ನಾಡೋಜ ಪ್ರಶಸ್ತಿ ಪುರಸ್ಕೃತೆ ಮಾತೆ ಸುಕ್ರಿ ಬೊಮ್ಮಗೌಡ ಅವರ ನಿಧನಕ್ಕೆ (ಫೆ.13) ವಿಜಯನಗರದ ಹಂಪಿ ಕನ್ನಡ ವಿಶ್ವವಿದ್ಯಾಲಯ ಸಂತಾಪ ಸೂಚಿಸಿತು. ನಗರದ ಕ್ರಿಯಾಶಕ್ತಿ ಕಟ್ಟಡದ ಸಿಂಡಿಕೇಟ್ ಸಭಾಂಗಣದಲ್ಲಿ ಅವರ ಗೌರವಾರ್ಥವಾಗಿ ಸಂತಾಪ ಸೂಚಕ ಸಭೆ ಆಯೋಜಿಸಲಾಗಿತ್ತು.
ಈ ವೇಳೆ ವಿವಿಯ ಕುಲಪತಿ ಡಾ. ಡಿ ವಿ ಪರಮಶಿವಮೂರ್ತಿ ಮಾತನಾಡಿ, “ಹಾಲಕ್ಕಿ ಒಕ್ಕಲಿಗ ಬುಡಕಟ್ಟು ಮೂಲತಃ ಮಾತೃಪ್ರಧಾನ ಸಮಾಜವಾಗಿದೆ. ಅತ್ಯಂತ ಪ್ರತಿಭಾವಂತ ಕಲಾವಿದೆಯಾದ ಸುಕ್ರಿಯವರು ಪರಿಸರ ಚಳುವಳಿ, ಮದ್ಯಪಾನ ವಿರೋಧಿ ಚಳುವಳಿಗಳಲ್ಲಿ ನಾಯಕಿಯಾಗಿ ಹೋರಾಟ ನಡೆಸಿದ್ದಾರೆ. ನಾಡಿನ ಶೋಷಿತರನ್ನು ಪ್ರತಿನಿಧಿಸುತ್ತ ಬಂದಿದ್ದಾರೆ. ಹಾಲಕ್ಕಿಗಳ ಪಾರಂಪರಿಕ ತಿಳಿವಳಿಕೆ ತನ್ನ ತಲೆಮಾರಿಗೆ ಮುಗಿದು ಹೋಗಬಾರದೆಂದು ಸುಕ್ರಿಯವರು ಹಾಲಕ್ಕಿ ಮಹಿಳೆಯರನ್ನು ಒಂದುಗೂಡಿಸಿ ತನ್ನ ಸಮುದಾಯದ ಪ್ರಾಚೀನ ಕುಣಿತಗಳಾದ ತಾರ್ಲೆ, ಪಗಡೆ, ಬಿದರಂಡೆ ಮುಂತಾದ ನೃತ್ಯ ಪ್ರಕಾರಗಳನ್ನು ಕಲಿಸುವುದರ ಜೊತೆಗೆ ಅನೇಕ ಕಡೆ ತಾವೇ ತಮ್ಮ ತಂಡಗಳನ್ನು ಕರೆದುಕೊಂಡು ಹೋಗಿ ಹಾಲಕ್ಕಿಗಳ ಪರಂಪರೆಯನ್ನು ಜೀವಂತವಾಗಿಡಲು ಅವಿರತವಾಗಿ ಶ್ರಮಿಸಿದ್ದಾರೆ” ಎಂದರು.

“ಸುಕ್ರಿ ಬೊಮ್ಮಗೌಡ ಅವರು ಸ್ವತಃ ಮಾದೇವರಾಯ, ಚಂದನರಾಯ, ರಾಮ-ಲಕ್ಷ್ಮಣ, ಐರಾವತ, ಕುಂತಿ ಕಥೆ, ಸಿರಿಕವುಲಿ ಮುಂತಾದ ಕಥನ ಕಾವ್ಯಗಳನ್ನು ಮತ್ತು ಬಲೀಂದ್ರರಾಯ, ಗೋವಿಂದರಾಯ ಹಾಗೂ ಕರಿದೇವರ ಕುರಿತ ಮಹಾಕಥನಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಇವರಿಗೆ ಕನ್ನಡ ವಿಶ್ವವಿದ್ಯಾಲಯವು 2008ರಲ್ಲಿ ನಡೆದ 16ನೇ ನುಡಿಹಬ್ಬದಲ್ಲಿ ಪ್ರತಿಷ್ಠಿತ ನಾಡೋಜ ಗೌರವ ಪದವಿಯನ್ನು ಪ್ರದಾನ ಮಾಡಿದೆ. ಸುಕ್ರಿಯವರ ನಿಧನದಿಂದ ಜಾನಪದ ಲೋಕವು ಬಡವಾಗಿದೆ” ಎಂದು ಸಂತಾಪ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ?: ವಿಜಯನಗರ | ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ; ಸಾರ್ವಜನಿಕರ ಪರದಾಟ
ಸಭೆಯಲ್ಲಿ ವಿವಿ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ, ಉಪಕುಲಸಚಿವ ಡಾ. ಎ ವೆಂಕಟೇಶ, ಸಹಾಯಕ ಕುಲಸಚಿವ ಗುರುಬಸಪ್ಪ, ಸಹಾಯಕ ನಿರ್ದೆಶಕ ಎಸ್ ಕೆ ವಿಜಯೇಂದ್ರ, ಅಧ್ಯಾಪಕ ಡಾ. ಎಲ್ ಶ್ರೀನಿವಾಸ, ಡಾ. ಮೋಹನ ಪಂಚಾಳ ಹಾಗೂ ಸಿಬ್ಬಂದಿಗಳು ಇದ್ದರು.
