ವರ್ಣ, ವರ್ಗ, ಲಿಂಗರಹಿತ ಸಮಾಜ ಸ್ಥಾಪನೆಯು ಗಾಂಧಿಯ ಕನಸಾಗಿತ್ತು. ಸ್ವದೇಶಿ ಚಳವಳಿ, ಸ್ವಾವಲಂಬನೆ ಹಾಗೂ ಗೃಹ ಕೈಗಾರಿಕೆಗಳು ಮುಂಚೂಣಿಗೆ ಬರಬೇಕು. ದುಡಿಯುವ ವರ್ಗಗಳು ಯಾರಿಗೂ ಅಧೀನರಾಗದೆ ದುಡಿದು ಬದುಕುವಂತಾಗಬೇಕೆಂದು ಮಹಾತ್ಮ ಗಾಂಧಿಯವರು ಯಾವಾಗಲೂ ಚಿಂತಿಸುತ್ತಿದ್ದರು ಎಂದು ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ ಅವರು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಕ್ರಿಯಾಶಕ್ತಿಯ ಸಭಾಭವನದಲ್ಲಿ ಮಹಾತ್ಮಾಗಾಂಧಿ ಜಯಂತಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಗಾಂಧೀಜಿ ‘ಸ್ವತಂತ್ರ ಭಾರತದ ಪರಿಕಲ್ಪನೆ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
“ಲಾಲ್‌ಬಹಾದ್ದೂರ್ ಶಾಸ್ತ್ರಿಯವರು ಹಸಿರು ಕ್ರಾಂತಿಯ ಮೂಲಕ `ಜೈಜವಾನ್ ಜೈಕಿಸಾನ್’ ಎಂದು ಹೇಳಿದರೆ, ಗಾಂಧೀಜಿಯವರು ರೈತರೇ ಈ ದೇಶದ ಬೆನ್ನೆಲುಬು ಎನ್ನುತ್ತಾರೆ. ಸಬಲರಾಗಿ, ಸ್ವತಂತ್ರರಾಗಿ, ಸ್ವಾವಲಂಬಿಗಳಾಗಿ ತಮಗೆ ಬೇಕಾದ ವಸ್ತುಗಳನ್ನು ಭಾರತೀಯರು ತಾವೇ ಉತ್ಪಾದಿಸಿಕೊಳ್ಳಬೇಕೆಂದು ಇಬ್ಬರೂ ಕನಸು ಕಂಡಿದ್ದರು. ಎಂದು ಹೇಳಿದರು.
“ಸತ್ಯವೇ ಗಾಂಧಿಯವರ ಉಸಿರಾಗಿತ್ತು. ಸತ್ಯವಾದ ನಡವಳಿಕೆ, ಸತ್ಯವಾದ ಬದುಕು, ಸ್ವತಂತ್ರ ಆಲೋಚನೆ, ಅಧೀನರಹಿತ ಬದುಕು ಇವೆಲ್ಲವೂ ಸತ್ಯದ ತಳಹದಿ ಎಂದು ಗಾಂಧಿಯವರು ನಂಬಿದ್ದರು. ನೇಯುವುದು, ನೂಲುವುದನ್ನು ಭಾರತದ ಆತ್ಮಸಾಕ್ಷಿಯಾಗಿ ನಾನು ಮಾಡುತ್ತೇನೆಂದು ಹೇಳುತ್ತಿದ್ದರು. ಗಾಂಧಿ, ಶಾಸ್ತ್ರಿ, ಅಂಬೇಡ್ಕರ್ ಇವರಂತಹ ಮಹಾತ್ಮರು ನಮಗೆ ಸ್ವಾತಂತ್ರ್ಯ, ಬದುಕು, ಸಂವಿಧಾನ, ಹಕ್ಕುಗಳನ್ನು ಕೊಟ್ಟಿದ್ದಾರೆ. ಇಂತಹ ಮಹಾತ್ಮರನ್ನು ಸ್ಮರಿಸಿ ಅವರ ಭಾವಚಿತ್ರಕ್ಕೆ ಹಾರ ಹಾಕುವ ಬದಲು ಅವರ ಜೀವನದ ಮೌಲ್ಯ ಆದರ್ಶಗಳನ್ನು ನಮ್ಮ ಬದುಕಿನ ಜೀವನದ ಭಾಗವಾಗಿ ಅಳವಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.

ಎನ್‌ಎಸ್‌ಎಸ್ ಘಟಕದ ಸಂಯೋಜನಾಧಿಕಾರಿ ಡಾ.ಎ.ಶ್ರೀಧರ ಅವರು ಮಾತನಾಡಿ, “ಹಿಂದ್ ಸ್ವರಾಜ್ ಹಾಗೂ ಮೈ ಎಕ್ಸ್ಪೆರಿಮೆಂಟ್ ವಿತ್‌ಟ್ರುಥ್ ಗಾಂಧಿಯವರ ಬಹಳ ಪ್ರಮುಖ ಕೃತಿಗಳಾಗಿವೆ. ಗ್ರಾಮ ಸ್ವರಾಜ್ಯದ ಕಲ್ಪನೆಯೊಂದಿಗೆ ಆಧುನಿಕತೆಗೂ ಪ್ರಾಮುಖ್ಯತೆ ನೀಡಿದ್ದರು. ಆದರೆ ಆಧುನಿಕತೆಯ ದಾಸರಾಗಬಾರದು ಎಂಬುದು ಗಾಂಧಿಯವರ ಅಭಿಪ್ರಾಯವಾಗಿತ್ತು” ಎಂದು ಹೇಳಿದರು.
ಎನ್‌ಎಸ್‌ಎಸ್ ಘಟಕದ ಸಂಯೋಜನಾಧಿಕಾರಿಗಳಾದ ಡಾ.ಎ.ಶ್ರೀಧರ ಅವರ ನೇತೃತ್ವದಲ್ಲಿ ಗಾಂಧಿಜಯಂತಿ ಪ್ರಯುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಪ್ರವಾದಿ ಮಹಮ್ಮದ್ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್
ಆರ್ ವಿ ದೇಶಪಾಂಡೆ, ಉಪಕುಲಸಚಿವ ಬಿ.ಗುರುಬಸಪ್ಪ, ಮಾಹಿತಿ ಕೇಂದ್ರದ ಮುಖ್ಯಸ್ಥ ಶಕುಂತಲಾ ಚೌಡನಾಯ್ಕ, ಕುಲಪತಿಯವರ ಆಪ್ತಕಾರ್ಯದರ್ಶಿ ಎ ಎಂ ಕೃಪಾಶಂಕರ್, ಎಂಜಿನಿಯರ್ ಚಂದ್ರಶೇಖರಪ್ಪ, ಡಾ. ಪಿ ಕೃಷ್ಣಮೂರ್ತಿ, ನಿವೃತ್ತ ಉಪನಿರ್ದೇಶಕಿ ಡಾ. ಡಿ ಮೀನಾಕ್ಷಿ ಸೇರಿದಂತೆ ವಿದ್ಯಾರ್ಥಿಗಳು, ಸಿಬ್ಬಂದಿಗಳು ಇದ್ದರು.