ವಿಜಯನಗರದ ಕೂಡ್ಲಿಗಿ ಪಟ್ಟಣದ ಉಡಸಲಮ್ಮನ ಕಟ್ಟೆ ಏರಿಮೇಲಿನ ಜಾಗವನ್ನು ಖಾಸಗಿಐವರು ಒತ್ತುವರಿ ಮಾಡಿ ಅನಧಿಕೃತವಾಗಿ ನಿರ್ಮಿಸಿಕೊಂಡ ಮನೆಗಳನ್ನು ಕೂಡಲೇ ತೆರವುಗಳಿಸಬೇಕು ಎಂದು ತಹಶೀಲ್ದಾರ್ ವಿ ಕೆ ನೇತ್ರಾವತಿ ಸೂಚನೆ ನೀಡಿದರು. ಉಡಸಲಮ್ಮನ ಕಟ್ಟೆಯನ್ನು ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಕೆರೆಯ ಭೂ ಸರ್ವೆ ನಡೆಸಿ ಮಾತನಾಡಿ, “ಒತ್ತುವಾರಿಯಾದ ಮನೆ ಖಾಲಿ ಮಾಡಲು ಈಗಾಗಲೇ ಕಂದಾಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದರೂ, ಅತಿಕ್ರಮಣಕಾರ ಅನೇಕ ಕುಟುಂಬಗಳು ಅದನ್ನು ಉಲ್ಲಂಘಿಸಿ ಇಲ್ಲಿಯೇ ವಾಸವಾಗಿವೆ. ಮನೆ ಇಲ್ಲದ 37 ಕುಟುಂಬಗಳ ಪಟ್ಟಿ ಮಾಡಲಾಗಿದೆ. ಆದರೆ, ಸ್ವಂತ ಮನೆ ಇದ್ದವರೂ ಇಲ್ಲಿ ಅನಧಿಕೃತವಾಗಿ ಮನೆ ಮಾಡಿಕೊಂಡು ವಾಸವಿದ್ದವರು 15 ದಿನಗಳಲ್ಲಿ ಇಲ್ಲಿನ ಮನೆ ಖಾಲಿ ಮಾಡಬೇಕು” ಎಂದು ಹೇಳಿದರು.
ಪಟ್ಟಣದ ಹೊರವಲಯದ ಕರೇಕಲ್ಲು ಬಗಡಿ ಮೇಲಿನ ಸರ್ಕಾರಿ ಜಾಗವನ್ನು ಮನೆ ಇಲ್ಲದವರಿಗಾಗಿ ಗುರುತಿಸಲಾಗಿದೆ. ಒತ್ತುವರಿಯಾದ ಉಡುಸಲಮ್ಮನ ಕೆರೆ 27 ಎಕರೆಯಷ್ಟಿದ್ದು, ಕೆರೆ ತೆರವು ಮಾಡಲು ತಿಳಿಸಿದರು.
ಇದನ್ನೂ ಓದಿ: ವಿಜಯನಗರ | ಪ್ರಜಾಪ್ರಭುತ್ವದಲ್ಲಿ ಪ್ರಶ್ನೆಮಾಡಿ ದೌರ್ಜನ್ಯಕ್ಕೆ ಒಳಗಾಗುವಂತಾಗಿದೆ: ಚಿನ್ನಸ್ವಾಮಿ ಸೋಸಲೆ
ಈ ವೇಳೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಮುಖ್ಯಾಧಿಕಾರಿ ಎಚ್. ದಾದಪೀರ್, ಸದಸ್ಯ ಟಿ. ವೆಂಕಟೇಶ, ಮುಖಂಡರಾದ ಬಿ. ಭೀಮೇಶ್, ಗ್ಯಾಸ್ ವೆಂಕಟೇಶ, ಬಿ.ಕೆ. ರಾಘವೇಂದ್ರ, ತಾಲೂಕು ಭೂ ಮಾಪನಾಧಿಕಾರಿ ಮಂಜುನಾಥ, ಕಂದಾಯ ನಿರೀಕ್ಷಕ ಪ್ರಭು ತಳವಾರ ಹಾಗೂ ಇತರರು ಉಪಸ್ಥಿತರಿದ್ದರು.