂಕ್ ಖಾತೆಗಳಲ್ಲಿ ದೊಡ್ಡ ಮೊತ್ತವನ್ನು ಇ.ಡಿ ವಶಪಡಿಸಿಕೊಂಡಿದೆ. ಕಾರವಾರ, ಗೋವಾ, ಮುಂಬೈ ಮತ್ತು ನವದೆಹಲಿಯ ಸುಮಾರು 15 ಸ್ಥಳಗಳಲ್ಲಿ ಏಕಕಾಲಕ್ಕೆ ನಡೆದ ಈ ದಾಳಿಯು ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.
ಈ ದಾಳಿಯು ಬೇಲೆಕೇರಿ ಅಕ್ರಮ ಅದಿರು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. ಈ ಪ್ರಕರಣದಲ್ಲಿ ಸತೀಶ್ ಸೈಲ್ ಈಗಾಗಲೇ ಆರೋಪಿಯಾಗಿದ್ದಾರೆ. 2009-10ರ ಸಮಯದಲ್ಲಿ ಬೇಲೆಕೇರಿ ಬಂದರಿನಿಂದ ಕಬ್ಬಿಣದ ಅದಿರನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಾಟ ಮಾಡಿದ ಆರೋಪದ ಮೇಲೆ 2010ರಲ್ಲಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ತನಿಖೆಯನ್ನು ನಂತರ ಸಿಬಿಐಗೆ ವರ್ಗಾಯಿಸಲಾಗಿತ್ತು.
ಕಾರವಾರ ಶಾಸಕ ಸತೀಶ್ ಸೈಲ್ ಬಂಧನ ಕೇಸ್ನಿಂದ ಕಳೆದ 15 ದಿನಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರಕಾರದ ಎರಡನೇ ಶಾಸಕ ಇ.ಡಿ. ಉರುಳಿಗೆ ಸಿಕ್ಕಂತಾಗಿದೆ. ಕೆಲ ದಿನಗಳ ಹಿಂದೆ ಬೆಟ್ಟಿಂಗ್ ದಂಧೆ ಮೂಲಕ ನೂರಾರು ಕೋಟಿ ರೂ. ಅವ್ಯವಹಾರ ನಡೆಸಿದ ಆರೋಪ ಸಂಬಂಧ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಯನ್ನು ಬಂಧಿಸಿತ್ತು. ಸೋಮವಾರ ಶಾಸಕ ವೀರೇಂದ್ರ ಜೈಲು ಸೇರಿದ್ದರು.