ಶಿಕ್ಷಕರ ವೃತ್ತಿಯು ಅತ್ಯಂತ ಪವಿತ್ರವಾದುದು. ಈ ಸಮಾಜದಲ್ಲಿ ಎಲ್ಲರಿಗೂ ದೊರೆಯದ ಈ ಸೇವಾ ವೃತ್ತಿ ಶಿಕ್ಷಕಕರಿಗೆ ಮಾತ್ರ ಲಭಿಸಿದೆ ಎಂದು ಬಂದರು, ಮೀನುಗಾರಿಕೆ, ಒಳನಾಡು ಜಲ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಹೇಳಿದರು.ಅವರು ಕುಮಟಾದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ ಒಬ್ಬ ವ್ಯಕ್ತಿ ಸಮಾಜದಲ್ಲಿ ಉತ್ತಮ ನಾಗರೀಕನಾಗಿದ್ದಾನೆ ಎಂದರೆ ಅದಕ್ಕೆ ಕಾರಣ ಆತನಿಗೆ ವಿದ್ಯೆ ನೀಡಿದ ಶಿಕ್ಷಕರೇ ಆಗಿರುತ್ತಾರೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ದೇಶವನ್ನು ನಿರ್ಮಿಸುವ ಶಿಲ್ಪಿಗಳಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶಿಕ್ಷಣ ಸಚಿವರ ಗಮನ ಸೆಳೆದು ಅವರಿಗೆ ಪರಿಹಾರವನ್ನು ನೀಡಲಾಗುವುದು ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? https://eedina.com/karnataka/karwar-free-military-training-for-backward-class-youth-aspiring-to-join-the-indian-army/2025-09-04/
ಕಾರವಾರ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಗಳು ಕಳೆದ ಎರಡು ವರ್ಷಗಳಲ್ಲಿ ಉತ್ತಮ ಶೈಕ್ಷಣಿಕ ಪ್ರಗತಿ ಸಾಧಿಸುತ್ತಿವೆ. ಮಕ್ಕಳಲ್ಲಿ ಉತ್ತಮ ಚಾರಿತ್ರ್ಯ ನಿರ್ಮಾಣ ಕಾರ್ಯ ಶಿಕ್ಷಕರಿಂದಲೇ ಆರಂಭವಾಗಲಿದ್ದು, ಪುಸ್ತಕದ ಆಚೆಯ ಜ್ಞಾನದ ಬಗ್ಗೆ ಮಕ್ಕಳನ್ನು ಅಣಿಗೊಳಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರೀಯಾ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ದೀಪನ್,ಕುಮಟಾ ಉಪವಿಭಾಗಾಧಿಕಾರಿ ಶ್ರವಣಕುಮಾರ, ಶಿಕ್ಷಣ ಇಲಾಖೆಯ ನಿರ್ದೇಶಕ ಈಶ್ವರ ನಾಯ್ಕ, ಪ್ರಾಚಾರ್ಯ ಎನ್. ಅರ್. ಹೆಗಡೆ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆನಂದ ಗಾಂವಕರ್, ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತಿತರರು ಇದ್ದರು.