ಪ್ರಸ್ತುತ ದಿನಗಳಲ್ಲಿ ಕೆಲವರು ಈ ನೆಲದ ಮೂಲ ಸಂಸ್ಕೃತಿಯನ್ನು ತಿರುಚಿ, ಇತಿಹಾಸವನ್ನು ಬದಲಿಸುವ ಹುನ್ನಾರ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ. ಆದರೆ ಈ ಹುನ್ನಾರದ ವಿರುದ್ಧ ನಡೆಯುವ ಪ್ರತಿರೋಧ ಸಂಘರ್ಷದ ಚಳವಳಿಗಳಿಗೆ ಕೊನೆಯಿಲ್ಲ ಎಂದು ವಿಜಯಪುರ ಚಿಂತಕ ಡಾ. ಜೆ ಎಸ್ ಪಾಟೀಲ್ ವಿಷಾದ ವ್ಯಕ್ತಪಡಿಸಿದರು.
ಕನ್ನಡ ವಿಶ್ವವಿದ್ಯಾಲಯದ ದಲಿತ ಸಂಸ್ಕೃತಿ ಅಧ್ಯಯನ ಪೀಠವು ಭುವನ ವಿಜಯ ಸಭಾಂಗಣದಲ್ಲಿ ಆಯೋಜಿಸಿದ್ದ 2569ನೇ ಭಗವಾನ್ ಗೌತಮ ಬುದ್ಧ, 151ನೇ ಶಾಹು ಮಹಾರಾಜ ಹಾಗೂ 141ನೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಸಮಕಾಲೀನ ಸಂದರ್ಭದಲ್ಲಿ ಬುದ್ಧ ಹಾಗೂ ಅವರ ಚಿಂತನೆಗಳ ಅವಶ್ಯಕತೆ ಎನ್ನುವ ಉಪನ್ಯಾಸ ನೀಡಿದರು.
“ಬ್ರಿಟಿಷರ ವಿರುದ್ಧ ಹೋರಾಡಿದ ಚಳವಳಿಯನ್ನ ಸ್ವತಂತ್ರ ಚಳವಳಿ ಎಂದು ಭಾವಿಸಲಾಗಿದೆ. 3500 ವರ್ಷಗಳ ಹಿಂದೆ ಮೊದಲು ಆರ್ಯ ದ್ರಾವಿಡರ ನಡುವಿನ ಸಂಘರ್ಷ, ಎರಡನೆಯದಾಗಿ ವೈದಿಕ ಸಂಸ್ಕೃತಿಯ ವಿರುದ್ಧ ಹೋರಾಡಿದ ಬುದ್ಧ ಮತ್ತು ಮಹಾವೀರರ ಚಳವಳಿ, ಮೂರನೆಯದಾಗಿ ವೈದಿಕ ಧರ್ಮದ ಪುನರುತ್ಥಾನ ಹಾಗೂ ಬಹುಜನರ ಶೋಷಣೆ ವಿರುದ್ಧ ಬಸವಣ್ಣನವರ ಹೋರಾಟ ಹಾಗೂ ನಾಲ್ಕನೆಯದಾಗಿ ಬ್ರಿಟಿಷರ ವಿರುದ್ಧ ಹೋರಾಟ ಸ್ವತಂತ್ರ ಚಳವಳಿಗಳು ನಮ್ಮ ನೆಲದ ಪ್ರತಿರೋಧ ಚಳವಳಿಗಳಾಗಿವೆ. ಪ್ರಮುಖವಾಗಿ ಈ ಸಮಯದಲ್ಲಿ ಮುಸ್ಲಿಂ ಸಾಮ್ರಾಜ್ಯಗಳು 700 ರಿಂದ 800 ವರ್ಷಗಳ ಕಾಲ ಆಡಳಿತ ನಡೆಸಿದರು. ಮುಸ್ಲಿಮ್ ಸಾಮ್ರಾಜ್ಯದ ಆಡಳಿತ ವಿರುದ್ಧ ಯಾವುದೇ ಚಳವಳಿಗಳು ಕಂಡುಬರುವುದಿಲ್ಲ. ಏಕೆಂದರೆ, ಅಂದು ಆಡಳಿತದಲ್ಲಿದ್ದ ಕೆಲವರು ತಮ್ಮ ಹಿತಾಸಕ್ತಿಯನ್ನು ಕಾಯ್ದುಕೊಂಡು, ಈ ನೆಲವನ್ನು ಪರಕೀಯರಿಗೆ ಅಡವಿಟ್ಟಿದ್ದರು. ಈ ಸತ್ಯ ಗೊತ್ತಾಗಬಾರದೆಂದು ಮೊಘಲರ ಇತಿಹಾಸವನ್ನು ಕಲಿಸಬಾರದು ಎಂದು ಕೆಲ ರಾಷ್ಟ್ರೀಯ ವಾದಿಗಳು ಮಾತನಾಡುತ್ತಿರುವುದು ಸೋಜಿಗದ ಸಂಗತಿ. ಪ್ರಸ್ತುತ ದಿನಗಳಲ್ಲಿ ಯುವಕರು ಬುದ್ಧನ ಚಿಂತನೆಗಳನ್ನು ತಮ್ಮಲ್ಲಿ ರೂಢಿಸಿಕೊಂಡು ಸಾಮಾಜಿಕ ಪಿಡುಗುಗಳ ವಿರುದ್ಧ ಪ್ರತಿರೋಧ ಒಡ್ಡುವ ಕೆಲಸ ಮಾಡಬೇಕು” ಎಂದು ತಿಳಿಸಿದರು.
ದಲಿತ ಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕ ಪ್ರೊ. ಎನ್ ಚಿನ್ನಸ್ವಾಮಿ ಸೋಸಲೆ ʼಶಾಹು ಮಹಾರಾಜ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ಪ್ರಭುತ್ವ ಮತ್ತು ಜನತೆʼ ವಿಷಯ ಕುರಿತ ಉಪನ್ಯಾಸ ನೀಡುತ್ತಾ ಮಾತನಾಡಿ, “ಆಧುನಿಕ ಅಂಬೇಡ್ಕರನ್ನಾಗಿ ರೂಪಿಸಿದವರಲ್ಲಿ ಶಾಹು ಮಹಾರಾಜರು ಕೂಡ ಒಬ್ಬರು. ತಮ್ಮ ಸಂಸ್ಥಾನದಲ್ಲಿ ತಾವೇ ಮೊದಲ ಪ್ರಜೆಯಾಗಿ ನಡೆದುಕೊಂಡವರು. ಇನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಂಸ್ಥಾನದಲ್ಲಿ ಪಂಚಮ ಶಾಲೆಗಳನ್ನು ತೆರೆದು, ಶಿಕ್ಷಣದ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದರು” ಎಂದು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ವಿಜಯ್ ಪೂಣಚ್ಚ ತಂಬಂಡ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಶೋಷಣೆ ಅವಧಿ ಹೆಚ್ಚಾಗುತ್ತಿದ್ದು, ಎಲ್ಲೇ ಹೋದರು ದಲಿತರು ಇದಕ್ಕೆ ಬಲಿಯಾಗುತ್ತಿದ್ದಾರೆ. ಪ್ರಜ್ಞಾವಂತ ನಾವುಗಳು ಏನು ಮಾಡುತ್ತಿದ್ದೇವೆ” ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ವಿಜಯನಗರ | ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯ ಸಂಗ್ರಹದ ದಾರಿದೀಪ: ಡಾ. ಎಂ ಎಸ್ ಮದಭಾವಿ
ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ ವಿ ಪರಮಶಿವಮೂರ್ತಿ ಮಾತನಾಡಿ, “ಗೌತಮ ಬುದ್ಧ ಹಾಗೂ ಬಸವಾದಿ ಶರಣರು ಭಾರತದಲ್ಲಿ ಜನಿಸಿರುವುದು ನಮ್ಮ ಪುಣ್ಯ. ಇವರು ಇಲ್ಲದಿದ್ದರೆ ಇಂದು ನಾವು ಯಾವ ದಿಕ್ಕಿನಲ್ಲಿ ನಡೆಯುತ್ತಿದ್ದೆವು ಎಂದು ಚಿಂತಿಸಬೇಕಾಗುತ್ತದೆ. ಈ ಮಹನೀಯರು ತಮ್ಮ ಶಕ್ತಿಮೀರಿ ಸಮಾಜದ ಒಳಿತಿಗಾಗಿ ಶ್ರಮಿಸಿದವರು. ಇವರ ಆಲೋಚನೆ ಮತ್ತು ತತ್ವಾದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕಾಗಿದೆ. ಇಂದು ಒಳ ಮೀಸಲಾತಿಯ ಕುರಿತು ತುಂಬಾ ಚರ್ಚೆಗಳು ನಡೆಯುತ್ತಿದ್ದು, ಆರ್ಥಿಕ ದೃಷ್ಟಿಯಿಂದ ನೋಡಿದರೆ ಬೇಡ ಎಂದು ವ್ಯಕ್ತವಾಗುತ್ತದೆ. ಆದರೆ ಸಾಮಾಜಿಕ ದೃಷ್ಟಿಕೋನದಿಂದ ನೋಡಿದಾಗ ಒಳ ಮೀಸಲಾತಿ ಅಗತ್ಯತೆ ನಮಗೆ ಸ್ಪಷ್ಟವಾಗಿ ಗೋಚರಿಸುತ್ತದೆ” ಎಂದು ಎಂದರು.
ಕಾರ್ಯಕ್ರಮದಲ್ಲಿ ಪ್ರೊ. ಪಿ ಮಹಾದೇವಯ್ಯ, ಹಿರಿಯ ಪ್ರಾಧ್ಯಾಪಕರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಬೋಧಕ ಬೋಧಕೇತರ ಸಿಬ್ಬಂದಿಗಳು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಇತರರು ಇದ್ದರು.