ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧ ವ್ಯಕ್ತಪಡಿಸಿ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೂವರು ಯುವಕರು ‘ಶರಾವತಿ ಉಳಿಸಿ’ ಎಂಬ ಪೋಸ್ಟರ್ ಪ್ರದರ್ಶಿಸಿದ್ದಾರೆ. ಇದು ಯೋಜನಾ ವಿರೋಧಿ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದೆ.
ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಏಷ್ಯಾ ಕಪ್ ಸೂಪರ್ 4 ವಿಭಾಗದ ಪಂದ್ಯದ ವೇಳೆ, ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಈ ಯುವಕರು ‘ಶರಾವತಿ ಉಳಿಸಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬೇಡ’ ಎಂಬ ಬರಹವಿರುವ ಫಲಕವನ್ನು ಪ್ರದರ್ಶಿಸಿದ್ದಾರೆ. ಈ ದೃಶ್ಯವು ನೇರಪ್ರಸಾರದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋಗಳು ವೈರಲ್ ಆಗಿವೆ. ಯುವಕರ ಗುರುತು ಇನ್ನೂ ತಿಳಿದುಬಂದಿಲ್ಲ.ಈ ಪೋಸ್ಟರ್ ಪ್ರದರ್ಶನವು ಹೋರಾಟಗಾರರಲ್ಲಿ ಹೊಸ ಭರವಸೆ ಮೂಡಿಸಿದ್ದು, ‘ಶರಾವತಿ ಉಳಿಸಿ ಹೋರಾಟ ಸಮಿತಿ’ಯ ಪ್ರಮುಖರು ಇದನ್ನು ಸ್ವಾಗತಿಸಿದ್ದಾರೆ.
“ಯುವಜನರು ಜಾಗೃತರಾಗುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಯೋಜನೆಯ ವಿರುದ್ಧ ಧ್ವನಿ ಎತ್ತುತ್ತಿರುವುದು ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದೆ” ಎಂದು ಹೋರಾಟ ಸಮಿತಿಯ ಮುಖಂಡರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ ತಾಲೂಕಿನಲ್ಲಿ ಮತ್ತೆ ಅಕ್ರಮ ಬಡ್ಡಿದಂಧೆ: ಸಂತ್ರಸ್ತನ ದೂರಿನ ಅನ್ವಯ ಪ್ರಕರಣ ದಾಖಲು https://eedina.com/karnataka/uttara-kannada-decades-of-struggle-for-land-forest-dwellers-await-a-roof/2025-09-12/
ಶೀಘ್ರದಲ್ಲೇ ‘ಎಕ್ಸ್’ ಅಭಿಯಾನಕ್ಕೆ ಸಿದ್ಧತೆ
ಶರವಾತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿರುದ್ಧ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಲು, ಉತ್ತರ ಕನ್ನಡ ಮತ್ತು ಶಿವಮೊಗ್ಗ ಭಾಗದ ಯುವಕರು ಟ್ವಿಟರ್ (ಈಗ ಎಕ್ಸ್) ಅಭಿಯಾನ ಪ್ರಾರಂಭಿಸಲು ಮುಂದಾಗಿದ್ದಾರೆ. ‘ಸ್ಟಾಪ್ ಶರಾವತಿ ಪಂಪ್ಡ್ ಸ್ಟೋರೇಜ್’ ಎಂಬ ಹ್ಯಾಶ್ಟ್ಯಾಗ್ ಬಳಸಿ ಈ ಅಭಿಯಾನ ನಡೆಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕರೆ ನೀಡಲಾಗಿದ್ದು, ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.